×
Ad

ಟೆಕ್ಕಿ ಯುವತಿಗೆ ಚಿತ್ರಹಿಂಸೆ ನೀಡಿ ಬೆಂಕಿ ಹಚ್ಚಿ ಹತ್ಯೆಗೈದ ಸಹಪಾಠಿ

Update: 2023-12-25 16:08 IST

ಆರ್‌ ನಂದಿನಿ / ವೆಟ್ರಿಮಾರನ್‌ (Photo:NDTV)

ಚೆನ್ನೈ: ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ ತಮಿಳುನಾಡಿನ 24 ವರ್ಷದ ಯುವತಿಯನ್ನು ಆಕೆಯ ಹುಟ್ಟುಹಬ್ಬ ಆಚರಣೆಯ ನೆಪದಲ್ಲಿ ಆಹ್ವಾನಿಸಿದ ಆಕೆಯ ಮಾಜಿ ಸಹಪಾಠಿ, ನಂತರ ಆಕೆಯನ್ನ ಕಟ್ಟಿ ಹಾಕಿ, ಬ್ಲೇಡಿನಿಂದ ಇರಿದು ಜೀವಂತವಾಗಿ ಸುಟ್ಟು ಹಾಕಿದ ಬರ್ಬರ ಘಟನೆ ವರದಿಯಾಗಿದೆ. ಯುವತಿಯನ್ನು ವಿವಾಹವಾಗಲೆಂದೇ ಲಿಂಗ ಬದಲಾವಣೆ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಎಂದು ವರದಿಯಾಗಿದೆ.

ಚೆನ್ನೈ ಹೊರವಲಯದ ಕೆಳಂಬಕ್ಕಂ ಸಮೀಪದ ತಲಂಬೂರಿನಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ವೆಟ್ರಿಮಾರನ್‌ ಆಲಿಯಾಸ್‌ ಪಾಂಡಿ ಮಹೇಶ್ವರಿ ಎಂದು ಗುರುತಿಸಲಾಗಿದೆ. ಇಪ್ಪತ್ತನಾಲ್ಕು ವರ್ಷದ ಆರ್‌ ನಂದಿನಿ ಎಂಬ ಯುವತಿಗೆ ಬರ್ತ್‌ಡೇ ಸರ್‌ಪ್ರೈಸ್‌ ನೆಪದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿದ ಆತ ಆಕೆಯನ್ನು ಸರಪಳಿಯಿಂದ ಬಿಗಿದು ಚಿತ್ರಹಿಂಸೆ ನೀಡಿ ನಂತರ ಪೆಟ್ರೋಲ್‌ ಸುರಿದು ದಹಿಸಿದ್ದಾನೆ.

ಮಧುರೈ ಮೂಲದ ಯುವತಿ ಚೆನ್ನೈನಲ್ಲಿ ಸಂಬಂಧಿಕರೊಂದಿಗೆ ವಾಸವಾಗಿದ್ದಳು. ಲಿಂಗ ಬದಲಾವಣೆ ಶಸ್ತ್ರಕ್ರಿಯೆ ನಂತರ ಪಾಂಡಿ ಮಹೇಶ್ವರಿಯು ವೆಟ್ರಿಮಾರನ್‌ ಆಗಿದ್ದ ಹಾಗೂ ನಂದಿನಿಯನ್ನು ಮದುವೆಯಾಗಲು ಬಯಸಿದ್ದ.

ಇಬ್ಬರೂ ಮದುರೈಯಲ್ಲಿ ಒಟ್ಟಿಗೆ ಶಿಕ್ಷಣ ಪಡೆದಿದ್ದರು. ವೆಟ್ರಿಮಾರನ್‌ ಲಿಂಗ ಬದಲಾವಣೆ ಶಸ್ತ್ರಕ್ರಿಯೆಗೆ ಒಳಗಾದ ನಂತರವೂ ನಂದಿನಿ ಆತನೊಂದಿಗೆ ಗೆಳೆತನ ಮುಂದುವರಿಸಿದ್ದಳು. ಇಬ್ಬರೂ ಕೆಲ ಸಮಯ ತೊರೈಪಕ್ಕಂ ಎಂಬಲ್ಲಿನ ಖಾಸಗಿ ಐಟಿ ಸಂಸ್ಥೆಯಲ್ಲೂ ಕೆಲಸ ಮಾಡಿದ್ದರು.

ನಂದಿನಿ ಇತರರಲ್ಲಿ ಆಸಕ್ತಿ ಹೊಂದಿದ್ದಳೆಂದು ಅರಿವಾಗುತ್ತಲೇ ಸಂಶಯಗೊಂಡ ವೆಟ್ರಿಮಾರನ್‌ ಹುಟ್ಟುಹಬ್ಬದ ಸರ್‌ಪ್ರೈಸ್‌ ನೆಪದಲ್ಲಿ ಸಾಯಿಸಿದ್ದ. ಸರಪಳಿ ಬಿಗಿಯಲ್ಪಟ್ಟ ಸ್ಥಿತಿಯಲ್ಲಿಯೇ ಬೆಂಕಿಯಲ್ಲಿ ಧಗಧಗಿಸುತ್ತಿದ್ದ ನಂದಿನಿಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆ ಅಲ್ಲಿ ಮೃತಪಟ್ಟಿದ್ದಾಳೆ.

ಆರೋಪಿಯನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News