ಪತಿಯ ಪೋಷಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಉತ್ತರ ಪ್ರದೇಶ ಬಿಜೆಪಿ ಸಂಸದರ ಸಹೋದರಿ ಆರೋಪ
ಸಂತ್ರಸ್ತೆಗೆ ಮಾವ ಥಳಿಸುತ್ತಿರುವ ವಿಡಿಯೊ ವೈರಲ್
ಇಟಾ: ನನ್ನ ಪತಿಯ ಪೋಷಕರು ನನ್ನ ಮೇಲೆ ಹಲ್ಲೆ ನಡೆಸಿ, ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಬಿಜೆಪಿ ಸಂಸದರೊಬ್ಬರ ಸಹೋದರಿ ದೂರು ನೀಡಿದ್ದಾರೆ ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ. ಈ ದೂರಿನೊಂದಿಗೆ, ದೂರುದಾರ ಮಹಿಳೆಯನ್ನು ಆಕೆಯ ಮಾವ ಕೋಲಿನಿಂದ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಫರೂಖಾಬಾದ್ ನ ಸಂಸದರಾದ ಮುಕೇಶ್ ರಜಪೂತ್ ಅವರ ಸಹೋದರಿ ರೀನಾ ಸಿಂಗ್ ಈ ದೂರು ದಾಖಲಿಸಿದ್ದು, ನನ್ನ ಮಾವ ಲಕ್ಷ್ಮಣ್ ಸಿಂಗ್ ಹಾಗೂ ನನ್ನ ಮೈದುನರಾದ ರಾಜೇಶ್ ಹಾಗೂ ಗಿರೀಶ್ ಸಿಂಗ್ ನನ್ನ ಮೇಲೆ ಹಲ್ಲೆ ನಡೆಸಿ, ನನ್ನನ್ನು ಹತ್ಯೆಗೈಯ್ಯುವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ, ರವಿವಾರ ಮಧ್ಯಾಹ್ನ ನಾನು ಸ್ನಾನ ಮಾಡುವಾಗ, ಗಿರೀಶ್ ಸಿಂಗ್ ಹಾಗೂ ಲಕ್ಷ್ಮಣ್ ಸಿಂಗ್ ನಾನು ಸ್ನಾನ ಮಾಡುತ್ತಿರುವುದನ್ನು ಕಿಟಕಿಯ ಮೂಲಕ ವಿಡಿಯೊ ಚಿತ್ರೀಕರಣ ಮಾಡುವ ಪ್ರಯತ್ನ ನಡೆಸಿದರು ಎಂದೂ ಅವರು ದೂರಿದ್ದಾರೆ.
ನಾನಿದನ್ನು ಪ್ರತಿಭಟಿಸಿದಾಗ ನನ್ನನ್ನು ನಿಂದಿಸಿ, ನನ್ನ ಮೇಲೆ ದೈಹಿಕ ಹಲ್ಲೆ ನಡೆಸಲಾಯಿತು ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ರೀನಾ ಸಿಂಗ್ ರನ್ನು ಲಕ್ಷ್ಮಣ್ ಸಿಂಗ್ ಕೋಲಿನಿಂದ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರೀನಾ ಸಿಂಗ್ ರ ದೂರನ್ನು ಆಧರಿಸಿ, ಲಕ್ಷ್ಮಣ್ ಸಿಂಗ್, ರಾಜೇಶ್ ಹಾಗೂ ಗಿರೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಈ ಪ್ರಾಂತ್ಯದ ಓರ್ವ ಪೊಲೀಸ್ ಅಧಿಕಾರಿಯಾದ ಚಮನ್ ಗೋಸ್ವಾಮಿ ತಿಳಿಸಿದ್ದಾರೆ.