ಉತ್ತರ ಪ್ರದೇಶ | ಮುಸ್ಲಿಂ ಮಹಿಳೆಗೆ ಹೆರಿಗೆ ಮಾಡಿಸಲು ವೈದ್ಯೆ ನಿರಾಕರಿಸಿದ ಪ್ರಕರಣ: ವೀಡಿಯೊ ಹಂಚಿಕೊಂಡ ಇಬ್ಬರು ಪತ್ರಕರ್ತರ ವಿರುದ್ಧ ಎಫ್‌ಐಆರ್
ಸಾಂದರ್ಭಿಕ ಚಿತ್ರ (AI)
ಜೌನ್ಪುರ್: ಉತ್ತರ ಪ್ರದೇಶದ ಜೌನ್ಪುರ್ ಸರಕಾರಿ ಮಹಿಳಾ ಆಸ್ಪತ್ರೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ವೈದ್ಯೆಯೊಬ್ಬರು ಧಾರ್ಮಿಕ ನೆಲೆಯಲ್ಲಿ ಹೆರಿಗೆ ಮಾಡಿಸಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಇಬ್ಬರು ಪತ್ರಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 30ರ ರಾತ್ರಿ ಸುಮಾರು 9.30ರ ವೇಳೆಗೆ ಬಿರಿಬರಿ ಗ್ರಾಮದ ನಿವಾಸಿ ಶಮಾ ಪರ್ವೀನ್ ಎಂಬ ಮಹಿಳೆಯನ್ನು ಜೌನ್ಪುರ್ ಸರಕಾರಿ ಮಹಿಳಾ ಆಸ್ಪತ್ರೆಗೆ ಕರೆತರಲಾಗಿದೆ. ಆ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯರು ಆಕೆಯನ್ನು ಪರೀಕ್ಷಿಸಿದ್ದರು ಎನ್ನಲಾಗಿದೆ.
ಆದರೆ, ಅಕ್ಟೋಬರ್ 1ರಂದು ಧಾರ್ಮಿಕತೆಯ ಆಧಾರದಲ್ಲಿ ನನಗೆ ಚಿಕಿತ್ಸೆ ನೀಡಲು ಕರ್ತವ್ಯನಿರತ ವೈದ್ಯರು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಶಮಾ ಪರ್ವೀನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೊದಲ್ಲಿ, "ನಾನು ಮುಸ್ಲಿಂ ಮಹಿಳೆಗೆ ಚಿಕಿತ್ಸೆ ನೀಡುವುದಿಲ್ಲ. ನಾನು ನಿನ್ನ ಹೆರಿಗೆ ಮಾಡಿಸುವುದಿಲ್ಲ" ಎಂದು ಕರ್ತವ್ಯನಿರತ ವೈದ್ಯರು ನನಗೆ ಹೇಳಿದ್ದು, "ನನ್ನನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕೊಂಡೊಯ್ಯಬೇಡಿ. ನನ್ನನ್ನು ಬೇರೆಡೆ ಕಳುಹಿಸಿ" ಎಂದು ಅವರು ಶುಶ್ರೂಷಕಿಗೆ ಸೂಚಿಸಿದರು ಎಂದೂ ಅವರು ಆರೋಪಿಸಿದ್ದಾರೆ.
ಆದರೆ, ಈ ಆರೋಪಗಳನ್ನು ಆಸ್ಪತ್ರೆಯ ಅಧಿಕಾರಿಗಳು ಅಲ್ಲಗಳೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಮಹೇಂದ್ರ ಗುಪ್ತ, ಈ ಆರೋಪಗಳಿಂದ ನನಗೆ ಅಚ್ಚರಿಯಾಗಿದ್ದು, ಘಟನೆಯ ಕುರಿತು ಸಂಬಂಧಿತ ವೈದ್ಯರಿಂದ ಸ್ಪಷ್ಟನೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
"ತನ್ನ ವಿರುದ್ಧದ ಆರೋಪವನ್ನು ವೈದ್ಯರು ನಿರಾಕರಿಸಿದ್ದಾರೆ. ಈ ಘಟನೆಯ ಕುರಿತು ವಿಚಾರಣೆಗೆ ಆದೇಶಿಸಲಾಗಿದ್ದು, ಈ ಕುರಿತು ಉನ್ನತ ಪ್ರಾಧಿಕಾರಗಳಿಗೆ ಮಾಹಿತಿ ನೀಡಲಾಗಿದೆ" ಎಂದು ಅವರು ತಿಳಿಸಿದ್ದಾರೆ.
ಈ ನಡುವೆ, ಶಮಾ ಪರ್ವೀನ್ ಅವರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಇಬ್ಬರು ಸ್ಥಳೀಯ ಪತ್ರಕರ್ತರಾದ ಮಯಾಂಕ್ ಶ್ರೀವಾಸ್ತವ ಹಾಗೂ ಮುಹಮ್ಮದ್ ಉಸ್ಮಾನ್ ಎಂಬವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇಬ್ಬರು ಪತ್ರಕರ್ತರು ಬಲವಂತವಾಗಿ ಹೆರಿಗೆ ಕೊಠಡಿಗೆ ನುಗ್ಗಿ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ ಹಾಗೂ ಆಸ್ಪತ್ರೆಯ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ್ದಾರೆ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕರು ನೀಡಿದ ದೂರನ್ನು ಅಧರಿಸಿ, ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಘಟನೆಯ ವಿರುದ್ಧ ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದ್ದು, ವಿರೋಧ ಪಕ್ಷಗಳು ಈ ಘಟನೆಯನ್ನು ನಾಚಿಕೆಗೇಡು ಎಂದು ಖಂಡಿಸಿದ್ದರೆ, ವಿರೋಧ ಪಕ್ಷಗಳ ಆರೋಪಗಳನ್ನು ಆಡಳಿತಾರೂಢ ಬಿಜೆಪಿ ಅಲ್ಲಗಳೆದಿದೆ.