ಇಂಡಿಗೊ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳ ಮೋಕ್ಷ ಮಾಡಿದ ವ್ಯಕ್ತಿ: ವೀಡಿಯೋ ವೈರಲ್
PC : X\ @iamnarendranath
ಮುಂಬೈ: ಮುಂಬೈನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ವ್ಯಕ್ತಿಯೊಬ್ಬ ತನ್ನ ಸಹ ಪ್ರಯಾಣಿಕನಿಗೆ ಕಪಾಳ ಮೋಕ್ಷ ಮಾಡಿರುವ ಆಘಾತಕಾರಿ ಘಟನೆ ನಡೆದಿದ್ದು, ಇದರಿಂದ ಸಹ ಪ್ರಯಾಣಿಕ ಕೆಲಕಾಲ ಆಘಾತಕ್ಕೀಡಾದರು ಎಂದು ವರದಿಯಾಗಿದೆ.
ಶುಕ್ರವಾರ ಮುಂಬೈನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತಲೆಗೆ ಟೋಪಿ ಧರಿಸಿ, ಮುಸ್ಲಿಂ ಸಮುದಾಯದ ವ್ಯಕ್ತಿಯಂತೆ ತೋರುತ್ತಿದ್ದ ಸಹ ಪ್ರಯಾಣಿಕನೋರ್ವನಿಗೆ ಮತ್ತೋರ್ವ ಪ್ರಯಾಣಿಕ ಕಪಾಳ ಮೋಕ್ಷ ಮಾಡಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಅವರು ಆಘಾತಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ಮೇಲೆ ಈ ಅನಿರೀಕ್ಷಿತ ದಾಳಿ ನಡೆಯುವುದಕ್ಕೂ ಮುನ್ನ, ಆರೋಗ್ಯ ಸಮಸ್ಯೆ ಎದುರಿಸಿದ್ದ ಅವರನ್ನು ವಿಮಾನದ ಸಿಬ್ಬಂದಿಗಳು ಉಪಚರಿಸಿದ್ದರು ಎನ್ನಲಾಗಿದೆ.
ಟೋಪಿ ಧರಿಸಿದ್ದ ವ್ಯಕ್ತಿಯ ಕೃತ್ಯವನ್ನು ಇನ್ನಿತರ ಸಹ ಪ್ರಯಾಣಿಕರು ಆಕ್ಷೇಪಿಸಿದಾಗ, ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಆ ವ್ಯಕ್ತಿ, ಆತನಿಂದಾಗಿ ನಾವು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಹಿಂದಿಯಲ್ಲಿ ಪ್ರತ್ಯುತ್ತರ ನೀಡಿದ್ದಾನೆ.
ಈ ಘಟನೆಯ ದೃಶ್ಯಾವಳಿಯಲ್ಲಿ ವಿಮಾನದ ಸಿಬ್ಬಂದಿಯೊಂದಿಗೆ ವಿಮಾನ ಪರಿಚಾರಕಿಯರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುತ್ತಿರುವುದು ಸೆರೆಯಾಗಿದೆ. ಅವರು ಕೈಯೆತ್ತದಂತೆ ಆ ಆಕ್ರಮಣಕಾರಿ ಪ್ರಯಾಣಿಕನಿಗೆ ಸೂಚಿಸುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಈ ಘಟನೆಯನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು, “ನಮಗೆಲ್ಲರಿಗೂ ಸಮಸ್ಯೆಯಿದೆ. ಆದರೆ, ನೀವು ನಿಮ್ಮ ಕೈಯೆತ್ತಬಾರದು” ಎಂದು ಆಕ್ಷೇಪಿಸುತ್ತಿರುವುದೂ ಈ ವೀಡಿಯೋದಲ್ಲಿ ಕಂಡು ಬಂದಿದೆ.
ದಾಳಿ ನಡೆಸಿದ ಪ್ರಯಾಣಿಕನನ್ನು ವಿಮಾನದ ಸಿಬ್ಬಂದಿಗಳು ಬೆಂಗಾವಲಿನೊಂದಿಗೆ ವಿಮಾನದ ನಿರ್ಗಮನ ದ್ವಾರದತ್ತ ಕರೆದೊಯ್ಯುತ್ತಿರುವುದರೊಂದಿಗೆ ಈ ವೀಡಿಯೋ ಅಂತ್ಯಗೊಂಡಿದ್ದು, ಈ ಘಟನೆ ಎಲ್ಲಿ ನಡೆಯಿತು ಎಂಬುದಿನ್ನೂ ಅಸ್ಪಷ್ಟವಾಗಿದೆ. ಈ ವೀಡಿಯೋ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕೃತ್ಯ ನಡೆಸಿದ ಪ್ರಯಾಣಿಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಸಂಜಯ್ ಹೆಗಡೆ, ವಿಮಾನ ಯಾನ ಸಂಸ್ಥೆಯ ಕ್ರಮದ ಕುರಿತು ಪ್ರಶ್ನಿಸಿದ್ದಾರೆ. “ದಾಳಿಕೋರ ಪ್ರಯಾಣಿಕನ ವಿರುದ್ಧ ವಿಮಾನ ಯಾನ ಸಂಸ್ಥೆ ಯಾವ ಕ್ರಮ ಕೈಗೊಂಡಿದೆ? ಆತನನ್ನೇಕೆ ವಿಮಾನದಿಂದ ಕೆಳಗಿಳಿಸಲಿಲ್ಲ ಹಾಗೂ ವಿಮಾನದಲ್ಲಿ ಪ್ರಯಾಣಿಸುವಂತಿಲ್ಲ ಪಟ್ಟಿಗೆ ಯಾಕೆ ಸೇರ್ಪಡೆ ಮಾಡಿಲ್ಲ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ, ತನ್ನ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ವಿಮಾನದ ಸಿಬ್ಬಂದಿಗಳು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯ ಕುರಿತು ಇಂಡಿಗೊ ವಿಮಾನ ಯಾನ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಪ್ರಕಟನೆ ಬಿಡುಗಡೆ ಮಾಡದಿದ್ದರೂ, ಅದು ಆತನನ್ನು ಅಡ್ಡಿಪಡಿಸುವ ಪ್ರಯಾಣಿಕ ಎಂದು ವರ್ಗೀಕರಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.