ನೀರಿನ ಕೊರತೆಯಿಂದ ಲ್ಯುಟಿನ್ಸ್ ದಿಲ್ಲಿಯಲ್ಲಿ ನೀರಿಗಾಗಿ ಹಾಹಾಕಾರ ಸಾಧ್ಯತೆ: ಸಂಪ್ಗಳಿಗೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣದಲ್ಲಿ ಶೇ. 40ರಷ್ಟು ಕುಸಿತ
Photo : indianexpress.com
ಹೊಸದಿಲ್ಲಿ: ದಿಲ್ಲಿಯ ಪ್ರತಿಷ್ಠಿತ ಪ್ರದೇಶವಾದ ಲ್ಯುಟಿನ್ಸ್ ದಿಲ್ಲಿ ಸೇರಿದಂತೆ ಹೊಸ ದಿಲ್ಲಿಯ ಹಲವಾರು ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗಬಹುದು ಎಂದು ಹೊಸ ದಿಲ್ಲಿ ಮಹಾನಗರ ಪಾಲಿಕೆ ಸೋಮವಾರ ಹೇಳಿದೆ. ತಿಲಕ್ ಮಾರ್ಗ್ ಹಾಗೂ ಬೆಂಗಾಲಿ ಮಾರ್ಕೆಟ್ನ ಸಂಪ್ ಗಳಿಗೆ ಶೇ. 40ರಷ್ಟು ನೀರು ಪೂರೈಕೆಯ ಕೊರತೆ ಇರುವುದರಿಂದ, ಇದಕ್ಕೆ ಹೊಂದಿಕೊಳ್ಳಲು ದಿಲ್ಲಿಯ ನಿವಾಸಿಗಳು ಹಾಗೂ ವರ್ತಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಈ ಕೊರತೆಯಿಂದಾಗಿ ದಿಲ್ಲಿಯ ಮುಖ್ಯ ಪ್ರದೇಶಗಳಾದ ಬೆಂಗಾಲಿ ಮಾರ್ಕೆಟ್, ಅಶೋಕ ರಸ್ತೆ, ಹರಿಚಂದ್ ಮಾರ್ತೂರ್ ಲೇನ್, ಕೊಪರ್ನಿಕಸ್ ಮಾರ್ಗ್, ಪುರಾನಾ ಕಿಲಾ ರಸ್ತೆ, ಬಾಬರ್ ರಸ್ತೆ, ಬರಖಂಬ, ಕೆ.ಜಿ.ಮಾರ್ಗ್, ವಿಂಡ್ಸರ್ ಪ್ಯಾಲೇಸ್, ಫಿರೋಝ್ ಶಾ ಮಾರ್ಗ್, ಕ್ಯಾನಿಂಗ್ ಲೇನ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದಿಲ್ಲಿಯಲ್ಲಿನ ಉಷ್ಣಾಂಶ ತೀವ್ರವಾಗಿ ಏರಿಕೆಯಾಗಿರುವುದರಿಂದ, ದಿಲ್ಲಿಯು ತೀವ್ರ ಸ್ವರೂಪದ ನೀರಿನ ಕೊರತೆಯನ್ನು ಎದುರಿಸುತ್ತಿದೆ. ನೀರಿನ ಕೊರತೆ ಕುರಿತು ದಿಲ್ಲಿ ನಿವಾಸಿಗಳು ಸಲ್ಲಿಸುತ್ತಿರುವ ದೂರುಗಳಿಂದ ದಿಲ್ಲಿ ಜಲ ಮಂಡಳಿ ತುಂಬಿ ತುಳುಕುತ್ತಿದೆ.
ಸೌಜನ್ಯ : indianexpress.com