×
Ad

ಕೇರಳ: ಪ್ರತಿಭಟನಾ ರ‍್ಯಾಲಿಯಲ್ಲಿ ಹಿಂಸಾಚಾರ; ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲು

Update: 2023-12-24 21:15 IST

Photo Credit: PTI

ತಿರುವನಂತಪುರ: ಡಿಜಿಪಿ ಕಚೇರಿಗೆ ಕಾಂಗ್ರೆಸ್ ನ ಪ್ರತಿಭಟನಾ ರ‍್ಯಾಲಿ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಕೇರಳ ಪೊಲೀಸರು ರಾಜ್ಯ ಕಾಂಗ್ರೆಸ್ ವರಿಷ್ಠ ಕೆ. ಸುಧಾಕರನ್, ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್ ಹಾಗೂ ಹಿರಿಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲಾ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರ ವಿರುದ್ಧ ಗಲಭೆ, ರಸ್ತೆ ತಡೆ, ಕರ್ತವ್ಯ ನಿರ್ವಹಿಸಲು ಸರಕಾರಿ ಉದ್ಯೋಗಿಗಳಿಗೆ ಅಡ್ಡಿ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಶನಿವಾರ ತಿಳಿಸಿದ್ದಾರೆ.

ಸುಧಾಕರನ್ ಹಾಗೂ ಸತೀಶನ್ ಅವರಲ್ಲದೆ, ಸಂಸದರಾದ ಶಶಿ ತರೂರು, ಕೋಡಿಕುನ್ನಿಲ್ ಸುರೇಶ್, ಅಡೂರು ಪ್ರಕಾಶ್, ಕೆ. ಮುರಳೀಧರನ್, ಜೇಬಿ ಮಾಥರ್, ಶಾಸಕ ರಮೇಶ್ ಚೆನ್ನಿತಾಲ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘‘ಸಭೆ ಬಹುತೇಕ ಮುಗಿದಿತ್ತು. ಈ ಸಂದರ್ಭ ಪ್ರತಿಭಟನಕಾರರು ಬ್ಯಾರಿಕೇಡ್ಗಳನ್ನು ಅಲುಗಾಡಿಸಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ನಾವು ಜಲಪಿರಂಗಿ ಪ್ರಯೋಗಿಸಲು ಆರಂಭಿಸಿದೆವು. ಇದರಿಂದ ಅವರು ಸಿಟ್ಟಿಗೆದ್ದರು ಹಾಗೂ ಕಲ್ಲು ತೂರಾಟ ನಡೆಸಿದರು. ಅನಂತರ ನಾವು ಅಶ್ರುವಾಯು ಸಿಡಿಸಬೇಕಾಯಿತು ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 300ರಿಂದ 400 ಜನರು ಪ್ರತಿಭಟನೆಯ ಭಾಗವಾಗಿದ್ದರು. ಆದರೆ, ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News