×
Ad

ಇದು ನನ್ನ ಹಳೇ ಫೊಟೋ: ಹರಿಯಾಣದಲ್ಲಿ ‘ಮತಕಳ್ಳತನ’ ಆರೋಪದ ಬಳಿಕ ಬ್ರೆಝಿಲ್‌ನ ಮಾಡೆಲ್‌ ಪ್ರತಿಕ್ರಿಯೆ!

Update: 2025-11-06 01:05 IST

Photo: x/@zoo_bear

ಹೊಸದಿಲ್ಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ‘ಮತದಾರರ ವಂಚನೆ’ ಆರೋಪದ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೋರಿಸಿದ ಬ್ರೆಝಿಲ್‌ನ ರೂಪದರ್ಶಿ ಲಾರಿಸ್ಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಳೆಯ ಫೋಟೋ ವೈರಲ್ ಆಗಿರುವ ಕುರಿತು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಗಾಂಧಿ ಬಿಜೆಪಿ ಚುನಾವಣಾ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು. ಮತದಾರರ ಪಟ್ಟಿಗಳಲ್ಲಿ ಒಂದೇ ಮಹಿಳೆಯ ಫೊಟೋ ಹಲವು ಬಾರಿ ಕಾಣಿಸಿಕೊಂಡಿದೆ, “ಇದು ಯಾರು?” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪ್ರದರ್ಶಿಸಿದ್ದರು. ಆ ಚಿತ್ರದಲ್ಲಿದ್ದ ಮಹಿಳೆ ಬ್ರೆಝಿಲ್‌ನ ರೂಪದರ್ಶಿ ಆಗಿದ್ದು, ಹರಿಯಾಣದಲ್ಲಿ ನಕಲಿ ಮತದಾರರಾಗಿ ಆಕೆಯ ಚಿತ್ರವನ್ನು ಬಳಸಲಾಗಿದೆ ಎಂದು ಅವರು ಆರೋಪಿಸಿದ್ದರು.

ಆದರೆ, India TV ನಡೆಸಿದ ತನಿಖೆಯಲ್ಲಿ ರಾಹುಲ್ ಗಾಂಧಿ ತೋರಿಸಿದ ಆ ಚಿತ್ರವು ವಾಸ್ತವವಾಗಿ ಅನ್‌ಸ್ಪ್ಲಾಶ್ ಎಂಬ ಉಚಿತ ಸ್ಟಾಕ್ ಫೋಟೋ ವೇದಿಕೆಯಿಂದ ಪಡೆದದ್ದೆಂದು ಪತ್ತೆಯಾಗಿದೆ. ನೀಲಿ ಜಾಕೆಟ್ ಧರಿಸಿರುವ ಮಹಿಳೆಯ ಚಿತ್ರವನ್ನು ಛಾಯಾಗ್ರಾಹಕ ಮ್ಯಾಥ್ಯೂಸ್ ಫೆರೆರೊ ತೆಗೆದಿದ್ದು, ಈ ಚಿತ್ರವು ನಾಲ್ಕು ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ ಮತ್ತು ಅರವತ್ತು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಈ ಚಿತ್ರ ವ್ಯಾಪಕವಾಗಿ ಹರಡುತ್ತಿದ್ದಂತೆ, ಫೊಟೋದಲ್ಲಿನ ಮಹಿಳೆಯನ್ನು ಬ್ರೆಝಿಲ್‌ನ ರೂಪದರ್ಶಿ ಲಾರಿಸ್ಸಾ ಎಂದು ಗುರುತಿಸಲಾಗಿದೆ. ಪೋರ್ಚುಗೀಸ್ ಭಾಷೆಯಲ್ಲಿ ವೀಡಿಯೊ ಮೂಲಕ ಪ್ರತಿಕ್ರಿಯಿಸಿದ ಲಾರಿಸ್ಸಾ, ತನ್ನ ಹಳೆಯ ಫೋಟೋ ಭಾರತೀಯ ರಾಜಕೀಯ ವಲಯದಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.

“ಇದು ನನ್ನ ಹಳೆಯ ಫೋಟೋ. ಇದು ಭಾರತದ ಚುನಾವಣೆಯಂತಹ ಗಂಭೀರ ವಿಷಯದಲ್ಲಿ ಹೇಗೆ ಬಳಕೆಯಾಗಿದೆ ಎಂಬುದು ನನಗೆ ನಿಜವಾಗಿಯೂ ಅಚ್ಚರಿಯಾಗಿದೆ,” ಎಂದು ನಗುತ್ತಾ ಅವರು ಪ್ರತಿಕ್ರಿಯಿಸಿದರು. “ಒಬ್ಬ ಭಾರತೀಯ ವರದಿಗಾರರು ಇನ್‌ಸ್ಟಾಗ್ರಾಮ್ ಮೂಲಕ ಈ ಕುರಿತು ಸಂಪರ್ಕಿಸಿದ್ದಾರೆ. ಇದು ಅಸಂಬದ್ಧ,” ಎಂದು ಅವರು ಹೇಳಿದ್ದಾರೆ

ಲಾರಿಸ್ಸಾ ಅವರ ಹೇಳಿಕೆ ಹೊರಬಿದ್ದ ನಂತರ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರ ವೀಡಿಯೋವನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್, ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೇರ್ ಅವರೂ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News