×
Ad

ಅಮೆರಿಕ ಸುಂಕಷ್ಟ | ಪರಸ್ಪರ ಅವಲಂಬನೆ ಕಡ್ಡಾಯವಾಗಬಾರದು: ಮೋಹನ್ ಭಾಗವತ್

ಭಾಷಣದಲ್ಲಿ ಜೆನ್ ಝಡ್‌ ಪ್ರತಿಭಟನೆ ಬಗ್ಗೆ ಉಲ್ಲೇಖಿಸಿದ ಆರೆಸ್ಸೆಸ್‌ ಮುಖ್ಯಸ್ಥ

Update: 2025-10-02 13:37 IST

Photo | NDTV

ನಾಗ್ಪುರ: "ಅಮೆರಿಕದ ಸುಂಕ ನೀತಿಯು ಆ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಜಗತ್ತು ಪರಸ್ಪರ ಅವಲಂಬಿತವಾಗಿದೆ. ಆದರೆ ಆ ಅವಲಂಬನೆ ಕಡ್ಡಾಯವಾಗಬಾರದು" ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯದಶಮಿ ಸಂದರ್ಭದ ತನ್ನ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇಶೀಯ ಹಾಗೂ ಅಂತಾರಾಷ್ಟ್ರೀಯ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅಮೆರಿಕ ಸರಕಾರ ಜಾರಿಗೆ ತಂದ ಹೊಸ ಸುಂಕ ನೀತಿಯ ಕುರಿತು ಮಾತನಾಡಿದ ಮೋಹನ್‌ ಭಾಗವತ್‌, ಭಾರತ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಿ ಸ್ವಾವಲಂಬನೆಗೆ ಪ್ರಾಧಾನ್ಯತೆ ನೀಡಬೇಕು. ಸ್ನೇಹಪರ ರಾಷ್ಟ್ರಗಳೊಂದಿಗೆ ಶಾಂತಿಪೂರ್ಣ ಸಂಬಂಧ ಕಾಪಾಡುವುದು ಅಗತ್ಯ; ಅದು ಬಲವಂತವಲ್ಲ, ಸ್ವಇಚ್ಛೆಯಿಂದ ಇರಬೇಕು ಎಂದು ಹೇಳಿದರು.

ನೆರೆಹೊರೆಯ ದೇಶಗಳಲ್ಲಿ ಉದ್ಭವಿಸಿರುವ ಅಶಾಂತಿಯ ಕುರಿತೂ ಭಾಗವತ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನೇಪಾಳದಲ್ಲಿ ಇತ್ತೀಚೆಗೆ ಕಂಡ ಅಶಾಂತಿ ಗಂಭೀರ ವಿಚಾರ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಜನರ ಅಸಮಾಧಾನದಿಂದ ಆಡಳಿತ ಬದಲಾವಣೆಗಳು ನಡೆದಿವೆ. ಭಾರತದಲ್ಲಿಯೂ ಅಂತಹ ಅಶಾಂತಿಯನ್ನು ಪ್ರೇರೇಪಿಸಲು ಒಳಗಿನ ಮತ್ತು ಹೊರಗಿನ ಶಕ್ತಿಗಳು ಸಕ್ರಿಯವಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

“ಪ್ರಜಾಪ್ರಭುತ್ವ ಚಳುವಳಿಗಳಿಂದ ಬದಲಾವಣೆ ಸಾಧ್ಯ, ಆದರೆ ದಂಗೆಗಳಿಂದ ಯಥಾಸ್ಥಿತಿ ಮಾತ್ರ ಮುಂದುವರಿಯುತ್ತದೆ. ಇತಿಹಾಸವೇ ಇದನ್ನು ಸಾಬೀತುಪಡಿಸಿದೆ. ಫ್ರಾನ್ಸ್‌ನ ದಂಗೆಗಳು ನೆಪೋಲಿಯನ್‌ನ ಉದಯಕ್ಕೆ ಕಾರಣವಾಗಿದ್ದವು. ಸಮಾಜವಾದದ ಚಳುವಳಿಗಳಿಂದ ಬಂಡವಾಳಶಾಹಿ ರಾಷ್ಟ್ರಗಳೇ ಹೊರಹೊಮ್ಮಿದ ಉದಾಹರಣೆಗಳಿವೆ. ಅರಾಜಕತೆ ವಿದೇಶಿ ಶಕ್ತಿಗಳಿಗೆ ತಮ್ಮ ಆಟಗಳನ್ನು ಆಡಲು ಅವಕಾಶ ಕಲ್ಪಿಸುತ್ತದೆ ಎಂದು ಮೋಹನ್ ಭಾಗವತ್ ಅವರು ಹಿಂಸಾತ್ಮಕ ದಂಗೆಗಳ ಪರಿಣಾಮಗಳ ಬಗ್ಗೆ ಹೇಳಿದರು.

ಭಾರತೀಯ ವೈವಿಧ್ಯತೆಯ ಮಹತ್ವವನ್ನು ಒತ್ತಿಹೇಳಿದ ಭಾಗವತ್, “ವ್ಯತ್ಯಾಸಗಳನ್ನು ಗೌರವಿಸಬೇಕು. ಭಿನ್ನಾಭಿಪ್ರಾಯಗಳನ್ನು ಕಾನೂನುಬದ್ಧವಾಗಿ ವ್ಯಕ್ತಪಡಿಸಬೇಕು. ಸಮುದಾಯಗಳನ್ನು ಕೆರಳಿಸುವ ಪ್ರಯತ್ನ ಸ್ವೀಕಾರಾರ್ಹವಲ್ಲ. ಆಡಳಿತ ನ್ಯಾಯಯುತವಾಗಿರಬೇಕು. ಯುವಕರು ಜಾಗರೂಕರಾಗಿರಬೇಕು ಹಾಗೂ ಅಗತ್ಯವಿದ್ದಲ್ಲಿ ಮಧ್ಯಪ್ರವೇಶಿಸಬೇಕು. ‘ನಾವು–ಅವರು’ ಎಂಬ ಮನೋಭಾವ ದೇಶಕ್ಕೆ ಸೂಕ್ತವಲ್ಲ” ಎಂದು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News