ಟ್ರಂಪ್ ಸಹಿ ಅಮಾನ್ಯ; ಅಮೆರಿಕ ವಿಶ್ವಾಸಾರ್ಹವಲ್ಲ: ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ
ಮೊಜ್ತಬಾ ಖಾಮಿನೈ | Photo Credit : AP , PTI
ಟೆಹರಾನ್, ಜು.19: ಕಳೆದ ತಿಂಗಳು ಇರಾನ್ ಮತ್ತು ಅಮೆರಿಕ ನಡುವೆ ನಡೆದ ಮಧ್ಯಂತರ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿರುವ ಸಹಿ "ನಿಷ್ಪ್ರಯೋಜಕ ಹಾಗೂ ಅಮಾನ್ಯ" ಎಂದು ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಶನಿವಾರ ಹೇಳಿದ್ದಾರೆ.
ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ ಅಮೆರಿಕ ತನ್ನ ಬದ್ಧತೆಗಳನ್ನು ಪದೇ ಪದೇ ಉಲ್ಲಂಘಿಸಿದೆ. ಇದರಿಂದ ಅಮೆರಿಕದ ಅಪ್ರಾಮಾಣಿಕತೆ, ವಿಶ್ವಾಸಾರ್ಹತೆಯ ಕೊರತೆ ಹಾಗೂ ದುರುದ್ದೇಶ ಬಹಿರಂಗವಾಗಿದೆ ಎಂದು ಅವರು ಆರೋಪಿಸಿದರು.
ಈ ತಿಂಗಳು ಅಮೆರಿಕ ನಡೆಸಿದ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಮೆರಿಕ ಮಧ್ಯಂತರ ಒಪ್ಪಂದವನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಒಪ್ಪಂದದಡಿ ತನ್ನ ಮೇಲಿದ್ದ ಬದ್ಧತೆಗಳನ್ನು ಇನ್ನು ಮುಂದೆ ಪಾಲಿಸುವುದಿಲ್ಲ ಎಂದು ಇರಾನ್ ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ರಾಜ್ಯ ಟೆಲಿವಿಷನ್ ಗೆ ತಿಳಿಸಿದ್ದಾರೆ. ದಿನದ ಆರಂಭದಲ್ಲಿ ಇರಾನ್ ಪರ ಸಮಾಲೋಚಕರೂ ಇದೇ ವಿಷಯವನ್ನು ದೃಢಪಡಿಸಿದ್ದರು.
ಶನಿವಾರವೂ ಸಂಘರ್ಷ ಮುಂದುವರಿಯಿತು. ಅಮೆರಿಕವನ್ನು "ಸೈತಾನ" ಎಂದು ಉಲ್ಲೇಖಿಸಿದ ಖಾಮಿನೈ, "ಯುದ್ಧವನ್ನು ಪ್ರಚೋದಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಅದರ ಪರಿಣಾಮಗಳನ್ನು ಅದೇ ಎದುರಿಸಬೇಕಾಗುತ್ತದೆ. ಇರಾನ್ ಮತ್ತು ಅದರ ಮಿತ್ರ ಪಡೆಗಳು ಅಮೆರಿಕಕ್ಕೆ ತಕ್ಕ ಉತ್ತರ ನೀಡಲಿವೆ" ಎಂದು ಎಚ್ಚರಿಕೆ ನೀಡಿದರು.
ಅಮೆರಿಕ ತನ್ನ "ನಿಜವಾದ, ಮುಚ್ಚುಮರೆಯಿಲ್ಲದ ಮುಖ"ವನ್ನು ತೋರಿಸಿದೆ ಎಂದು ಆರೋಪಿಸಿದ ಅವರು, "ದಬ್ಬಾಳಿಕೆ, ನಿರಂಕುಶ ಪ್ರಭುತ್ವ ಹಾಗೂ ಕ್ರೂರತೆ ಅಮೆರಿಕದ ನೀತಿಯ ಅವಿಭಾಜ್ಯ ಭಾಗಗಳಾಗಿವೆ" ಎಂದು ಟೀಕಿಸಿದರು.
ಇದೇ ವೇಳೆ, ಸತತ ಏಳನೇ ದಿನವೂ ಇರಾನ್ ಮೇಲೆ ದಾಳಿ ಮುಂದುವರಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಶನಿವಾರ ಮುಂಜಾನೆ ಕಣ್ಗಾವಲು ತಾಣಗಳು, ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯ, ಭೂಗತ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗಳು ಹಾಗೂ ಕಡಲ ಕಾರ್ಯಾಚರಣೆಗೆ ಸಂಬಂಧಿಸಿದ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.
ಇದರ ನಡುವೆ, ಹಾರ್ಮುಝ್ ಜಲಸಂಧಿಯನ್ನು ಕೇಂದ್ರವಾಗಿಸಿಕೊಂಡು ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ವಿಶ್ವದ ಕಚ್ಚಾ ತೈಲದ ಸುಮಾರು ಐದನೇ ಒಂದು ಭಾಗ ಸಾಗಾಟವಾಗುವ ಈ ಪ್ರಮುಖ ಜಲಮಾರ್ಗದಲ್ಲಿನ ಉದ್ವಿಗ್ನತೆಯಿಂದ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ. ನಿರಂತರ ದಾಳಿಗಳಿಂದ ನಾಗರಿಕ ಪ್ರದೇಶಗಳು ಹಾಗೂ ಕುಡಿಯುವ ನೀರಿನ ಉಪ್ಪುನೀರು ನಿರ್ಮೂಲನ ಘಟಕಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳಿಗೂ ಅಪಾಯ ಎದುರಾಗಿದೆ.