2 ದಿನಗಳ 56ನೇ ಜಿಎಸ್‌ಟಿ ಮಂಡಳಿ ಸಭೆ ಆರಂಭ | ತೆರಿಗೆ ವ್ಯವಸ್ಥೆ ಸರಳೀಕರಣಕ್ಕೆ ಮಹತ್ವದ ಕ್ರಮ?
► ಆರೋಗ್ಯ ವಿಮೆಗೆ ಜಿಎಸ್‌ಟಿ ವಿನಾಯಿತಿ, ಜೀವನಾವಶ್ಯಕ ಸಾಮಾಗ್ರಿಗಳು ಅಗ್ಗ ಸಾಧ್ಯತೆ ► ಎಂಎಸ್‌ಎಂಇ, ಸ್ಟಾರ್ಟ್‌ಅಪ್‌ಗಳ ಅನುಸರಣಾ ನಿಯಮಗಳ ಸರಳೀಕರಣಕ್ಕೆ ಒತ್ತು
ಹೊಸದಿಲ್ಲಿ,ಸೆ.3: ಉದ್ದಿಮೆಗಳ ಮೇಲೆ ಕಾನೂನು ನಿಯಮಗಳ ಅನುಸರಣೆಯ ಹೊರೆಯನ್ನು ಕಡಿಮೆಗೊಳಿಸುವ ಕ್ರಮಗಳಿಗೆ ಸರಕು ಹಾಗೂ ಸೇವಾ ತೆರಿಗೆ ಮಂಡಳಿಯು ಬುಧವಾರ ಅನುಮೋದನೆಯನ್ನು ನೀಡಿದೆ. ಸೂಕ್ಷ್ಮ,ಕಿರು,ಮಧ್ಯಮ ಗಾತ್ರದ ಉದ್ಯಮ (ಎಂಎಸ್‌ಎಂಇ)ಗಳು ಹಾಗೂ ಸ್ಟಾರ್ಟ್ ಅಪ್‌ಗಳ ನೋಂದಣಿ ಸಮಯದ ಅವಧಿಯನ್ನು 30 ದಿನಗಳಿಂದ ಕೇವಲ ಮೂರು ದಿನಕ್ಕೆ ಇಳಿಸುವುದು ಸೇರಿದಂತೆ ವಿವಿಧ ಸರಳೀಕರಣ ಕ್ರಮಗಳಿಗೆ ಅದು ತನ್ನ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಎರಡು ದಿನಗಳ ಜಿಎಸ್‌ಟಿ ಮಂಡಳಿಯ 56ನೇ ಸಭೆ ಬುಧವಾರ ಬೆಳಿಗ್ಗೆ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಆರಂಭಗೊಂಡಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಎಲ್ಲಾ ವಿತ್ತ ಸಚಿವರು ಭಾಗವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15ರಂದು ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜಿಎಸ್‌ಟಿಯಲ್ಲಿ ಮಹತ್ವದ ಸುಧಾರಣಾ ಕ್ರಮಗಳನ್ನು ತರುವ ಘೋಷಣೆ ಮಾಡಿದ್ದರು. ನೂತನ ಸುಧಾರಣೆಗಳು ದೀಪಾವಳಿಗೆ ಮೊದಲು ಜಾರಿಗೆ ಬರುವ ನಿರೀಕ್ಷೆಯಿದೆ.
ಜಿಎಸ್‌ಟಿ ತೆರಿಗೆ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವುದು ಇಂದು ಆರಂಭಗೊಂಡ ಸಭೆಯ ಕಾರ್ಯಸೂಚಿಯ ಮುಖ್ಯ ಅಂಶವಾಗಿದೆ. ಪ್ರಸಕ್ತ ಜಿಎಸ್‌ಟಿ ತೆರಿಗೆ ವ್ಯವಸ್ಥೆಯು ಶೇ.5,12,18 ಹಾಗೂ 28 ಸ್ಲ್ಯಾಬ್‌ಗಳನ್ನು ಒಳಗೊಂಡಿದೆ.
ಕೇಂದ್ರ ಸರಕಾರವು ಶೇ.28 ಜಿಎಸ್‌ಟಿ ಶ್ರೇಣಿಯಲ್ಲಿರುವ ಶೇ.90ರಷ್ಟು ಸರಕುಗಳನ್ನು ಶೇ.18ರ ಮಿತಿಗೆ ತರುವ ನಿರೀಕ್ಷೆಯಿದೆ. ಶೇ.12 ಜಿಎಸ್‌ಟಿ ಶ್ರೇಣಿಯಲ್ಲಿರುವ ಸರಕುಗಳಲ್ಲಿ ಕೆಲವನ್ನು ಶೇ.5 ಸ್ಲ್ಯಾಬ್ ಗೆ ತರುವ ನಿರೀಕ್ಷೆಯಿದೆ. ಇದರಿಂದ ದೇಶದಲ್ಲಿ ಖರೀದಿಸುವಿಕೆಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದ್ದು,ತೆರಿಗೆ ಸ್ಲ್ಯಾಬ್ ಗಳ ಇಳಿಕೆಯಿಂದಾಗಿ ಉಂಟಾಗುವ 50 ಸಾವಿರ ಕೋಟಿ ಆದಾಯ ನಷ್ಟವನ್ನು ಸರಿದೂಗಿಸುವ ಆಶಾವಾದವನ್ನು ಮಂಡಳಿ ಹೊಂದಿದೆ.
ಜಿಎಸ್‌ಟಿ ತೆರಿಗೆ ಪರಿಷ್ಕರಣೆಯಿಂದಾಗಿ ಜವಳಿ, ರಸಗೊಬ್ಬರ ಪುನರ್ ನವೀಕರಣ ಯೋಗ್ಯ ಇಂಧನ, ಆಟೋಮೊಬೈಲ್ಸ್,ಕರಕುಶಲ ಸಾಮಾಗ್ರಿಗಳು, ಆರೋಗ್ಯ ಹಾಗೂ ವಿಮಾ ಕ್ಷೇತ್ರಗಳಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ.
ಜೀವವಿಮೆ ಹಾಗೂ ಆರೋಗ್ಯ ವಿಮೆಯ ಪ್ರೀಮಿಯಂಗಳು ಸೇರಿದಂತೆ ಕೆಲವು ಸರಕುಗಳು ಹಾಗೂ ಸೇವೆಗಳನ್ನು ಜಿಎಸ್‌ಟಿಯಿಂದ ಹೊರತುಪಡಿಸಬೇಕೆಂಬ ಪ್ರಸ್ತಾವಗಳನ್ನು ಕೂಡಾ ಸಭೆಯಲ್ಲಿ ಮಂಡಿಸಲಾಗಿದೆಯೆಂದು ಹೇಳಲಾಗುತ್ತಿದೆ.
ಜಿಎಸ್‌ಟಿ ಮಂಡಳಿಯು ಕೇಂದ್ರ ಹಾಗೂ ರಾಜ್ಯ ಸರಕಾರಗಳ 33 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್‌ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜೀವವಿಮೆ, ಆರೋಗ್ಯ ವಿಮೆ ಪ್ರೀಮಿಯಂಗಳಿಗೆ ಜಿಎಸ್‌ಟಿ ವಿನಾಯಿತಿ?
ಇಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ
ಶೇ.12 ಹಾಗೂ ಶೇ.28 ತೆರಿಗೆ ಸ್ಲ್ಯಾಬ್‌ನಡಿ ಬರುವ ಕೆಲವು ಸರಕು ಹಾಗೂ ಸೇವೆಗಳ ಜಿಎಸ್‌ಟಿ ಇಳಿಸುವ ಕೇಂದ್ರ ಪ್ರಸ್ತಾವನೆಗೆ ಸಚಿವರ ಸಮಿತಿ ಅನುಮೋದನೆ ನೀಡಿದೆ.40 ಲಕ್ಷ ರೂ.ವರೆಗಿನ ಇಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ.18ಕ್ಕೆ ಇಳಿಸುವ ಬಗ್ಗೆಯೂ ಸಚಿವ ಸಮಿತಿ ಒಲವು ತೋರಿದೆ ಎನ್ನಲಾಗಿದೆ. ಆದಾಗ್ಯೂ,ಕೇಂದ್ರ ಸರಕಾರವು ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವುಗಳಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಿದೆ ಹಾಗೂ ಮಂಡಳಿ ಸಭೆಯಲ್ಲಿಯೂ ಕೇಂದ್ರ ಸರಕಾರವು ಇದೇ ಧೋರಣೆಯನ್ನು ತಾಳುವ ನಿರೀಕ್ಷೆಯಿದೆ.
ನಿರ್ಮಲಾ ಸೀತಾರಾಮನ್ ಜೊತೆಗೆ ಸಹಾಯಕ ವಿತ್ತ ಸಚಿವ ಎಂ.ಪಿ.ಚೌಧುರಿ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ದಿಲ್ಲಿ, ಹರ್ಯಾಣ, ಗೋವಾ, ಜಮ್ಮುಕಾಶ್ಮೀರ ಹಾಗೂ ಒಡಿಶಾ ಮುಖ್ಯಮಂತ್ರಿಗಳು, ಮಣಿಪುರ ರಾಜ್ಯಪಾಲರು ಕೂಆಡ ಭಾಗವಹಿಸಿದ್ದಾರೆ.
ತುಪ್ಪ,ಉಡುಪು,ಔಷಧಿ, ಪಾದರಕ್ಷೆ ಅಗ್ಗವಾಗುವ ಸಾಧ್ಯತೆ
ತುಪ್ಪ,ಬೀಜಗಳು, ಕುಡಿಯುವ ನೀರು, ನಾನ್-ಎರೇಟೆಡ್ ಪಾನೀಯಗಳು, ನಮ್‌ಕೀನ್,ಪಾದರಕ್ಷೆ, ಉಡುಪುಗಳು, ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳು ಶೇ.12ರಿಂದ ಶೇ.5ರ ತೆರಿಗೆ ಸ್ಲ್ಯಾಬ್ ಗೆ ಒಳಪಡುವ ನಿರೀಕ್ಷೆಯಿದೆ. ಪೆನ್ಸಿಲ್‌ಗಳು, ಬೈಸಿಕಲ್‌ಗಳು, ಕೊಡೆಗಳು, ಹೇರ್‌ಪಿನ್ ಸೇರಿದಂತೆ ಸಾಮಾನ್ಯವಾಗಿ ಬಳಕೆಯಾಗುವ ಹಲವು ವಸ್ತುಗಳು ಶೇ.5 ಸ್ಲ್ಯಾಬ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.
ಟಿವಿ, ವಾಶಿಂಗ್ ಮೆಶಿನ್ ಸಹಿತ ಇಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆ ?
ಟಿವಿ, ವಾಶಿಂಗ್ ಮೆಶಿನ್ ಹಾಗೂ ರೆಫ್ರಿಜರೇಟರ್‌ನಂತಹ ಇಲೆಕ್ಟ್ರಾನಿಕ್ ಉಪಕರಣಗಳು ಕೂಡಾ ಅಗ್ಗವಾಗುವ ನಿರೀಕ್ಷೆಯಿದೆ. ಶೇ.28 ಜಿಎಸ್‌ಟಿ ವಿಧಿಸಲಾಗುತ್ತಿದದ ಈ ಸಾಮಾಗ್ರಿಗಳಿಗೆ ಶೇ.18 ತೆರಿಗೆ ವಿಧಿಸುವ ಸಾಧ್ಯತೆಯಿದೆ.
ಅಟೋಮೊಬೈಲ್‌ಗೆ ಶೇ.18 ಜಿಎಸ್‌ಟಿ ನಿರೀಕ್ಷೆ
ಆಟೋಮೊಬೈಲ್‌ಗಳಿಗೆ ಪ್ರಸಕ್ತ ಶೇ. 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಜೊತೆಗೆ ಮೇಲ್ತೆರಿಗೆ ಕೂಡಾ ಇದೆ. ಆದರೆ ಈ ಸಲ ಸಾಧಾರಣ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಶೇ.18ಕ್ಕೆ ಇಳಿಸುವ ಸಾಧ್ಯತೆಯಿದೆ.
ಎಸ್‌ಯುವಿಗಳು ಹಾಗೂ ಐಶಾರಾಮಿ ವಾಹನಗಳು ಪ್ರಸಕ್ತ ಶೇ.18ರ ತೆರಿಗೆ ಸ್ಲ್ಯಾಬ್ ನಲ್ಲಿದ್ದು, ಅವುಗಳ ಮೇಲೆ ಶೇ.40ರಷ್ಟು ತೆರಿಗೆ ವಿಧಿಸುವ ನಿರೀಕ್ಷೆಯಿದೆ.
ಜಿಎಸ್‌ಟಿ ಹೇರಿಕೆಯಿಂದ ನಷ್ಟ ಪರಿಹಾರಕ್ಕೆ ಕರ್ನಾಟಕ ಸೇರಿದಂತೆ ಪ್ರತಿಪಕ್ಷ ಆಳ್ವಿಕೆಯ ರಾಜ್ಯಗಳ ಆಗ್ರಹಿಸಿವೆ.
ಹಿಮಾಚಲಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮಬಂಗಾಳ ಸೇರಿದಂತೆ ಪ್ರತಿಪಕ್ಷ ಆಳ್ವಿಕೆಯ ಎಂಟು ರಾಜ್ಯಗಳು ಜಿಎಸ್‌ಟಿ ಹೇರಿಕೆಯ ಆನಂತರ ರಾಜ್ಯಗಳ ಆದಾಯದಲ್ಲಿ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಾ ಬಂದಿವೆ. ಕರ್ನಾಟಕ, ಪಂಜಾಬ್ ಹಾಗೂ ಪಶ್ಚಿಮಬಂಗಾಳ ರಾಜ್ಯಗಳು ತಮಗೆ ಆಗಿರುವ ಅಂದಾಜು ನಷ್ಟವನ್ನು ಮಂಡಳಿಗೆ ನೀಡಿವೆ. ಆ ರಾಜ್ಯಗಳ ಅಹವಾಲನ್ನು ಮಂಡಳಿಯು ಆಲಿಸಿದೆ ಎನ್ನಲಾಗಿದೆ
ಶೇ.12ರ ತೆರಿಗೆ ಸ್ಲ್ಯಾಬ್‌ನಲ್ಲಿರುವ ಬಹುತೇಕ ಸರಕುಗಳು ಶೇ.5 ರ ಶ್ರೇಣಿಗೆ
ಶೇ.12ರ ತೆರಿಗೆ ಸ್ಲ್ಯಾಬ್ ನಲ್ಲಿರುವ ಶೇ.99ರಷ್ಟು ಸರಕುಗಳು, ಶೇ.5ರ ಸ್ಲ್ಯಾಬ್ ಗೆ ಒಳಪಡಲಿದೆ.ಅದೇ ರೀತಿ ಶೇ.28ರ ತೆರಿಗೆ ಸ್ಲ್ಯಾಬ್‌ನಲ್ಲಿರುವ ಶೇ.90ರಷ್ಟು ಸರಕುಗಳು ಶೇ.18ರ ಸ್ಲ್ಯಾಬ್‌ಗೆ ಸೇರ್ಪಡೆಗೊಳ್ಳದೆಯೆಂದು ಮೂಲಗಳು ತಿಳಿಸಿವೆ.
ಪಾಪಪೂರಿತ ಸರಕುಗಳಿಗೆ ಶೇ.40 ಜಿಎಸ್‌ಟಿ ಮುಂದುವರಿಕೆ
‘ಪಾಪಪೂರಿತ ಸರಕು’ಗಳ ಪಟ್ಟಿಯಲ್ಲಿರುವ ತಂಬಾಕು, ಮದ್ಯ ಮತ್ತು ಐಶಾರಾಮಿ ಕಾರು ಸೇರಿದಂತೆ ಕೆಲವು ನಿರ್ದಿಷ್ಟ ವಸ್ತುಗಳಿಗೆ ಶೇ.40ರಷ್ಟು ಜಿಎಸ್‌ಟಿ ಮುಂದುವರಿಯಲಿದೆ . ಅವುಗಳ ಮೇಲೆ ಆರೋಗ್ಯ ಮೇಲ್ತೆರಿಗೆ ಇಲ್ಲವೇ ಇಂಧನ ಮೇಲ್ತೆರಿಗೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.