Uttar Pradesh | ಮಾಂಸದ ಅಂಗಡಿಗೆ ನುಗ್ಗಿ ಲೈಸೆನ್ಸ್ ತೋರಿಸಿ ಎಂದ ಸಂಘಪರಿವಾರದ ಕಾರ್ಯಕರ್ತರು; ಜನರು ID ಕಾರ್ಡ್ ಕೇಳುತ್ತಿದ್ದಂತೆ ಪರಾರಿಯಾದ ವೀಡಿಯೊ ವೈರಲ್
ʼಮೊಹಮ್ಮದ್ ದೀಪಕ್ ಇಫೆಕ್ಟ್ʼ ಎಂದ ಜನರು
Screengrab : X
ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಖುರೇಷಿ ಸಮುದಾದಕ್ಕೆ ಸೇರಿದ ಮಾಂಸದ ವ್ಯಾಪಾರಿಗಳ ಅಂಗಡಿಗಳ ಬಳಿ ಲೈಸೆನ್ಸ್ ತೋರಿಸಿ ಎಂದು ಅಧಿಕಾರಿಗಳ ಸೋಗಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ʼದಾಳಿʼ ನಡೆಸಿರುವ ಘಟನೆ ನಡೆದಿದೆ. ವ್ಯಾಪಾರಿಗಳು ಐಡಿ ಕಾರ್ಡ್ ತೋರಿಸಿ ಎಂದು ಜನರು ಒಗ್ಗಟ್ಟಾಗಿ ಪ್ರಶ್ನಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಪೋಸ್ಟ್ಗಳು ಹಾಗೂ ವಿಡಿಯೊಗಳಲ್ಲಿ, ಕೆಲವರು ತಮ್ಮನ್ನು ಅಧಿಕಾರಿಗಳೆಂದು ಪರಿಚಯಿಸಿಕೊಂಡು ಅಂಗಡಿಗಳಿಗೆ ತೆರಳಿ ಪರವಾನಗಿ ಪರಿಶೀಲನೆಯ ಹೆಸರಿನಲ್ಲಿ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಸ್ಥಳೀಯ ವ್ಯಾಪಾರಿಗಳು ಮತ್ತು ಜನರು ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿ, “ಮೊದಲು ನಿಮ್ಮ ಗುರುತಿನ ಚೀಟಿಗಳನ್ನು ತೋರಿಸಿ; ಯಾವ ಕಾನೂನಿನ ಅಡಿಯಲ್ಲಿ ಪರಿಶೀಲನೆ ನಡೆಸುತ್ತಿದ್ದೀರಿ?” ಎಂದು ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಗುರುತಿನ ದಾಖಲೆಗಳು ಅಥವಾ ಯಾವುದೇ ಅಧಿಕೃತ ಸಾಕ್ಷ್ಯ ತೋರಿಸದೇ ಗುಂಪು ಅಲ್ಲಿಂದ ವಾಪಾಸ್ ತೆರಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿದೆ.
ಕೆಲ ವರದಿಗಳ ಪ್ರಕಾರ, ಕೆಲವು ವ್ಯಕ್ತಿಗಳು ತಮ್ಮನ್ನು ಅಧಿಕಾರಿಗಳೆಂದು ಹೇಳಿಕೊಂಡು ಮಾಂಸದ ವ್ಯಾಪಾರಿಗಳ ಅಂಗಡಿಗಳಲ್ಲಿ ಪರವಾನಗಿಗಳನ್ನು ಪರಿಶೀಲಿಸಲು ಬಂದಿದ್ದರು. ಗುರುತಿನ ಚೀಟಿ ಕೇಳಿದಾಗ ನಿಂದಿಸಿ ಅಲ್ಲಿಂದ ತೆರಳಿದರು. ಸ್ಥಳೀಯರು ಕೂಡ ಒಟ್ಟುಗೂಡಿ ಆ ಗುಂಪನ್ನು ಅಲ್ಲಿಂದ ಓಡಿಸಿದರು ಎಂದು ತಿಳಿದು ಬಂದಿದೆ.
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜನರು, ಇದು ʼಮೊಹಮ್ಮದ್ ದೀಪಕ್ʼ ಇಫೆಕ್ಟ್ ಎಂದು ಹೇಳಿದ್ದಾರೆ.