ಮಾದಕ ದ್ರವ್ಯ ಕಳ್ಳಸಾಗಣೆಗೆ ಸಂಬಂಧಿಸಿದ ಭಾರತೀಯ ಉದ್ಯಮಿಗಳಿಗೆ, ಕುಟುಂಬಗಳಿಗೆ ವೀಸಾ ಇಲ್ಲ: ಯುಎಸ್
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಮೆರಿಕದಲ್ಲಿ ಮಾದಕ ದ್ರವ್ಯ ಬಿಕ್ಕಟ್ಟಿಗೆ ಕಾರಣವಾಗಿರುವ ಸಂಶ್ಲೇಷಿತ ಓಪಿಯಾಡ್ ಫೆಂಟಾನಿಲ್ ತಯಾರಿಕೆಯ ಮೂಲ ರಾಸಾಯನಿಕಗಳ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಭಾರತೀಯ ಉದ್ಯಮಿಗಳು ಮತ್ತು ಅವರ ಕುಟುಂಬ ಸದಸ್ಯರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಮತ್ತು ನಂತರದ ಮರುಅರ್ಜಿಗಳನ್ನು ನಿರಾಕರಿಸಲಾಗಿದೆ ಎಂದು ದಿಲ್ಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯು ಗುರುವಾರ ತಿಳಿಸಿದೆ.
ಹೇಳಿಕೆಯು ಯಾರದೇ ಹೆಸರನ್ನು ಉಲ್ಲೇಖಿಸಿಲ್ಲ, ಆದರೆ ವೀಸಾ ನಿರಾಕರಣೆ ನಿರ್ಧಾರವು ಅವರನ್ನು ಮತ್ತು ಅವರ ನಿಕಟ ಕುಟುಂಬ ಸದಸ್ಯರನ್ನು ಅಮೆರಿಕಕ್ಕೆ ಪ್ರಯಾಣಿಸಲು ಅನರ್ಹಗೊಳಿಸುತ್ತದೆ ಎಂದು ತಿಳಿಸಿದೆ. ಫೆಂಟಾನಿಲ್ ಕಳ್ಳಸಾಗಣೆಯೊಂದಿಗೆ ಗುರುತಿಸಿಕೊಂಡ ಕಂಪನಿಗಳ ಹಿರಿಯ ಅಧಿಕಾರಿಗಳು ವೀಸಾಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದಾಗ ರಾಯಭಾರ ಕಚೇರಿಯು ಆ ಬಗ್ಗೆ ಎಚ್ಚರಿಕೆ ವಹಿಸಲಿದೆ ಎಂದು ಹೇಳಿಕೆಯು ತಿಳಿಸಿದೆ.
ಮಾದಕ ದ್ರವ್ಯ ಕಳ್ಳಸಾಗಣೆ ವಿರುದ್ಧ ತನ್ನ ಹೋರಾಟಕ್ಕೆ ಅಮೆರಿಕವು ಬದ್ಧವಾಗಿದೆ. ಮಾದಕ ದ್ರವ್ಯಗಳ ಉತ್ಪಾದನೆ ಮತ್ತು ಅಮೆರಿಕಕ್ಕೆ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಅಧಿಕಾರಿಗಳು ತಮ್ಮ ಕುಟುಂಬಗಳೊಂದಿಗೆ ಅಮೆರಿಕಕ್ಕೆ ಪ್ರವೇಶ ನಿರಾಕರಣೆ ಸೇರಿದಂತೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಯಭಾರ ಕಚೇರಿಯು ಹೇಳಿದೆ.
‘ಉಭಯ ದೇಶಗಳು ಎದುರಿಸುತ್ತಿರುವ ಈ ಸವಾಲನ್ನು ಎದುರಿಸುವಲ್ಲಿ ಭಾರತ ಸರಕಾರದಲ್ಲಿನ ನಮ್ಮ ಸಹವರ್ತಿಗಳ ನಿಕಟ ಸಹಕಾರಕ್ಕಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ. ಒಟ್ಟಿಗೆ ಕೆಲಸ ಮಾಡುವ ಮೂಲಕ ನಮ್ಮ ಎರಡೂ ಸರಕಾರಗಳು ಈ ಅಂತರರಾಷ್ಟ್ರಿಯ ಬೆದರಿಕೆಯನ್ನು ನಿವಾರಿಸಬಹುದು ಮತ್ತು ನಮ್ಮೆರಡೂ ದೇಶಗಳ ಜನರನ್ನು ಮಾದಕ ದ್ರವ್ಯಗಳ ಪಿಡುಗಿನಿಂದ ಸುರಕ್ಷಿತರನ್ನಾಗಿಸಬಹುದು’ ಎಂದೂ ಅದು ತಿಳಿಸಿದೆ.