×
Ad

ಪಶ್ಚಿಮ ಬಂಗಾಳ | ದನ ಸಾಗಿಸುತ್ತಿದ್ದ ವೃದ್ದರನ್ನು ಕಟ್ಟಿ ಹಾಕಿ, ಹಲ್ಲೆ ನಡೆಸಿ ಮೆರವಣಿಗೆ ಮಾಡಿದ ಸ್ವಘೋಷಿತ ಗೋರಕ್ಷಕರು

Update: 2025-08-03 18:55 IST

Photo : X

ಕೋಲ್ಕತ್ತಾ: ಕೃಷಿ ಉದ್ದೇಶಕ್ಕಾಗಿ ಹಸು ಸೇರಿದಂತೆ ಜಾನುವಾರುಗಳನ್ನು ಸಾಗಾಟ ಮಾಡುವಾಗ ಮಾರ್ಗಮಧ್ಯೆ ಅಡ್ಡಗಟ್ಟಿರುವ ಹಿಂದುತ್ವವಾದಿ ಗುಂಪು ಹಾಗೂ ಕೆಲ ಬಿಜೆಪಿ ನಾಯಕರು, ಇಬ್ಬರು ಮುಸ್ಲಿಮರನ್ನು ಕಟ್ಟಿ ಹಾಕಿ, ಅವರ ಮೇಲೆ ಹಲ್ಲೆ ನಡೆಸಿ, ಮೆರವಣಿಗೆ ಮಾಡಿರುವ ಘಟನೆ ಶುಕ್ರವಾರ ಪಶ್ಚಿಮ ಬಂಗಾಳದ ದುರ್ಗಾಪುರ್ ನಲ್ಲಿ ನಡೆದಿದೆ ಎಂದು ತಡವಾಗಿ ವರದಿಯಾಗಿದೆ.

ಈ ಸಂಬಂಧ ಬಿಜೆಪಿ ಯುವ ಘಟಕದ ನಾಯಕ ಪಾರಿಜಾತ್ ಗಂಗೂಲಿ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಪಾರಿಜಾತ್ ಗಂಗೂಲಿ ನೇತೃತ್ವದ ಸ್ವಘೋಷಿತ ಗೋರಕ್ಷಕರು ಮುಸ್ಲಿಂ ಸಮುದಾಯದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು, ಅವರ ಕೈಗಳನ್ನು ಕಟ್ಟಿ ಹಾಕಿರುವುದು ಹಾಗೂ ಅವರು ತಮ್ಮ ಕಿವಿಗಳನ್ನು ಹಿಡಿದುಕೊಂಡು ಭಸ್ಕಿ ಹೊಡೆಯುವಂತೆ ಮಾಡಿರುವುದು ಸೆರೆಯಾಗಿದೆ.

ಸಂತ್ರಸ್ತ ವ್ಯಕ್ತಿಗಳು ಸೂಕ್ತ ದಾಖಲೆಗಳನ್ನು ಪ್ರದರ್ಶಿಸಿದರೂ, ಅವರು ಬಂಕುರದ ಹತಶುರಿಯ ಗ್ರಾಮದಿಂದ ಖರೀದಿಸಿದ್ದ ಗೋವುಗಳನ್ನು ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಬಿಡುಗಡೆ ಮಾಡಿದ್ದಾರೆ. ಅವರು ಸಂತ್ರಸ್ತ ವ್ಯಕ್ತಿಗಳ ಬಳಿಯಿದ್ದ ಹಣ ಮತ್ತು ದಾಖಲೆಗಳನ್ನೂ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ದುರ್ಗಾಪುರ್ ಬಳಿಯ ಜೆಮುವಾ ಗ್ರಾಮದ ನಿವಾಸಿಗಳು ಹಾಗೂ ನೋಂದಾಯಿತ ಮತದಾರರಾದ ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಅವರನ್ನು ಬಾಂಗ್ಲಾದೇಶಿಗಳು ಎಂದೂ ಆರೋಪಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಪೊಲೀಸರು, “ಈ ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದುಷ್ಕರ್ಮಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಲು ಈಗಾಗಲೇ ದಾಳಿ ಪ್ರಾರಂಭಗೊಂಡಿದೆ. ಯಾರೂ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News