ಉತ್ತರ ಪ್ರದೇಶ ವಿಧಾನಸಭೆಯಲ್ಲಿ 'ಪಾನ್ ಮಸಾಲಾ' ತಿಂದು ಉಗುಳಿದ ಶಾಸಕರು : ಸ್ಪೀಕರ್ ತರಾಟೆ
ಲಕ್ನೋ: ಕೆಲ ಶಾಸಕರು ಪಾನ್ ಮಸಾಲಾ ತಿಂದು ವಿಧಾನಸೌಧದ ಸಭಾಂಗಣದಲ್ಲಿ ಉಗುಳಿದ್ದಾರೆ ಎಂದು ಉತ್ತರ ಪ್ರದೇಶ ವಿಧಾನಸಭಾ ಸ್ಪೀಕರ್ ಸತೀಶ್ ಮಹಾನಾ ಹೇಳಿದ್ದಾರೆ.
ಮಂಗಳವಾರ ಸದನ ಆರಂಭಕ್ಕೂ ಮುನ್ನ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್ ಸತೀಶ್ ಮಹಾನಾ, ಕೆಲ ಶಾಸಕರು ಪಾನ್ ಮಸಾಲಾ ತಿಂದು ವಿಧಾನಸೌಧದ ಸಭಾಂಗಣದಲ್ಲಿ ಉಗುಳಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬಳಿಕ ನಾನೇ ಖುದ್ದಾಗಿ ಸ್ವಚ್ಛತೆ ಮಾಡಿಸಿದ್ದೇನೆ. ಪಾನ್ ಮಸಾಲಾ ತಿಂದು ಉಗುಳಿದ ಶಾಸಕನನ್ನು ವಿಡಿಯೋ ಮೂಲಕ ನೋಡಿದ್ದೇನೆ ಎಂದು ಹೇಳಿದರು.
ʼಇಂದು ಬೆಳಿಗ್ಗೆ ನಮ್ಮ ವಿಧಾನಸೌಧದ ಸಭಾಂಗಣದಲ್ಲಿ ಪಾನ್ ಮಸಾಲ ತಿಂದು ಕೆಲವರು ಉಗುಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ, ನಾನು ಇಲ್ಲಿಗೆ ಬಂದು ಅದನ್ನು ಸ್ವಚ್ಛತೆ ಮಾಡಿಸಿದೆ. ವಿಡಿಯೊದಲ್ಲಿ ನಾನು ಶಾಸಕರನ್ನು ನೋಡಿದ್ದೇನೆ. ಆದರೆ, ನಾನು ಯಾವುದೇ ವ್ಯಕ್ತಿಯನ್ನು ಅವಮಾನಿಸಲು ಬಯಸುವುದಿಲ್ಲ. ಹಾಗಾಗಿ ಅವರ ಹೆಸರನ್ನು ನಾನು ಹೇಳುವುದಿಲ್ಲ. ಯಾರಾದರೂ ಈ ರೀತಿ ಮಾಡುವುದು ಕಂಡು ಬಂದರೆ ಅವರನ್ನು ತಡೆಯಬೇಕು ಎಂದು ನಾನು ಈ ಸದನದ ಎಲ್ಲಾ ಸದಸ್ಯರಲ್ಲಿ ವಿನಂತಿಸುತ್ತೇನೆ. ಈ ವಿಧಾನಸಭೆಯನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಾನ್ ಮಸಾಲ ತಿಂದು ಉಗುಳಿದ ಶಾಸಕರು ನನ್ನ ಬಳಿ ಬಂದು ನಾನು ಈ ರೀತಿ ಮಾಡಿದ್ದೇನೆ ಎಂದು ಹೇಳಿದರೆ ಒಳಿತು, ಇಲ್ಲವಾದಲ್ಲಿ ನಾನೇ ಅವರನ್ನು ನನ್ನ ಮುಂದೆ ಹಾಜರಾಗುವಂತೆ ಹೇಳುತ್ತೇನೆ ಎಂದು ಹೇಳಿದರು.