ತಂದೆಯಿಂದಲೇ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಹತ್ಯೆ; ಕಾರಣವೇನು?
ರಾಧಿಕಾ ಯಾದವ್ (Photo: PTI)
ಗುರುಗ್ರಾಮ: 25 ವರ್ಷದ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಆಕೆಯ ತಂದೆ ದೀಪಕ್ ಯಾದವ್ ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಗುರುವಾರ ಬೆಳಿಗ್ಗೆ ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಅವರ ಮನೆಯಲ್ಲಿ ದುರ್ಘಟನೆ ನಡೆದಿದ್ದು, ರಾಧಿಕಾ ಅವರ ಚಿಕ್ಕಪ್ಪ ಕುಲದೀಪ್ ಯಾದವ್ ಅವರು ಈ ಬಗ್ಗೆ ದೂರನ್ನು ನೀಡಿದ್ದಾರೆ.
ತನ್ನ ಮಗಳ ಆದಾಯದಿಂದಲೇ ಬದುಕು ಸಾಗಿಸುತ್ತಿದ್ದೇನೆ, ಹಾಗೂ ಆಕೆಯ ಚಾರಿತ್ರ್ಯದ ಬಗ್ಗೆ ಗ್ರಾಮಸ್ಥರು ಪದೇ ಪದೇ ಪ್ರಶ್ನಿಸುತ್ತಿದ್ದರು ಎಂದು ದೀಪಕ್ ಅವರು ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾರೆ.
ಹಲವಾರು ಟ್ರೋಫಿಗಳನ್ನು ಗೆದ್ದಿದ್ದ ರಾಧಿಕಾ,ಒಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಟೆನಿಸ್ ಆಡಿದ್ದರು. ಪಂದ್ಯವೊಂದರಲ್ಲಿ ಭುಜಕ್ಕೆ ಗಾಯವಾದ ನಂತರ ಅವರು ಆಟವನ್ನು ನಿಲ್ಲಿಸಿ, ಟೆನಿಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದರು.
ಗ್ರಾಮಸ್ಥರ ಮಾತುಗಳಿಂದ ಬೇಸತ್ತಿದ್ದ ತಂದೆ ದೀಪಕ್, ರಾಧಿಕಾ ಅವರ ಬಳಿ ಅಕಾಡೆಮಿಯನ್ನು ನಿಲ್ಲಿಸುವಂತೆ ಪದೇ ಪದೇ ಹೇಳಿದ್ದರು ಎನ್ನಲಾಗಿದೆ.
ದೀಪಕ್ ತನ್ನ ಮಗಳು ಅಕಾಡೆಮಿಯನ್ನು ಮುಂದುವರಿಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದರು ಎಂದು ಅವರ ಚಿಕ್ಕಪ್ಪ ಕುಲದೀಪ್ ಯಾದವ್ ಅವರ ದೂರಿನ ಮೇರೆಗೆ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಘಟನೆ ನಡೆದ ದಿನದಂದು, ರಾಧಿಕಾರ ತಾಯಿ ಮಂಜು ಯಾದವ್ ಅವರ ಹುಟ್ಟು ಹಬ್ಬವಾಗಿದ್ದು, ತಾಯಿಗೆ ವಿಶೇಷ ಅಡುಗೆ ತಯಾರಿಸುವಾಗ ತಂದೆ ಹಿಂದಿನಿಂದ ಮೂರು ಸುತ್ತು ಗುಂಡು ಹೊಡೆದಿದ್ದಾರೆ ಎನ್ನಲಾಗಿದೆ.
ದೀಪಕ್ ಅವರ ಸಹೋದರ ಕುಲದೀಪ್ ಮತ್ತು ಅವರ ಮಗ ಪಿಯೂಷ್ ಅವರು ತಕ್ಷಣವೇ ರಾಧಿಕಾರನ್ನು ಏಷ್ಯಾ ಮರಿಂಗೊ ಆಸ್ಪತ್ರೆಗೆ ಕರೆದೊಯ್ದರಾದರೂ, ಅಲ್ಲಿಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಸ್ಥಳದಲ್ಲೇ ನಡೆಸಿದ ವಿಚಾರಣೆಯ ಸಮಯದಲ್ಲಿ ದೀಪಕ್ ಯಾದವ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಗುರುಗ್ರಾಮ್ ಪೊಲೀಸರು ದೃಢಪಡಿಸಿದ್ದಾರೆ.