×
Ad

ಉತ್ತರಪ್ರದೇಶ | ಇನ್ನೋರ್ವ ಬಿಎಲ್‌ಒ ಮೃತ್ಯು

ಎಸ್‌ಐಆರ್ ಕೆಲಸದ ಒತ್ತಡದ ಆರೋಪ

Update: 2025-12-02 21:10 IST

ಸಾಂದರ್ಭಿಕ ಚಿತ್ರ 

ಲಕ್ನೋ, ಡಿ. 2: ಉತ್ತರಪ್ರದೇಶದಲ್ಲಿ ಮತ್ತೊಬ್ಬರು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಮೃತಪಟ್ಟಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಕೆಲಸದ ಒತ್ತಡದಿಂದ ಅವರ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯೊಂದಿಗೆ ಎಸ್‌ಐಆರ್ ಕೆಲಸದ ಒತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾದ ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ 5ಕ್ಕೆ ತಲುಪಿದೆ.

ಮೃತಪಟ್ಟ ಬಿಎಲ್‌ಒವನ್ನು ಕಮಲಕಾಂತ್ ಶರ್ಮಾ (40) ಎಂದು ಗುರುತಿಸಲಾಗಿದೆ. ಅವರು ಹಾಥರಸ್ ಜಿಲ್ಲೆಯ ಸಿಕಂದರಾ ರಾವ್‌ನ ಬ್ರಹ್ಮಪುರಿ ಪ್ರದೇಶದ ನಿವಾಸಿ. ಅವರು ತಮ್ಮ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಶರ್ಮಾ ಅವರು ನವಲಿ ಲಾಲ್‌ಪುರ ಸಂಯುಕ್ತ ಶಾಲೆಯ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದರೊಂದಿಗೆ ಬಿಎಲ್‌ಒ ಆಗಿ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದರು.

ಮನೆಯ ಮೇಲಿನ ಮಹಡಿಯಿಂದ ಕೆಳಗೆ ಬಂದು ಚಹಾ ಕುಡಿಯುತ್ತಿದ್ದ ಸಂದರ್ಭ ಶರ್ಮಾ ಅವರಿಗೆ ಇದ್ದಕ್ಕಿದ್ದಂತೆ ತಲೆ ತಿರುಗಿತು. ಅವರು ಕುಸಿದು ಬಿದ್ದರು. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರು ಮಾರ್ಗ ಮಧ್ಯೆ ಸಾವನ್ನಪ್ಪಿದರು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.

ತನ್ನ ತಂದೆ ಬಿಎಲ್‌ಒ ಕರ್ತವ್ಯಕ್ಕೆ ಸಂಬಂಧಿಸಿದ ಕೆಲಸದ ಹೊರೆಯ ಕಾರಣದಿಂದ ಕಳೆದ ಕೆಲವು ದಿನಗಳಿಂದ ಒತ್ತಡಕ್ಕೊಳಗಾಗಿದ್ದರು ಎಂದು

ಶರ್ಮಾ ಅವರ ಪುತ್ರ ವಿನಾಯಕ ಹೇಳಿದ್ದಾರೆ.

‘‘ಅವರು ಬೆಳಗ್ಗೆ ಸುಮಾರು 7 ಗಂಟೆಗೆ ಚಹಾ ಕುಡಿಯಲು ಕೆಳಗೆ ಬಂದರು. ಈ ಸಂದರ್ಭ ಇದ್ದಕ್ಕಿದ್ದಂತೆ ಮೂರ್ಛೆ ಹೋದರು. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದರು ಎಂದು ವಿನಾಯಕ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News