×
Ad

ಪಶ್ಚಿಮ ಬಂಗಾಳ | ಮೂರೂವರೆ ವರ್ಷದ ಬಾಲಕಿಯನ್ನು ಕಬೋರ್ಡ್‌ ನಲ್ಲಿ ಕೂಡಿ ಹಾಕಿದ ಶಿಕ್ಷಕಿ!

ಕೋಲ್ಕತ್ತಾ ಪ್ರೀಸ್ಕೂಲ್‌ನಲ್ಲಿ ನಡೆದ ಘಟನೆ

Update: 2026-03-02 22:57 IST

Photo Credit : indiatoday.in

ಕೋಲ್ಕತ್ತಾ: ಶಿಕ್ಷೆ ಎಂದು ಕತ್ತಲಿನಿಂದ ತುಂಬಿದ ಕಬೋರ್ಡ್‌ನಲ್ಲಿ ಮೂರೂವರೆ ವರ್ಷದ ಬಾಲಕಿಯನ್ನು ಕೂಡಿ ಹಾಕಿದ ಘಟನೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಪ್ರೀಸ್ಕೂಲ್‌ನಲ್ಲಿ ನಡೆದಿದೆ. ಫೆಬ್ರವರಿ 20ರಂದು ನಡೆದ ಈ ಘಟನೆಯ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತನಿಖೆ ಆರಂಭಿಸಿದೆ.

ಮಗುವಿನ ತಂದೆಯ ದೂರಿನ ಪ್ರಕಾರ, ಸಾಯಿತಾ ಕರ್ಮಾಕರ್ ಮತ್ತು ಇಂದಿರಾ ದಾಸ್ ಎಂಬ ಶಿಕ್ಷಕಿಯರು ಬಾಲಕಿಯನ್ನು ಕಬೋರ್ಡ್‌ನಲ್ಲಿ ಕೂಡಿ ಹಾಕಿ, ಹೊರಬರದಂತೆ ಅದರ ಮುಂದೆ ಭಾರವಾದ ಮೇಜನ್ನು ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಘಟನೆ ಸೆರೆಯಾಗಿದೆ. ಬಾಲಕಿಯ ತಾಯಿಗೆ ದೃಶ್ಯಾವಳಿ ವೀಕ್ಷಿಸಲು ಅವಕಾಶ ನೀಡಲಾಗಿದೆ.

ವಿಡಿಯೊದಲ್ಲಿ ಶಿಕ್ಷಕಿ ಬಾಲಕಿಯನ್ನು ಖಾಲಿ ತರಗತಿಗೆ ಕರೆದುಕೊಂಡು ಹೋಗಿ, ಬಳಿಕ ಕಬೋರ್ಡ್ ಒಳಗೆ ನೂಕುತ್ತಿರುವುದು ಕಂಡುಬಂದಿದೆ. ಮತ್ತೊಬ್ಬ ಶಿಕ್ಷಕಿ ಮಧ್ಯಪ್ರವೇಶ ಮಾಡದೆ ವೀಕ್ಷಿಸುತ್ತಿರುವುದು ಮತ್ತು ಬಳಿಕ ನೆರವಾಗುತ್ತಿರುವುದು ದಾಖಲಾಗಿದೆ.

ಈ ಘಟನೆಯಿಂದ ಬಾಲಕಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳೆ ಎಂದು ತಿಳಿದುಬಂದಿದೆ. ಆಯೋಗ ಶಾಲಾ ಆಡಳಿತದಿಂದ ವರದಿ ಕೋರಿದೆ.

ಆಯೋಗದ ಮುಖ್ಯಸ್ಥೆ ತುಲಿಕಾ ದಾಸ್, “ಇದು ದುರ್ಘಟನೆ. ಶಾಲೆಗಳು ಮಕ್ಕಳ ಕಲ್ಯಾಣ ನೀತಿಗೆ ಬದ್ಧವಾಗಿರಬೇಕು. ಅಗತ್ಯವಿದ್ದರೆ ತಂಡ ಶಾಲೆಗೆ ಭೇಟಿ ನೀಡಲಿದೆ,” ಎಂದು ತಿಳಿಸಿದ್ದಾರೆ.

ಶಾಲಾ ಆಡಳಿತ ಘಟನೆಯಲ್ಲಿ ಭಾಗಿಯಾದ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News