ಚರ್ಚ್ ಕಾರ್ಯಕ್ರಮಕ್ಕೆ ಹಾಜರಾದ ತಿರುಪತಿ ದೇವಾಲಯ ಮಂಡಳಿ ಅಧಿಕಾರಿ ಅಮಾನತು
ತಿರುಮಲ ತಿರುಪತಿ ದೇವಸ್ಥಾನ PC: x.com/ndtv
ತಿರುಪತಿ: ಜಿಲ್ಲೆಯ ಹುಟ್ಟೂರಿನಲ್ಲಿ ನಡೆದ ಚರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎ.ರಾಜಶೇಖರ್ ಬಾಬು ಅವರನ್ನು ಪ್ರಸಿದ್ಧ ವೆಂಕಟೇಶ್ವರ ದೇವಾಲಯವನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ ಆಡಳಿತ ಮಂಡಳಿ ಅಮಾನತುಗೊಳಿಸಿದೆ.
ಈ ಅಧಿಕಾರಿ ಪ್ರತಿ ಭಾನುವಾರ ಚರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮಾತ್ರವಲ್ಲದೇ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುತ್ತಿದ್ದ ಎಂಬ ಅಂಶ ಅಮಾನತಿನ ಬಳಿಕ ನಡೆಸಿದ ತನಿಖೆಯಿಂದ ದೃಢಪಟ್ಟಿದೆ. ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವ ಮೂಲಕ ಹಿಂದೂ ಟ್ರಸ್ಟ್ ಪ್ರತಿನಿಧಿ, ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಮಂಡಳಿ ಹೇಳಿದೆ.
"ರಾಜಶೇಖರ ಬಾಬು ಪ್ರತಿ ಭಾನುವಾರ ತಮ್ಮ ಹುಟ್ಟೂರು ತಿರುಪತಿ ಜಿಲ್ಲೆಯ ಪುತ್ತೂರಿನಲ್ಲಿ ಚರ್ಚ್ ನ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಾರೆ ಎನ್ನುವುದು ಗಮನಕ್ಕೆ ಬಂದಿದೆ" ಎಂದು ಅಧಿಕೃತ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಹಿಂದೂಯೇತರ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರದ ಭಾಗವಾಗಿ ಈ ಅಮಾನತು ಮಾಡಲಾಗಿದೆ. ಶಿಕ್ಷಕರು, ತಾಂತ್ರಿಕ ಅಧಿಕಾರಿಗಳು, ನರ್ಸ್ ಮತ್ತು ಇತರ ಅಧಿಕಾರಿಗಳು ಸೇರಿ ಕನಿಷ್ಠ 18 ಮಂದಿಯನ್ನು ಇದೇ ಕಾರಣಕ್ಕೆ ಟಿಟಿಡಿ ಮಂಡಳಿ ವರ್ಗಾಯಿಸಿತ್ತು ಎಂದು ಟಿಟಿಡಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಇದು ಟಿಟಿಡಿ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಹಿಂದೂ ಧಾರ್ಮಿಕ ಸಂಸ್ಥೆಯನ್ನು ಪ್ರತಿನಿಧಿಸುವ ಉದ್ಯೋಗಿ ಸಂಹಿತೆಯನ್ನು ಉಲ್ಲಂಘಿಸಿದ ಸ್ಪಷ್ಟ ನಿದರ್ಶನ ಇದಾಗಿದ್ದು, ಬೇಜವಾಬ್ದಾರಿಯ ವರ್ತನೆಯಾಗಿದೆ ಎಂದು ಹೇಳಿದ್ದಾರೆ.