ಉತ್ತರಪ್ರದೇಶ | ಪತ್ರಕರ್ತನ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ನಲ್ಲಿ ಹತ್ಯೆ
Photo : ETV Bharat
ಸೀತಾಪುರ (ಉ.ಪ್ರ.) ಆ. 7: ಪತ್ರಕರ್ತರೊಬ್ಬರ ಹತ್ಯೆ, ಇತರ ಅಪರಾಧಗಳಲ್ಲಿ ಬೇಕಾಗಿದ್ದ ಇಬ್ಬರು ಸಹೋದರರನ್ನು ವಿಶೇಷ ಕ್ಷಿಪ್ರ ಪಡೆ (ಎಸ್‌ಟಿಎಫ್) ಹಾಗೂ ಸ್ಥಳೀಯ ಪೊಲೀಸರ ಜಂಟಿ ತಂಡ ಗುರುವಾರ ಎನ್‌ಕೌಂಟರ್ ನಡೆಸಿ ಹತ್ಯೆಗೈದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಎನ್‌ಕೌಂಟರ್ ಬಗ್ಗೆ ಹತ್ಯೆಯಾದ ಪತ್ರಕರ್ತನ ಪತ್ನಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.
‘‘ಇಂದು ನಡೆದ ಎನ್ಕೌಂಟರ್ ಹಾಗೂ ಪೊಲೀಸರ ಕೆಲಸದ ಬಗ್ಗೆ ನಮಗೆ ಅತೃಪ್ತಿ ಇದೆ. ಪೊಲೀಸರು ಹೇಳಿರುವುದು ಎಲ್ಲವೂ ಕಟ್ಟುಕಥೆ. ನಾವು ಇದರಿಂದ ಎಂದೂ ತೃಪ್ತರಾಗಿಲ್ಲ’’ ಎಂದು ಅವರು ಹೇಳಿದ್ದಾರೆ.
ಪತ್ರಕರ್ತ ರಾಘವೇಂದ್ರ ಬಾಜಪೇಯಿ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಕ್ರಿಮಿನಲ್‌ಗಳು ಹರದೋಯಿ-ಸೀತಾಪುರ ಗಡಿಯನ್ನು ದಾಟಲು ಯೋಜಿಸುತ್ತಿದ್ದಾರೆ ಎಂಬ ಬೇಹುಗಾರಿಕೆ ಮಾಹಿತಿಯನ್ನು ಪೊಲೀಸರು ಸ್ವೀಕರಿಸಿದರು ಎಂದು ಪೊಲೀಸ್ ಅಧೀಕ್ಷಕ ಅಂಕುರ್ ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಾಹಿತಿ ಆಧಾರದಲ್ಲಿ ಎಸ್ಟಿಎಫ್ ಹಾಗೂ ಸೀತಾಪುರ ಪೊಲೀಸರ ಜಂಟಿ ತಂಡ ಪಿಸಾವನ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿತು ಹಾಗೂ ಅಲ್ಲಿ ಇಬ್ಬರು ಆರೋಪಿಗಳಾದ ರಾಜು ತಿವಾರಿ ಆಲಿಯಾಸ್ ರಿಝ್ವಾನ್ ಖಾನ್ ಹಾಗೂ ಸಂಜಯ್ ತಿವಾರಿ ಆಲಿಯಾಸ್ ಅಕೀಲ್ ಖಾನ್‌ನನ್ನು ಮೋಟಾರು ಸೈಕಲ್‌ನಲ್ಲಿ ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಮೋಟಾರು ಬೈಕ್ ನಿಲ್ಲಿಸಲು ಸೂಚಿಸಿದಾಗ, ಇಬ್ಬರೂ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದರು. ಪೊಲೀಸರು ಪ್ರತಿದಾಳಿ ನಡೆಸಿದರು. ಈ ಸಂದರ್ಭ ನಡೆದ ಗುಂಡಿನ ಕಾಳಗದಲ್ಲಿ ಅವರಿಬ್ಬರು ಹತರಾದರು ಎಂದು ಹೆಚ್ಚುವರಿ ಪ್ರಧಾನ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಅಮಿತಾಭ್ ಯಶ್ ತಿಳಿಸಿದ್ದಾರೆ.