ತಮಿಳುನಾಡು| ಹಕ್ಕಿ ಜ್ವರದಿಂದ ನೂರಾರು ಕಾಗೆಗಳು ಸಾವು: ಸರಕಾರದಿಂದ ಸಲಹಾಸೂಚನೆ ಬಿಡುಗಡೆ
Photo: India Today
ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಹಕ್ಕಿ ಜ್ವರ(H5N1) ಸ್ಫೋಟಗೊಂಡಿದ್ದು, ನಗರದಾದ್ಯಂತ ನೂರಾರು ಕಾಗೆಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹೀಗಾಗಿ, ಈ ಪ್ರಾಂತ್ಯದಲ್ಲಿ ಹಕ್ಕಿ ಜ್ವರ ಹರಡುವ ಭೀತಿ ಎದುರಾಗಿದೆ. ಇದರ ಬೆನ್ನಿಗೇ, ಹಕ್ಕಿ ಜ್ವರವನ್ನು ನಿಯಂತ್ರಿಸಲು ಚೆನ್ನೈನ ಆರೋಗ್ಯಾಧಿಕಾರಿಗಳು ಸಲಹಾಸೂಚನೆ ಬಿಡುಗಡೆ ಮಾಡಿದ್ದಾರೆ.
ಹಕ್ಕಿ ಜ್ವರ ಮತ್ತಷ್ಟು ಹರಡದಂತೆ ತಡೆಯಲು ಸುರಕ್ಷತಾ ಶಿಷ್ಟಾಚಾರಗಳನ್ವಯ ಸತ್ತ ಕಾಗೆಗಳು ಅಥವಾ ಕೋಳಿಗಳ ಕಳೇಬರಗಳನ್ನು ಸುಡಬೇಕು ಅಥವಾ ಆಳವಾಗಿ ಹೂಳಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮೃತ ಹಕ್ಕಿಗಳನ್ನು ನೇರವಾಗಿ ಮುಟ್ಟಬಾರದು ಎಂದು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಆರೋಗ್ಯಾಧಿಕಾರಿಗಳು, ಹೊಸದಾಗಿ ಮೃತಪಟ್ಟ ಪಕ್ಷಿಗಳ ಬಗ್ಗೆ ತಕ್ಷಣವೇ ಸ್ಥಳೀಯ ಪ್ರಾಧಿಕಾರಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಸಾವಿರಾರು ಕಾಗೆಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿರುವ ಬೆನ್ನಿಗೇ, ತಮಿಳುನಾಡಿನ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಪಶು ಸಂಗೋಪನಾ ಸಚಿವಾಲಯ, ಸೋಂಕು ವ್ಯಾಪಿಸದಂತೆ ನಿಯಂತ್ರಿಸಲು ತಕ್ಷಣವೇ ಸಮಗ್ರ ಕ್ಷೇತ್ರ ಪರಿಶೀಲನೆಯನ್ನು ನಡೆಸಬೇಕು ಎಂದು ಸೂಚಿಸಿದೆ.