ಪೋಷಕರನ್ನು ನಿರ್ಲಕ್ಷಿಸುವ ಸರಕಾರಿ ನೌಕರರ ವೇತನ ಕಡಿತಗೊಳಿಸಲು ಕಾಯ್ದೆ ತರಲು ಮುಂದಾದ ತೆಲಂಗಾಣ ಸರಕಾರ
ಎ.ರೇವಂತ್ ರೆಡ್ಡಿ | Photo Credit : PTI
ಹೈದರಾಬಾದ್: ತಮ್ಮ ಪೋಷಕರನ್ನು ನಿರ್ಲಕ್ಷಿಸುವ ಸರಕಾರಿ ನೌಕರರ ವೇತನದಲ್ಲಿ ಶೇ. 10ರಿಂದ ಶೇ. 15ರವರೆಗೆ ಕಡಿತಗೊಳಿಸಿ, ಅದನ್ನು ನಿರ್ಲಕ್ಷ್ಯಕ್ಕೊಳಗಾದ ಪೋಷಕರಿಗೆ ನೀಡಲು ನೂತನ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಶನಿವಾರ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಘೋಷಿಸಿದರು.
ಎರಡನೆ ದರ್ಜೆ ನೌಕರರಾಗಿ ನೂತನವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕ ಪ್ರಮಾಣ ಪತ್ರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರೇವಂತ್ ರೆಡ್ಡಿ, ಸಮಸ್ಯೆಗಳೊಂದಿಗೆ ತಮ್ಮನ್ನು ಎದುರುಗೊಳ್ಳುವ ಜನರ ಜೊತೆ ಸಹಾನುಭೂತಿಯಿಂದ ನಡೆದುಕೊಳ್ಳಿ ಎಂದು ಅವರಿಗೆ ತಾಕೀತು ಮಾಡಿದರು.
“ನಾವು ಕಾನೂನೊಂದನ್ನು ಜಾರಿಗೆ ತರುತ್ತಿದ್ದು, ತಮ್ಮ ಪೋಷಕರನ್ನು ನಿರ್ಲಕ್ಷಿಸುವ ಸರಕಾರಿ ನೌಕರರ ವೇತನದಲ್ಲಿ ಶೇ. 10ರಿಂದ ಶೇ. 15ರಷ್ಟು ಕಡಿತಗೊಳಿಸಿ, ಅದನ್ನು ಅವರ ಪೋಷಕರ ಖಾತೆಗಳಿಗೆ ಜಮೆಗೊಳಿಸಲಾಗುವುದು. ಆ ಕಾಯ್ದೆಯನ್ನು ರಚಿಸಬೇಕಾದವರು ನೀವೇ ಆಗಿದ್ದೀರಿ. ನೀವು ಹೇಗೆ ತಿಂಗಳ ವೇತನ ಪಡೆಯುತ್ತೀರೊ, ಅದೇ ರೀತಿ ಆ ವೇತನದಲ್ಲಿ ನಿಮ್ಮ ಪೋಷಕರೂ ಕೂಡಾ ಆದಾಯ ಪಡೆಯುವುದನ್ನು ನಾವು ಖಾತರಿಗೊಳಿಸಲಿದ್ದೇವೆ” ಎಂದು ಅವರು ಘೋಷಿಸಿದರು.
ಈ ಕಾಯ್ದೆಯ ಕರಡನ್ನು ರಚಿಸಲು ಸಮಿತಿಯೊಂದನ್ನು ರಚಿಸುವಂತೆ ಮುಖ್ಯ ಕಾರ್ಯದರ್ಶಿ ರಾಮಕೃಷ್ಣ ರಾವ್ ಅವರಿಗೆ ರೇವಂತ್ ರೆಡ್ಡಿ ಸೂಚಿಸಿದರು.