×
Ad

Kerala| ಸೌದಿ ಅರೇಬಿಯಾದ ಪ್ರಭಾವಿ ಉದ್ಯಮಿ ವಿ.ಪಿ.ಮುಹಮ್ಮದ್‌ ಅಲಿ ಅಪಹರಣ; ಗಲ್ಫ್‌ ನ ಮಲಯಾಳಿಗಳಲ್ಲಿ ಭಾರೀ ಕಳವಳ

Update: 2025-12-08 22:41 IST

ವಿ.ಪಿ. ಮುಹಮ್ಮದ್‌ ಅಲಿ |Photo Credit : madhyamamonline.com

 ಕೊಚ್ಚಿ: ಸೌದಿ ಅರೆಬಿಯಾದ ಜಿದ್ದಾ ಸೇರಿದಂತೆ ಗಲ್ಫ್‌ ದೇಶಗಳಲ್ಲಿ ಪರಿಚಿತರಾಗಿರುವ ಕೇರಳದ ಉದ್ಯಮಿ ವಿ.ಪಿ. ಮುಹಮ್ಮದ್‌ ಅಲಿ ಅವರನ್ನು ಅಪಹರಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಅಂದು ಸಂಜೆ 6.30ರ ವೇಳೆಗೆ ಸೌದಿ ಅರೇಬಿಯದ ಜಿದ್ದಾಕ್ಕೆ ಮರಳಲು ಕೊಚ್ಚಿ ನೆಡುಮಶ್ಶೇರಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮುಹಮ್ಮದ್‌ ಅಲಿ ಅವರ ಕಾರನ್ನು ಅಡ್ಡಗಟ್ಟಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಮಲಪ್ಪುರಂ–ಪಾಲಕ್ಕಾಡ್‌ ಗಡಿಯ ಅರಂಗೊಟ್ಟುಕರವಿಗೆ ಮುಹಮ್ಮದ್ ಅಲಿ ಅವರು ತಲುಪುತ್ತಿದ್ದಂತೆ ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿದ ತಂಡವು ಅವರ ವಾಹನವನ್ನು ಅಡ್ಡಗಟ್ಟಿತು ಎನ್ನಲಾಗಿದೆ. ಬಳಿಕ, ಬಂದೂಕು ತೋರಿಸಿ ಬೆದರಿಸಿದ ಅಪರಿಚಿತರು ಅವರನ್ನು ಬಲವಂತವಾಗಿ ಕಾರಿನಿಂದ ಇಳಿಸಿ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಪರಾರಿಯಾದರು ಎಂದು ತಿಳಿದು ಬಂದಿದೆ.

ಅಪಹರಣಕಾರರು ಅವರನ್ನು ಪಾಲಕ್ಕಾಡ್‌ ಜಿಲ್ಲೆಯ ಕೊಥಕುರುಸ್ಸಿಯಲ್ಲಿರುವ ಮನೆಯೊಂದರಲ್ಲಿ ಬಂಧನದಲ್ಲಿಟ್ಟಿದ್ದರು ಎನ್ನಲಾಗಿದೆ. ರವಿವಾರ ಮುಂಜಾನೆ ಅಪಹರಣಕಾರರು ನಿದ್ರಿಸುತ್ತಿದ್ದ ವೇಳೆ ಉದ್ಯಮಿ ವಿ.ಪಿ.ಮುಹಮ್ಮದ್‌ ಅಲಿ ತಪ್ಪಿಸಿಕೊಂಡು ಹತ್ತಿರದ ಮಸೀದಿಗೆ ಓಡಿ ಸಹಾಯ ಕೋರಿದರು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.

ಜಿದ್ದಾ ಸೇರಿದಂತೆ ಗಲ್ಫ್‌ ದೇಶಗಳಲ್ಲಿ ಪರಿಚಿತರಾಗಿರುವ ಕೇರಳದ ಉದ್ಯಮಿ ವಿ.ಪಿ. ಮುಹಮ್ಮದ್‌ ಅಲಿ ಅವರ ಅಪಹರಣ ಪ್ರಕರಣ ಮಲಯಾಳಿ ವಲಸಿಗರಲ್ಲಿ ಆತಂಕ ಮೂಡಿಸಿದೆ. ಐದು ದಶಕಗಳಿಗೂ ಹೆಚ್ಚುಕಾಲ ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಭಾವ ಬೀರಿರುವ ಮುಹಮ್ಮದ್‌ ಅಲಿ, ಮಲಪ್ಪುರಂ ಜಿಲ್ಲೆಯ ಕಾಳಿಕಾವು ಸಮೀಪದ ಪೂಂಗೋಡ್‌ ಮೂಲದವರು.

ಸೌದಿ ಅರೇಬಿಯಾ, ಗಲ್ಫ್‌ ರಾಷ್ಟ್ರಗಳು ಹಾಗೂ ಕೇರಳದಲ್ಲಿ ಹಲವು ಉದ್ಯಮ ಕೇಂದ್ರಗಳನ್ನು ಹೊಂದಿರುವ ಅವರು ಜಿದ್ದಾ ನ್ಯಾಷನಲ್‌ ಆಸ್ಪತ್ರೆ ಮತ್ತು ರಾಯನ್‌ ಮೆಡಿಕಲ್‌ ಗ್ರೂಪ್‌ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ವಲಸಿಗ ಸಮುದಾಯಕ್ಕೆ ಅವರು ನೀಡುತ್ತಿರುವ ಕೊಡಿಗೆಗೆ ಅವರು ಹೆಚ್ಚು ಪರಿಚಿತರು. ಈಗ ಅವರನ್ನು ಅಪಹರಣ ಮಾಡಿಸಿರುವ ಸುದ್ದಿ ಗಲ್ಫ್‌ನ ಮಲಯಾಳಿಗಳನ್ನು ಕೆರಳಿಸಿದೆ.

ಅಪಹರಣದ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ನೀಲಗಿರಿಯಲ್ಲಿರುವ ಕಾಲೇಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ವಿವಾದದ ಹಿನ್ನಲೆಯಲ್ಲಿ, ಅಪಹರಣದಲ್ಲಿ ಪ್ರತಿಸ್ಪರ್ಧಿಗಳ ಕೈವಾಡವಿರಬಹುದು ಎಂದು ಕುಟುಂಬದವರು ಶಂಕಿಸಿದ್ದಾರೆ. ಆದರೆ ಪೊಲೀಸರು ಇನ್ನೂ ಯಾರನ್ನೂ ಬಂಧಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News