×
Ad

ಮೂತ್ರ ವಿಸರ್ಜನೆ ಪ್ರಕರಣ: ಆರೋಪಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಸಂತ್ರಸ್ತ

Update: 2023-07-08 13:58 IST

ಆರೋಪಿ ಪ್ರವೇಶ್ ಶುಕ್ಲಾ (Photo : PTI)

ಭೋಪಾಲ್: ಸಿದ್ಧಿ ಜಿಲ್ಲೆಯಲ್ಲಿ ಜರುಗಿದ್ದ ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ತ ವ್ಯಕ್ತಿಯು, ಆರೋಪಿಗೆ ತನ್ನ ತಪ್ಪಿನ ಅರಿವಾಗಿರುವುದರಿಂದ ಕೃತ್ಯದಲ್ಲಿ ಭಾಗಿಯಾಗಿದ್ದ ಆತನನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು thehindu.com ವರದಿ ಮಾಡಿದೆ.

ಆದಿವಾಸಿ ಸಮುದಾಯಕ್ಕೆ ಸೇರಿರುವ ಸಂತ್ರಸ್ತ ದಶ್ಮತ್ ರಾವತ್ ಮೇಲೆ ಮೂತ್ರ ವಿಸರ್ಜಿಸಿದ ಆರೋಪ ಎದುರಿಸುತ್ತಿರುವ ಪ್ರವೇಶ್ ಶುಕ್ಲಾನನ್ನು ಬುಧವಾರ ಪೊಲೀಸರು ಬಂಧಿಸಿದ್ದರು. ಈ ಘಟನೆಯ ವಿಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.

ಸದ್ಯ ಜೈಲಿನಲ್ಲಿರುವ ಆರೋಪಿ ಶುಕ್ಲಾನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್‌ಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರೊಂದಿಗೆ ಸಿದ್ಧಿ ಜಿಲ್ಲೆಯಲ್ಲಿರುವ ಪ್ರವೇಶ್ ಶುಕ್ಲಾಗೆ ಸೇರಿದ ನಿವಾಸದ ಅಕ್ರಮ ನಿರ್ಮಾಣ ಭಾಗವೊಂದನ್ನೂ ನೆಲಸಮಗೊಳಿಸಲಾಗಿತ್ತು.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ದಶ್ಮತ್ ರಾವತ್, "ಆರೋಪಿ ಪ್ರವೇಶ್ ಶುಕ್ಲಾನಿಂದ ತಪ್ಪಾಗಿದೆ. ಈ ಹಿಂದೆ ಏನು ನಡೆದಿತ್ತೊ, ಆ ತಪ್ಪಿನ ಅರಿವು ಆತನಿಗಾಗಿದೆ. ಹೀಗಾಗಿ ಈಗ ಆತನನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.

ಆರೋಪಿಯ ಅಪಮಾನಕಾರಿ ಕೃತ್ಯದ ಹೊರತಾಗಿಯೂ ನೀವು ಈ ಒತ್ತಾಯ ಮಾಡುತ್ತಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಸಂತ್ರಸ್ತ ದಶ್ಮತ್ ರಾವತ್, "ಹೌದು, ನನ್ನ ಒಪ್ಪಿಗೆಯಿದೆ.. ಆತ ನಮ್ಮ ಗ್ರಾಮದ ಪಂಡಿತನಾಗಿದ್ದು, ನಾವು ಆತನನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, "ನಮ್ಮ ಗ್ರಾಮಕ್ಕೆ ರಸ್ತೆ ನಿರ್ಮಿಸಬೇಕು ಎಂಬ ಬೇಡಿಕೆ ಹೊರತುಪಡಿಸಿ ಸರ್ಕಾರಕ್ಕೆ ನನ್ನಿಂದ ಬೇರಾವುದೇ ಆಗ್ರಹವಿಲ್ಲ" ಎಂದೂ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News