×
Ad

ಹರ್ಯಾಣದಲ್ಲಿ ಮತಗಳ್ಳತನ ಆರೋಪ | ರಾಹುಲ್ ಗಾಂಧಿ ಪ್ರದರ್ಶಿಸಿದ ಫೊಟೋ ಸೆರೆ ಹಿಡಿದ ಬ್ರೆಝಿಲ್ ಛಾಯಾಗ್ರಾಹಕ ಮ್ಯಾಥ್ಯೂಸ್ ಫೆರ್ರೆರೊ ಯಾರು?

Update: 2025-11-05 19:59 IST

Screengrab: Youtube (Indian National Congress)

ಹೊಸದಿಲ್ಲಿ: ಹರ್ಯಾಣ ವಿಧಾನಸಭೆಯಲ್ಲಿ ನಡೆದಿದೆಯೆನ್ನಲಾದ ಮತಗಳ್ಳತನದ ಕುರಿತು ರಾಹುಲ್ ಗಾಂಧಿ ಪ್ರದರ್ಶಿಸಿದ ‘ಎಚ್ ಫೈಲ್’ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ತಮ್ಮ ಮಾತಿಗೆ ಪುರಾವೆಯಾಗಿ ರಾಹುಲ್ ಗಾಂಧಿ ಪ್ರದರ್ಶಿಸಿದ ರೂಪದರ್ಶಿಯ ಭಾವಚಿತ್ರ ಹಾಗೂ ಅದನ್ನು ಸೆರೆ ಹಿಡಿದ ಬ್ರೆಝಿಲ್ ಛಾಯಾಗ್ರಾಹಕ ಮ್ಯಾಥ್ಯೂಸ್ ಫೆರ್ರೆರೊ ಬಗ್ಗೆಯೂ ಹುಡುಕಾಟ ಪ್ರಾರಂಭಗೊಂಡಿದೆ. ರಾಹುಲ್ ಗಾಂಧಿ ತಮ್ಮ ‘ಎಚ್ ಫೈಲ್ಸ್’ ಪ್ರದರ್ಶನದ ವೇಳೆ ಪ್ರದರ್ಶಿಸಿದ ರೂಪದರ್ಶಿಯು ಹರ್ಯಾಣ ನಿವಾಸಿಯಲ್ಲದಿದ್ದರೂ, ಆಕೆ ಎಲ್ಲಿಯವರು ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.

ಆದರೆ, ಬ್ರೆಝಿಲ್ ಛಾಯಾಗ್ರಾಹಕ ಮ್ಯಾಥ್ಯೂಸ್ ಫೆರ್ರೆರೊ ಉಚಿತ ಪರವಾನಗಿ ಹೊಂದಿರುವ ರೂಪದರ್ಶಿಗಳ ಭಾವಚಿತ್ರಗಳನ್ನು ಸ್ಟಾಕ್ ಸೈಟ್ ಗಳಲ್ಲಿ ಪೋಸ್ಟ್ ಮಾಡುತ್ತಾರೆ. ಈ ಸ್ಟಾಕ್ ಸೈಟ್ ಗಳಲ್ಲಿರುವ ಓರ್ವ ರೂಪದರ್ಶಿಯ ಭಾವಚಿತ್ರವೇ ಹಲವಾರು ಮತದಾರರ ಗುರುತಿನ ಚೀಟಿಗಳಲ್ಲಿ ಕಂಡು ಬಂದಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ನೈಜ ಮತದಾರರಂತೆ ನಕಲಿ ಮತದಾರರನ್ನು ಮತಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದೂ ದೂರಿದ್ದಾರೆ.

ಸದ್ಯ ಪ್ರಶ್ನಾತರ್ಹವಾಗಿರುವ ಭಾವಚಿತ್ರವು ಮ್ಯಾಥ್ಯೂಸ್ ಫೆರ್ರೆರೊ ಆನ್ ಲೈನ್ ಛಾಯಾಗ್ರಹಣ ಸಂಗ್ರಹದಲ್ಲಿ ಕಂಡು ಬಂದಿದ್ದು, ಅವು ಉಚಿತ ಸ್ಟಾಕ್ ಭಾವಚಿತ್ರ ಸಂಗ್ರಹಗಳಲ್ಲೂ (ಅನ್ ಸ್ಪ್ಲ್ಯಾಶ್, ಪೆಕ್ಸೆಲ್ಸ್, ಐಸೊರಿಪಬ್ಲಿಕ್ ಹಾಗೂ ಇನ್ನಿತರ) ಕಂಡು ಬರುತ್ತವೆ. ಈ ಸ್ಟಾಕ್ ಸೈಟ್ ಗಳಲ್ಲಿ ಮ್ಯಾಥ್ಯೂಸ್ ಫೆರ್ರೆರೊ ಫ್ಯಾಷನ್ ಮತ್ತು ನಿಲುಭಂಗಿಯ ಭಾವಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಈ ಭಾವಚಿತ್ರಗಳು ಉಚಿತ ಡೌನ್ಲೋಡ್ ಹಾಗೂ ಮರುಬಳಕೆಗೆ ಲಭ್ಯವಿವೆ. ಮ್ಯಾಥ್ಯೂ ಫೆರ್ರೆರೊ ಬೆಲೊದಲ್ಲಿ ನೆಲೆಸಿರುವ ಛಾಯಾಗ್ರಾಹಕರಾಗಿದ್ದು, ಅವರ ಸ್ವಯಂವಿವರಗಳು ಈ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತವೆ.

ರಾಹುಲ್ ಗಾಂಧಿ ಪ್ರದರ್ಶಿಸಿದ ರೂಪದರ್ಶಿಯ ಭಾವಚಿತ್ರವನ್ನು ಸುದ್ದಿ ಸಂಸ್ಥೆಗಳು ಪತ್ತೆ ಹಚ್ಚಿದ್ದು, ಆಕೆಯ ಗುರುತು ಮಾತ್ರ ಇನ್ನೂ ಅಪರಿಚಿತವಾಗಿಯೇ ಉಳಿದಿದೆ. ಆಕೆಯ ಭಾವಚಿತ್ರವು ಸ್ಟಾಕ್ ಸೈಟ್ ಗಳಲ್ಲಿ ಹಲವಾರು ವರ್ಷಗಳಿಂದ ಲಭ್ಯವಿದ್ದು, ಅದನ್ನು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎನ್ನುತ್ತವೆ ವರದಿಗಳು. ಆದರೆ, ಆ ರೂಪದರ್ಶಿಯೇ ಮತದಾರರ ಪಟ್ಟಿಯಲ್ಲಿರುವ ಮಹಿಳೆಯೇ ಅಥವಾ ಆಕೆ ಎಂದಾದರೂ ಹರ್ಯಾಣಕ್ಕೆ ಭೇಟಿ ನೀಡಿದ್ದಳೆ ಎಂಬುದನ್ನು ದೃಢಪಡಿಸಲು ತನಿಖಾ ವರದಿಗಾರರು ಹಾಗೂ ಪತ್ರಕರ್ತರಿಗೆ ಸಾಧ್ಯವಾಗಿಲ್ಲ. ಈ ಭಾವಚಿತ್ರ ಸ್ಟಾಕ್ ಭಾವಚಿತ್ರವಾಗಿದ್ದರೂ, ಯಾರಾದರೂ ವಿದೇಶಿ ಪ್ರಜೆ ಹರ್ಯಾಣ ರಾಜ್ಯದಲ್ಲಿ ಮತದಾನ ಮಾಡಿದ್ದರೆ ಎಂಬುದಕ್ಕೆ ಈ ಭಾವಚಿತ್ರ ಪುರಾವೆಯೂ ಅಲ್ಲ.

ಈ ಭಾವಚಿತ್ರವನ್ನು ಒಂದು ಉದಾಹರಣೆಯಾಗಿ ಬಳಸಿದ ರಾಹುಲ್ ಗಾಂಧಿ, ಹರ್ಯಾಣದಲ್ಲಿ ಮತದಾರರು ನಕಲು, ಅರ್ಜಿಗಳ ದುರ್ಬಳಕೆ, ಗುಂಪು ಮತದಾರರ ನಮೂದು ಹಾಗೂ ಇನ್ನಿತರ ವಿವಿಧ ವಾಮಮಾರ್ಗಗಳ ಮೂಲಕ, ಹರ್ಯಾಣದಾದ್ಯಂತ ಸುಮಾರು 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದೇ ಭಾವಚಿತ್ರವು ವಿವಿಧ ಹೆಸರುಗಳಲ್ಲಿ ಹಾಗೂ ಹಲವು ಮತಗಟ್ಟೆಗಳಲ್ಲಿ ಕಾಣಿಸಿಕೊಂಡಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಮತದಾರರ ಪಟ್ಟಿಯನ್ನು ತಿರುಚಲು ಕೇಂದ್ರೀಕೃತ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದೂ ದೂರಿದ್ದಾರೆ.

ರಾಹುಲ್ ಗಾಂಧಿ ಪ್ರದರ್ಶಿಸಿದ ಭಾವಚಿತ್ರವು ಫೆರ್ರೆರೊರ ಸ್ಟಾಕ್ ಫೋಟೊ ಪೇಜ್ ಗಳಲ್ಲಿರುವುದನ್ನು ಮಾಧ್ಯಮಗಳು ಪತ್ತೆ ಹಚ್ಚಿವೆ. ಈ ಕುರಿತು ವರದಿ ಮಾಡುತ್ತಿರುವ ಸುದ್ದಿ ಸಂಸ್ಥೆಗಳು, ಸ್ಟಾಕ್ ಭಾವಚಿತ್ರಗಳನ್ನು ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ಮರುಬಳಕೆ ಮಾಡಿಕೊಳ್ಳಲಾಗುತ್ತದೆ ಹಾಗೂ ಮತದಾರರ ಗುರುತಿನ ಚೀಟಿಯಲ್ಲಿನ ಭಾವಚಿತ್ರವೊಂದೇ ವಾಸ್ತವವಾಗಿ ಈ ಅರ್ಜಿಯನ್ನು ಯಾರು ಭರ್ತಿ ಮಾಡಿದರು ಹಾಗೂ ಮತದಾರರ ಗುರುತಿನ ಚೀಟಿಯಾಗಿ ಬಳಸಿದರು ಎಂಬುದನ್ನು ನಿರೂಪಿಸುವುದಿಲ್ಲ ಎಂದು ಹೇಳುತ್ತಿವೆ.

ಈ ಹಿಂದೆ ಇಂತಹ ಆರೋಪಗಳನ್ನು ಮಾಡಿದಾಗ ಚುನಾವಣಾಧಿಕಾರಿಗಳು ಅಧಿಕೃತ ಪುರಾವೆ ಹಾಗೂ ಪರಿಶೀಲನೆಗಾಗಿ ಪಕ್ಷಗಳು ಸಹಿ ಮಾಡಿದ ಘೋಷಣಾ ಪತ್ರ ಹಾಗೂ ನಿಖರ ಪುರಾವೆಯನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ. ಇಂತಹ ಆರೋಪಗಳ ಕುರಿತು ಕ್ರಮ ಕೈಗೊಳ್ಳುವುದಕ್ಕೂ ಮುನ್ನ, ದೂರು ದಾಖಲಿಸುವಂತೆ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗಳು ಈ ಹಿಂದೆ ಸೂಚಿಸಿದ್ದ ಘಟನೆಗಳು ನಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News