Uttar Pradesh | ಅಪ್ರಾಪ್ತ ಮಕ್ಕಳ ಶೋಷಣೆ ಆರೋಪ; ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧ POCSO ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ | Photo Credit : PTI
ಪ್ರಯಾಗ್ರಾಜ್: ಅಪ್ರಾಪ್ತ ಮಕ್ಕಳ ಶೋಷಣೆ ಆರೋಪಕ್ಕೆ ಸಂಬಂಧಿಸಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಸ್ವಾಮಿ ಮುಕ್ತಾನಂದ ವಿರುದ್ಧ POCSO ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಫೆಬ್ರವರಿ 13ರಂದು ಇಬ್ಬರು ಅಪ್ರಾಪ್ತ ದೂರುದಾರರ ವೀಡಿಯೊ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡ ಬಳಿಕ, ಪೊಲೀಸ್ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ANI ವರದಿ ತಿಳಿಸಿದೆ.
ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ್ ಟ್ರಸ್ಟ್ಗೆ ಸಂಬಂಧಿಸಿದ ಅಶುತೋಷ್ ಬ್ರಹ್ಮಚಾರಿ, ಝುನ್ಸಿ ಪೊಲೀಸರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹಾಗೂ ಅವರ ಶಿಷ್ಯ ಸ್ವಾಮಿ ಮುಕ್ತಾನಂದ ವಿರುದ್ಧ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಜನವರಿ 28ರಂದು ಪೋಕ್ಸೊ ನ್ಯಾಯಾಲಯದ ಮೊರೆ ಹೋಗಿದ್ದರು.
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಆಶ್ರಮದಲ್ಲಿ ಅಪ್ರಾಪ್ತ ಮಕ್ಕಳನ್ನು ಶೋಷಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಪುರಾವೆಗಳಿರುವ ಸಿಡಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾಗಿ ಬ್ರಹ್ಮಚಾರಿ ತಿಳಿಸಿದ್ದಾರೆ.