Uttar Pradesh | ಇಬ್ಬರು ಬಾಲಕಿಯರ ಅತ್ಯಾಚಾರ ಪ್ರಕರಣದ ಆರೋಪಿ ಎನ್‌ಕೌಂಟರ್ ನಲ್ಲಿ ಮೃತ್ಯು
Update: 2026-01-05 22:40 IST
ಸಾಂದರ್ಭಿಕ ಚಿತ್ರ | Photo Credit : freepik
ಲಕ್ನೋ, ಜ. 5: ಉತ್ತರಪ್ರದೇಶದ ಲಖಿಂಪುರಖೇರಿಯಲ್ಲಿ ಇಬ್ಬರು ಬಾಲಕಿಯರ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ಹಾಗೂ ಭೂಗತ ಪಾತಕಿಯನ್ನು ಸುಲ್ತಾನ್‌ಪುರ ಹಾಗೂ ಲಖಿಂಪುರ ಖೇರಿ ಪೊಲೀಸರು ಸೋಮವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೈದಿದ್ದಾರೆ.
ಎನ್‌ಕೌಂಟರ್‌ನಲ್ಲಿ ಭೂಗತ ಪಾತಕಿ ತಾಲಿಬ್ ಆಲಿಯಾಸ್ ಅಝಮ್ ಖಾನ್ ಹತ್ಯೆಯಾಗಿದ್ದಾನೆ. ಈತನನ್ನು ಬಂಧಿಸಲು ಅಥವಾ ಆತ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ 17 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಬಾಲಕಿಯರ ಸಾಮೂಹಿಕ ಅತ್ಯಾಚಾರ ಆರೋಪದಲ್ಲಿ ತಾಲಿಬ್ ಹಾಗೂ ಆತನ ಸಹವರ್ತಿಗಳಾದ ಸಲ್ಮಾನ್ ಹಾಗೂ ಮುಖ್ತರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲಖಿಂಪುರಖೇರಿ ಪೊಲೀಸರು ತಿಳಿಸಿದ್ದಾರೆ.