×
Ad

ಉತ್ತರಪ್ರದೇಶ ಉಪಚುನಾವಣೆ: ಮತದಾರರ ಗುರುತಿನ ಚೀಟಿ ಪರಿಶೀಲನೆ ನಡೆಸಿದ್ದ 7 ಮಂದಿ ಪೊಲೀಸರು ಅಮಾನತು

Update: 2024-11-20 16:00 IST

Screengrab:X/@samajwadiparty

ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಮತದಾರರ ಗುರುತಿನ ಚೀಟಿ ಪರಿಶೀಲನೆ ಬಗ್ಗೆ ವಿವಾದ ಭುಗಿಲೆದ್ದ ಬೆನ್ನಲ್ಲೇ ನಿಯಮಗಳ ಉಲ್ಲಂಘನೆ ಆರೋಪದಲ್ಲಿ 7 ಮಂದಿ ಪೊಲೀಸರನ್ನು ಅಮಾನತು ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಉತ್ತರ ಪ್ರದೇಶದಲ್ಲಿ ಉಪಚುನಾವಣೆಗಳನ್ನು ನ್ಯಾಯಸಮ್ಮತವಾಗಿ ನಡೆಸುವಂತೆ ಚುನಾವಣಾ ಆಯೋಗವು ಬುಧವಾರ ಅಧಿಕಾರಿಗಳಿಗೆ ಸೂಚಿಸಿದೆ. ಸಮಾಜವಾದಿ ಪಕ್ಷದ ದೂರಿನ ಮೇರೆಗೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗವು ಇದುವರೆಗೆ 7 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿದೆ. ಅಮಾನತುಗೊಂಡ 7 ಅಧಿಕಾರಿಗಳಲ್ಲಿ ಕಾನ್ಪುರ ಜಿಲ್ಲೆ ಮತ್ತು ಮುಜಾಫರ್ ನಗರ ಜಿಲ್ಲೆಯ ತಲಾ ಇಬ್ಬರು ಮತ್ತು ಮೂವರು ಮೊರಾದಾಬಾದ್ ನವರಾಗಿದ್ದಾರೆ.

ಯಾವುದೇ ಅರ್ಹ ಮತದಾರರನ್ನು ಮತದಾನದಿಂದ ತಡೆಯಬಾರದು. ಮತದಾನದ ಸಮಯದಲ್ಲಿನ ಯಾವುದೇ ರೀತಿಯ ಪಕ್ಷಪಾತೀಯ ಧೋರಣೆಯನ್ನು ಸಹಿಸಲಾಗುವುದಿಲ್ಲ. ಈ ಬಗ್ಗೆ ದೂರು ಸ್ವೀಕರಿಸಿದ ತಕ್ಷಣ ತನಿಖೆ ನಡೆಸಲಾಗುವುದು. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಇಂದು ಉತ್ತರಪ್ರದೇಶದ ಗಾಝಿಯಾಬಾದ್, ಕತೇಹಾರಿ, ಖೈರ್, ಕುಂದರ್ಕಿ, ಕರ್ಹಾಲ್, ಮಜವಾನ್, ಮೀರಾಪುರ್, ಫುಲ್ಪುರ್ ಮತ್ತು ಸಿಸಾಮಾವು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನ್ಯಾಯಸಮ್ಮತ ಮತ್ತು ಸುಗಮ ಮತದಾನ ನಡೆಸುವಂತೆ ಸೂಚನೆ ನೀಡಿದ್ದಾರೆ.

ಇದಕ್ಕೂ ಮೊದಲು ಪೊಲೀಸರ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದ ಸಮಾಜವಾದಿ ಪಕ್ಷದ(ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಪೊಲೀಸ್ ಅಧಿಕಾರಿಗಳು ಮತದಾರರ ಗುರುತಿನ ಚೀಟಿಗಳು ಮತ್ತು ಆಧಾರ್ ಕಾರ್ಡ್ ಗಳನ್ನು ಕಾನೂನುಬಾಹಿರವಾಗಿ ಪರಿಶೀಲಿಸುತ್ತಿದ್ದಾರೆ. ಕೆಲವು ಸಮುದಾಯಗಳನ್ನು ಮತದಾನ ಮಾಡದಂತೆ ತಡೆಯಲಾಗುತ್ತದೆ. ಪೊಲೀಸ್ ಸಿಬ್ಬಂದಿಗಳು ಕೆಲವು ಮತದಾರರಿಗೆ ಮತದಾನ ಮಾಡದಂತೆ ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಚೀಟಿಗಳನ್ನು ಪರಿಶೀಲಿಸುತ್ತಿರುವ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ವಿಡಿಯೊ ಸಾಕ್ಷ್ಯವನ್ನು ಆಧರಿಸಿ ತಕ್ಷಣದಿಂದಲೇ ಅಮಾನತುಗೊಳಿಸಬೇಕು. ಆಧಾರ್ ಚೀಟಿ ಅಥವಾ ಗುರುತಿನ ಚೀಟಿ ಪರಿಶೀಲಿಸುವ ಅಧಿಕಾರ ಪೊಲೀಸರಿಗಿಲ್ಲ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News