×
Ad

ಉತ್ತರಾಖಂಡ ಸರ್ಕಾರ ನೀಡಿದ 5 ಸಾವಿರ ರೂಪಾಯಿ ಚೆಕ್ ತಿರಸ್ಕರಿಸಿದ ಸಂತ್ರಸ್ತರು

Update: 2025-08-10 08:39 IST

PC: x.com/thenewsdrum

ಉತ್ತರಕಾಶಿ: ಮೇಘಸ್ಫೋಟ ಮತ್ತು ದಿಢೀರ್ ಪ್ರವಾಹದಿಂದ ಕಂಗೆಟ್ಟಿರುವ ಉತ್ತರಕಾಶಿಯ ಧರಾಲಿ ಗ್ರಾಮಸ್ಥರಿಗೆ ತಲಾ 5 ಸಾವಿರ ರೂಪಾಯಿ ಮೌಲ್ಯದ "ತಕ್ಷಣದ ಪರಿಹಾರ" ಚೆಕ್ಕುಗಳನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ ಆಗಿರುವ ವ್ಯಾಪಕ ಹಾನಿಗೆ ಹೋಲಿಸಿದರೆ ಈ ಪರಿಹಾರ ಮೊತ್ತ "ಅಸಮರ್ಪಕ" ಎಂದು ಆಕ್ರೋಶ ವ್ಯಕ್ತಪಡಿಸಿ ಹಲವು ಮಂದಿ ಸಂತ್ರಸ್ತರು ಇದನ್ನು ತಿರಸ್ಕರಿಸಿದ್ದಾರೆ.

"ನಾವು ಅನುಭವಿಸಿದ ಸಂಕಷ್ಟಗಳಿಗೆ ಹೋಲಿಸಿದರೆ ಇದು ನಮಗೆ ಮಾಡಿದ ಅವಮಾನ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾವು ನಮ್ಮ ಕುಟುಂಬ, ಮನೆ, ಕೋಟ್ಯಂತರ ರೂಪಾಯಿಯ ವ್ಯವಹಾರ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸರ್ಕಾರ ನೀಡಿರುವ ಮೊತ್ತ ನಮಗೆ ಮಾಡಿದ ಅವಮಾನ ಎಂದು ಗ್ರಾಮಸ್ಥರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ಭೀಕರ ವಿಕೋಪದ ಬಳಿಕ ಈ ಪ್ರದೇಶದಲ್ಲಿ ವಿದ್ಯುತ್ ಇಲ್ಲ. ಆದರೆ ವಿಕೋಪ ಸಂಭವಿಸಿ ನಾಲ್ಕು ದಿನಗಳ ಬಳಿಕ ಮೊಂಬತ್ತಿ ಪ್ಯಾಕೆಟ್ ಗಳನ್ನು ವಿತರಿಸಿದ್ದಾರೆ. "ನಾವು ಕರಾಳ ರಾತ್ರಿಗಳನ್ನು ಕಳೆದಿದ್ದೇವೆ. ಆಹಾರ ಬೇಯಿಸಿಕೊಳ್ಳಲು ಸೌದೆ ಬಳಸುತ್ತಿದ್ದೇವೆ. ಸರ್ಕಾರ ಪಡಿತರದ ಬಗ್ಗೆ ಮಾತನಾಡುತ್ತಿದೆ. ಆದರೆ ಅದು ಕೂಡಾ ನಮಗೆ ತಲುಪಿಲ್ಲ. ಅನ್ನಕ್ಕಾಗಿ ನಾವು ಮನೆ ಮನೆ ಅಲೆಯುವ ಪರಿಸ್ಥಿತಿ ಇದೆ" ಎಂದು ಮತ್ತೊಬ್ಬರು ಕರಾಳ ಚಿತ್ರಣ ತೆರೆದಿಟ್ಟಿದ್ದಾರೆ.

ನೆರವು ತೀರಾ ವಿಳಂಬವಾಗುತ್ತಿರುವ ಬಗ್ಗೆ ಶುಕ್ರವಾರ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, "ಮೋದಿ ಘಾಮ್ ತಾಪೋ" ಎಂಬ ಘೋಷಣೆ ಕೂಗಿದರು. ಪ್ರಧಾನಿ ಮೋದಿಯವರು ಕಳೆದ ಮಾರ್ಚ್ನ ಲ್ಲಿ ಹರ್ಸಿಲ್ ಮತ್ತು ಮುಖ್ಬಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಕರೆ ನೀಡಿದ್ದರು. ಇದೀಗ ಪ್ರತಿ ಗ್ರಾಮಸ್ಥರು ಮೂಲಸೌಕರ್ಯಗಳಿಗಾಗಿ ಹೆಣಗಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದರು. ತಕ್ಷಣದ ಪರಿಹಾರವಾಗಿ 5 ಸಾವಿರ ರೂಪಾಯಿ ನೀಡಲಾಗಿದ್ದು, ಒಟ್ಟು ಹಾನಿಯನ್ನು ಅಂದಾಜಿಸಲಾಗುತ್ತಿದೆ ಎಂದು ವಿಕೋಪ ನಿರ್ವಹಣಾ ಅಧಿಕಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News