ಆನ್‌ಲೈನ್, ದೂರಶಿಕ್ಷಣದಲ್ಲಿ ಮನಃಶಾಸ್ತ್ರ, ಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಕೋರ್ಸ್‌ಗಳಿಗೆ ಯುಜಿಸಿ ನಿಷೇಧ
Photo | PTI
ಹೊಸದಿಲ್ಲಿ,ಆ.25: ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯಜಿಸಿ)ವು ಉನ್ನತ ಶಿಕ್ಷಣ ಸಂಸ್ಥೆಗಳು ಮುಕ್ತ ಮತ್ತು ದೂರಶಿಕ್ಷಣ(ಒಡಿಎಲ್) ಅಥವಾ ಆನ್‌ಲೈನ್ ವಿಧಾನದಲ್ಲಿ ಮನಃಶಾಸ್ತ್ರ,ಆರೋಗ್ಯ ರಕ್ಷಣೆ ಮತ್ತು ಸಂಬಂಧಿತ ಕೋರ್ಸ್‌ಗಳನ್ನು ಒದಗಿಸುವುದನ್ನು ನಿಷೇಧಿಸಿದೆ.
ನೂತನ ನಿರ್ದೇಶನವು ಜುಲೈ-ಆಗಸ್ಟ್ 2025ರ ಶೈಕ್ಷಣಿಕ ವರ್ಷದಿಂದ ಜಾರಿಗೊಳ್ಳಲಿದೆ.
ಅಧಿಕಾರಿಗಳ ಪ್ರಕಾರ ವೃತ್ತಿಪರ ಮತ್ತು ಅಭ್ಯಾಸ ಆಧಾರಿತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಮನಃಶಾಸ್ತ್ರ,ಪೌಷ್ಟಿಕಾಂಶ,ಸೂಕ್ಷ್ಮಜೀವಶಾಸ್ತ್ರ ,ಜೈವಿಕ ತಂತ್ರಜ್ಞಾನ,ಕ್ಲಿನಿಕಲ್ ಪೌಷ್ಟಿಕಾಂಶ,ಆಹಾರ ಪದ್ಧತಿ ಮತ್ತು ಆಹಾರ ವಿಜ್ಞಾನಗಳಲ್ಲಿ ಕಾರ್ಯಕ್ರಮಗಳು ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಪ್ರೊಫೆಷನ್ಸ್(ಎನ್‌ಸಿಎಎಚ್‌ಪಿ) ಕಾಯ್ದೆ,2021ರ ವ್ಯಾಪ್ತಿಗೊಳಪಟ್ಟಿರುವುದರಿಂದ ನಿಷೇಧದ ಅಡಿಯಲ್ಲಿ ಬರುತ್ತವೆ.
ಒಡಿಎಲ್ ಅಥವಾ ಆನ್‌ಲೈನ್ ಮೂಲಕ 2025ರ ಶೈಕ್ಷಣಿಕ ವರ್ಷ ಮತ್ತು ನಂತರ ಈ ಕೋರ್ಸ್‌ಗಳನ್ನು ಒದಗಿಸಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈಗಾಗಲೇ ನೀಡಲಾಗಿರುವ ಯಾವುದೇ ಮಾನ್ಯತೆಯನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ಕಮಿಷನ್ ಸ್ಪಷ್ಟಪಡಿಸಿದೆ.
ವಿಷಯಗಳ ಸಂಯೋಜನೆಯನ್ನು ಒದಗಿಸುವ ಬ್ಯಾಚುಲರ್ ಆಫ್ ಆರ್ಟ್ಸ್(ಇಂಗ್ಲೀಷ್,ಹಿಂದಿ,ಪಂಜಾಬಿ,ಅರ್ಥಶಾಸ್ತ್ರ,7 ಇತಿಹಾಸ,ಗಣಿತ,ಸಾರ್ವಜನಿಕ ಆಡಳಿತ,ತತ್ವಶಾಸ್ತ್ರ, ರಾಜಕೀಯ ವಿಜ್ಞಾನ,ಸಂಖ್ಯಾಶಾಸ್ತ್ರ,ಮಾನವ ಹಕ್ಕುಗಳು ಮತ್ತು ಕರ್ತವ್ಯಗಳು,ಸಂಸ್ಕೃತ,ಮನಃಶಾಸ್ತ್ರ,ಭೂಗೋಳಶಾಸ್ತ್ರ,
ಸಮಾಜಶಾಸ್ತ್ರ,ಮಹಿಳಾ ಅಧ್ಯಯನ)ನಂತಹ ಪದವಿ ಕಾರ್ಯಕ್ರಮಗಳು ಬಹು ವಿಶೇಷತೆಗಳನ್ನು ಒಳಗೊಂಡಿರುವ ಸಂದರ್ಭಗಳಲ್ಲಿ ಎನ್‌ಸಿಎಎಚ್‌ಪಿ ಕಾಯ್ದೆ,2021ರಡಿ ಪಟ್ಟಿ ಮಾಡಲಾಗಿರುವ ವಿಶೇಷತೆಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆ ಎಂದು ಯುಜಿಸಿ ಕಾರ್ಯದರ್ಶಿ ಮನೀಷ್ ಜೋಶಿ ತಿಳಿಸಿದರು.
ಎಪ್ರಿಲ್ 2025ರಲ್ಲಿ ನಡೆದ 24ನೇ ದೂರ ಶಿಕ್ಷಣ ಬ್ಯೂರೋ ಕಾರ್ಯಪಡೆಯ ಸಭೆಯ ಶಿಫಾರಸುಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಸ್ತಾವಗಳನ್ನು ಇತ್ತೀಚಿನ ಯುಜಿಸಿ ಸಭೆಯಲ್ಲಿ ಔಪಚಾರಿಕಗೊಳಿಸಲಾಗಿದೆ.
ಯುಜಿಸಿಯ ಈ ನಿರ್ದೇಶನವು ಆನ್‌ಲೈನ್ ಅಥವಾ ದೂರಶಿಕ್ಷಣದ ಮೂಲಕ ಈ ಕೋರ್ಸ್‌ಗಳಿಗೆ ದಾಖಲಾಗಲು ಬಯಸಿರುವ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಈಗ ಇತ್ತೀಚಿನ ನಿಯಮಗಳಿಗೆ ಅನುಗುಣವಾಗಿ ತಮ್ಮ ಕೋರ್ಸ್‌ಗಳನ್ನು ಪುನರ್‌ರೂಪಿಸಬೇಕಾಗುತ್ತದೆ.