Uttar Pradesh| ಆರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಮೇಲ್ಚಾವಣಿಯಿಂದ ಕೆಳಗೆಸೆದು ಕೊಲೆ: ಇಬ್ಬರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ | Photo Credit : freepik
ಬುಲಂದ್ ಶಹರ್ (ಉತ್ತರ ಪ್ರದೇಶ): ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ದುಷ್ಕರ್ಮಿಯೊಬ್ಬ, ಆಕೆಯನ್ನು ಮೇಲ್ಚಾವಣಿಯಿಂದ ಕೆಳಗೆಸದಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದಿದ್ದು, ತೀವ್ರವಾಗಿ ಗಾಯಗೊಂಡು ಬಾಲಕಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಕ್ಷಿಪ್ರ ತನಿಖೆ ನಡೆಸಿರುವ ಸಿಕಂದರಾಬಾದ್ ಪೊಲೀಸರು, ಸಣ್ಣ ಪ್ರಮಾಣದ ಗುಂಡಿನ ಚಕಮಕಿ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ರಾಜು ಹಾಗೂ ವೀರು ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಸಂತ್ರಸ್ತ ಕುಟುಂಬದ ಸದಸ್ಯರು ವಾಸಿಸುತ್ತಿದ್ದ ಸಿಕಂದರಾಬಾದ್ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮವೊಂದರ ಬಾಡಿಗೆ ಮನೆಯ ಕಟ್ಟಡದಲ್ಲಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ.
ಬಾಲಕಿ ತಾರಸಿಯ ಮೇಲೆ ಆಟವಾಡುವಾಗ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆಕೆ ಗಂಭೀರ ಸ್ಥಿತಿಯಲ್ಲಿ ಪಕ್ಕದ ಜಮೀನೊಂದರಲ್ಲಿ ಪತ್ತೆಯಾಗಿದ್ದಳು.
ಈ ಕುರಿತು ಮೃತ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಆರೋಪಿಗಳನ್ನು ಬಂಧಿಸಲು ತೆರಳಿದಾಗ ಕನ್ವಾರದಲ್ಲಿ ಆರೋಪಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬುಲಂದ್ ಶಹರ್ ಪೊಲೀಸ್ ವರಿಷ್ಠಾಧಿಕಾರಿ ಡಾ.ತೇಜ್ ವೀರ್ ಸಿಂಗ್, “ಪೊಲೀಸರು ಆರೋಪಿಗಳನ್ನು ಕೈಗಾರಿಕಾ ಪ್ರದೇಶದಲ್ಲಿ ಅಡ್ಡಗಟ್ಟಿದಾಗ ಅವರು ಪೊಲೀಸರ ಮೇಲೆ ಗುಂಡು ಹಾರಿಸಿದರು. ಅದಕ್ಕೆ ಪ್ರತಿಯಾಗಿ ಪೊಲೀಸರೂ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ತಾವು ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.