×
Ad

“ಕ್ಷುಲ್ಲಕ ಸಂಗತಿ”: ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಸಹಪಾಠಿಗಳಿಗೆ ಸೂಚಿಸಿದ ಶಿಕ್ಷಕಿಯ ಸಮರ್ಥನೆ

Update: 2023-08-26 15:15 IST

Photo: Twitter

ಹೊಸದಿಲ್ಲಿ: ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಸಹಪಾಠಿಗೆ ಸೂಚಿಸಿದ್ದ ವಿಡಿಯೊದಲ್ಲಿದ್ದ ಉತ್ತರ ಪ್ರದೇಶ ಶಿಕ್ಷಕಿಯು, ಆ ವಿಡಿಯೊವನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಕಿ ತೃಪ್ತ ತ್ಯಾಗಿ, ತನ್ನ ಕೃತ್ಯದಲ್ಲಿ ಕೋಮುವಾದಿ ಲಕ್ಷಣವಿತ್ತು ಎಂಬ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆ ಬಾಲಕನು ಹೋಂ ವರ್ಕ್ ಪೂರೈಸದ ಕಾರಣ ನಾನು ಆತನಿಗೆ ಹೊಡೆಯುವಂತೆ ಕೆಲವು ವಿದ್ಯಾರ್ಥಿಗಳಿಗೆ ಸೂಚಿಸಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.

“ಆತನೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುವಂತೆ ಆ ಬಾಲಕನ ಪೋಷಕರಿಂದ ಒತ್ತಡವಿತ್ತು. ನಾನು ಅಂಗವಿಕಲೆಯಾಗಿರುವುದರಿಂದ, ಆತ ತನ್ನ ಹೋಂ ವರ್ಕ್ ಮಾಡಲು ಪ್ರಾರಂಭಿಸಲಿ ಎಂದು ಆತನಿಗೆ ಹೊಡೆಯವಂತೆ ಕೆಲವು ವಿದ್ಯಾರ್ಥಿಗಳಿಗೆ ಸೂಚಿಸಿದ್ದೆ” ಎಂದು ಅವರು ವಿವರಿಸಿದ್ದಾರೆ.

ಆ ವಿಡಿಯೊವನ್ನು ಸಂಕಲಿಸಿ, ಅದಕ್ಕೆ ಕೋಮುವಾದಿ ಆಯಾಮವನ್ನು ನೀಡಲಾಗಿದೆ ಎಂದು ಆರೋಪಿಸಿರುವ ಶಿಕ್ಷಕಿಯು, “ಆ ಬಾಲಕನ ಸಹೋದರ ಸಂಬಂಧಿ ತರಗತಿಯಲ್ಲಿದ್ದ. ಆತನೇ ಆ ವಿಡಿಯೊವನ್ನು ಚಿತ್ರೀಕರಿಸಿದ್ದು, ನಂತರ ಅದನ್ನು ವಿರೂಪಗೊಳಿಸಲಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಆ ವಿಡಿಯೊದಲ್ಲಿ ಸಮುದಾಯವೊಂದರ ವಿರುದ್ಧ ಸದರಿ ಶಿಕ್ಷಕಿಯು ಆಕ್ಷೇಪಾರ್ಹವಾಗಿ ಮಾತನಾಡಿರುವುದು ದಾಖಲಾಗಿತ್ತು.

ಆ ಘಟನೆ ಕ್ಷುಲ್ಲಕ ಸಂಗತಿಯಾಗಿದೆ ಎಂದಿರುವ ತೃಪ್ತ ತ್ಯಾಗಿ, “ನನ್ನ ಉದ್ದೇಶ ಅದಾಗಿರಲಿಲ್ಲ. ಅವರೆಲ್ಲ ನನ್ನ ಮಕ್ಕಳಿದ್ದಂತೆ ಹಾಗೂ ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದೇನೆ. ಆದರೆ, ಇದನ್ನು ಅನಗತ್ಯವಾಗಿ ದೊಡ್ಡ ವಿಷಯವನ್ನಾಗಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ, ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಇತರೆ ಮಕ್ಕಳು ಹೊಡೆಯುತ್ತಿರುವ, ಅದಕ್ಕೆ ಪ್ರತಿಯಾಗಿ ಆತ ಅಳುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈ ಘಟನೆಯ ಸಂಬಂಧ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಶುಕ್ರವಾರ ಮಕ್ಕಳ ಹಕ್ಕು ಆಯೋಗವು ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News