ಉಜ್ಜೈನಿಯಲ್ಲೂ ಅಂಗಡಿ ಮಾಲೀಕರು ಹೆಸರುಗಳನ್ನು ಪ್ರದರ್ಶಿಸುವುದು ಕಡ್ಡಾಯ : ಮಹಾನಗರ ಪಾಲಿಕೆಯಿಂದ ಆದೇಶ
Photo : Wikimedia Commons
ಉಜ್ಜೈನಿ : ‘‘ಗ್ರಾಹಕರ ಸುರಕ್ಷತೆ’’ಯನ್ನು ಖಾತರಿಪಡಿಸುವುದಕ್ಕಾಗಿ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿಗಳು ತಮ್ಮ ಮಾಲೀಕರ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದು ಬಿಜೆಪಿ ಆಡಳಿತದ ಮಧ್ಯಪ್ರದೇಶದ ಉಜ್ಜೈನಿ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.
ಈ ಆದೇಶವನ್ನು ಉಲ್ಲಂಘಿಸುವವರು ಮೊದಲ ಉಲ್ಲಂಘನೆಗೆ 2,000 ರೂಪಾಯಿ ಮತ್ತು ನಂತರದ ಉಲ್ಲಂಘನೆಗಳಿಗೆ 5,000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ಉಜ್ಜೈನಿ ನಗರ ಪಾಲಿಕೆಯ ಆದೇಶ ಎಚ್ಚರಿಸಿದೆ.
ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರಪ್ರದೇಶ ಮತ್ತು ಉತ್ತರಾಖಂಡಗಳ ಕೆಲವು ಭಾಗಗಳಲ್ಲಿ ಅಧಿಕಾರಿಗಳು ಇಂಥದೇ ಆದೇಶಗಳನ್ನು ಹೊರಡಿಸಿದ ಬಳಿಕ, ಉಜ್ಜೈನಿಯೂ ಅದೇ ದಾರಿಯಲ್ಲಿ ಸಾಗಿದೆ. ಕನ್ವರ್ ಯಾತ್ರೆ ಸಾಗುವ ಉತ್ತರಪ್ರದೇಶದ ಮುಝಫ್ಫರ್ನಗರ ಮತ್ತು ಉತ್ತರಾಖಂಡದ ಹರಿದ್ವಾರದ ದಾರಿಯುದ್ದಕ್ಕೂ ಇರುವ ಧಾಬಾಗಳು, ಆಹಾರ ಅಂಗಡಿಗಳು ಮತ್ತು ಹೊಟೇಲ್ ಗಳು ತಮ್ಮ ಮಾಲೀಕರ ಹೆಸರುಗಳನ್ನು ತಮ್ಮ ಕಟ್ಟಡಗಳ ಹೊರಗೆ ಪ್ರದರ್ಶಿಸಬೇಕು ಎಂದು ಪೊಲೀಸರ ಆದೇಶವು ತಿಳಿಸುತ್ತದೆ.
ಉಜ್ಜೈನಿ ಮಹಾನಗರ ಪಾಲಿಕೆಯ ಆದೇಶವು ಮಧ್ಯಪ್ರದೇಶದ ಅಂಗಡಿ ಉದ್ಯಮ ಕಾಯ್ದೆಯ ವಿಧಿಗಳಿಗೆ ಅನುಗುಣವಾಗಿದೆ ಮತ್ತು ಗ್ರಾಹಕರ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ ಅದನ್ನು ಜಾರಿಗೆ ತರಲಾಗಿದೆ ಎಂದು ಉಜ್ಜೈನಿ ಮೇಯರ್ ಮುಕೇಶ್ ತತ್ವಾಲ್ ಹೇಳಿದರು.
ಮುಸ್ಲಿಮರ ಅಂಗಡಿಗಳನ್ನು ಬೇರ್ಪಡಿಸುವುದಕ್ಕಾಗಿ ಈ ಆದೇಶವನ್ನು ತರಲಾಗಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದರು.
‘‘ಉಜ್ಜೈನಿಯು ಧಾರ್ಮಿಕ ಮತ್ತು ಪವಿತ್ರ ನಗರವಾಗಿದೆ. ಜನರು ಇಲ್ಲಿ ಧಾರ್ಮಿಕ ನಂಬಿಕೆಯೊಂದಿಗೆ ಬರುತ್ತಾರೆ. ತಾವು ಯಾವ ಅಂಗಡಿಯ ಸೇವೆಗಳನ್ನು ಬಳಸುತ್ತಿದ್ದೇವೆ ಎಂದು ತಿಳಿಯುವ ಹಕ್ಕು ಅವರಿಗಿದೆ. ಸೇವೆಯಿಂದ ಗ್ರಾಹಕರಿಗೆ ತೃಪ್ತಿಯಾಗದಿದ್ದರೆ ಅಥವಾ ಮೋಸ ನಡೆದರೆ, ಅಂಗಡಿ ಮಾಲೀಕರ ವಿವರಗಳನ್ನು ಬಳಸಿಕೊಂಡು ಅವರು ಅದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ’’ ಎಂದು ಮೇಯರ್ ಹೇಳಿಕೊಂಡರು.
ಅಂಗಡಿ ಮಾಲೀಕರು ತಮ್ಮ ಹೆಸರುಗಳನ್ನು ಅಂಗಡಿಗಳ ಹೊರಗೆ ಪ್ರದರ್ಶಿಸಬೇಕು ಎಂಬ ಪ್ರಸ್ತಾವಕ್ಕೆ ಉಜ್ಜೈನಿ ನಗರ ಪಾಲಿಕೆಯ ಮೇಯರ್ 2002ರ ಸೆಪ್ಟಂಬರ್ನಲ್ಲೇ ಅನುಮೋದನೆ ನೀಡಿದ್ದರು ಎಂದು ತತ್ವಾಲ್ ಹೇಳಿಕೊಂಡರು.
‘‘ನಾಮಫಲಕಗಳು ಒಂದೇ ಗಾತ್ರ ಮತ್ತು ಒಂದೇ ಬಣ್ಣದ್ದಾಗಿರಬೇಕೆಂಬ ನಿಯಮಗಳ ಹಿನ್ನೆಲೆಯಲ್ಲಿ ಆ ಆದೇಶದ ಜಾರಿಯಲ್ಲಿ ವಿಳಂಬವಾಯಿತು. ಈಗ ನಾವು ಈ ನಿಯಮಗಳನ್ನು ಬದಲಾಯಿಸಿದ್ದೇವೆ. ಅಂಗಡಿ ಮಾಲೀಕರ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸಿದರೆ ಸಾಕಾಗುತ್ತದೆ’’ ಎಂದು ಅವರು ಹೇಳಿದರು.
► ಕೇಂದ್ರ ಸಚಿವ ಜಯಂತ ಚೌಧರಿ ಆಕ್ಷೇಪ
ಉತ್ತರಪ್ರದೇಶದ ಮುಝಫ್ಫರ್ರನಗರದ ಮೂಲಕ ಹಾದು ಹೋಗುವ ಕನ್ವರ್ ಯಾತ್ರೆಯ ಉದ್ದಕ್ಕೂ ಇರುವ ಹೊಟೇಲ್ ಗಳು ಮತ್ತು ರಸ್ತೆ ಬದಿಯ ತಿಂಡಿ ಅಂಗಡಿಗಳು ತಮ್ಮ ಮಾಲೀಕರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂಬ ರಾಜ್ಯ ಸರಕಾರದ ಆದೇಶವನ್ನು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಹಾಗೂ ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ಸಚಿವರಾಗಿರುವ ಜಯಂತ ಚೌಧರಿ ರವಿವಾರ ಟೀಕಿಸಿದ್ದಾರೆ. ಈ ಆದೇಶವು ಸರಿಯಾಗಿ ಯೋಚನೆ ಮಾಡಿ ತೆಗೆದುಕೊಂಡ ನಿರ್ಧಾರವೂ ಅಲ್ಲ, ಸಕಾರಣದ ನಿರ್ಧಾರವೂ ಅಲ್ಲ ಎಂದು ಅವರು ಹೇಳಿದ್ದಾರೆ.
‘‘ಯಾವುದೇ ನಿರ್ಧಾರವು ಸಮಾಜದ ಕ್ಷೇಮ ಮತ್ತು ಸೌಹಾರ್ದತೆಗೆ ಹಾನಿ ತರಬಾರದು. ಕನ್ವರ್ ಯಾತ್ರೆಗೆ ಹೋಗುವವರು ಮತ್ತು ಅವರಿಗೆ ಸೇವೆಗಳನ್ನು ಒದಗಿಸುವವರು ಎಲ್ಲರೂ ಒಂದೇ. ಮೊದಲಿನಿಂದಲೂ ಈ ಸಂಪ್ರದಾಯ ನಡೆಯುತ್ತಾ ಬಂದಿದೆ. ಅವರಿಗೆ ಯಾರು ಸೇವೆಗಳನ್ನು ನೀಡುತ್ತಿದ್ದಾರೆ ಎಂಬ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ’’ ಎಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.
‘‘ಜನರನ್ನು ಗುರುತಿಸುವ ಮತ್ತು ಅವರತ್ತ ಬೆರಳು ತೋರಿಸುವ ಈ ಪ್ರವೃತ್ತಿ ನನಗೆ ಅರ್ಥವಾಗುತ್ತಿಲ್ಲ’’ ಎಂದು ಕೇಂದ್ರ ಸಚಿವರು ಹೇಳಿದರು.