×
Ad

ಭಾರತದ ಮುಂದಿನ ಉಪರಾಷ್ಟ್ರಪತಿ ಯಾರು?; ನಿತೀಶ್ ಕುಮಾರ್, ಶಶಿ ತರೂರ್ ಸೇರಿದಂತೆ ಹಲವು ಹೆಸರುಗಳು ಪಟ್ಟಿಯಲ್ಲಿ!

Update: 2025-07-22 22:08 IST

ಜೆಪಿ ನಡ್ಡಾ , ನಿತೀಶ್ ಕುಮಾರ್, ಶಶಿ ತರೂರ್ | PTI

ಹೊಸದಿಲ್ಲಿ: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಅನಿರೀಕ್ಷಿತ ರಾಜೀನಾಮೆಯಿಂದಾಗಿ ರಾಷ್ಟ್ರದ ಎರಡನೇ ಅತಿ ಉನ್ನತ ಸಾಂವಿಧಾನಿಕ ಹುದ್ದೆಗೆ ಹೊಸ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗಿದೆ.

ಉಪರಾಷ್ಟ್ರಪತಿಗಳ ಹುದ್ದೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಹರಿವಂಶ್ ನಾರಾಯಣ್ ಸಿಂಗ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಜೆಪಿ ನಡ್ಡಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು financialexpress.com ವರದಿ ಮಾಡಿದೆ.

ಭಾರತೀಯ ಸಂವಿಧಾನದ ಪ್ರಕಾರ, ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ 60 ದಿನಗಳೊಳಗೆ ನಡೆಯಬೇಕಿದೆ. ಅಂದರೆ ಸೆಪ್ಟೆಂಬರ್ 19ರೊಳಗೆ ದೇಶಕ್ಕೆ ಹೊಸ ಉಪರಾಷ್ಟ್ರಪತಿ ಆಯ್ಕೆಯಾಗಲಿದ್ದಾರೆ. ರಾಜ್ಯಸಭೆಗೆ ಉಪರಾಷ್ಟ್ರಪತಿ ಅವರೇ ಸಭಾಪತಿಗಳು. ಈಗ ಉಪರಾಷ್ಟ್ರಪತಿಗಳ ಹುದ್ದೆ ಖಾಲಿಯಾಗಿರುವುದರಿಂದ ನೂತನ ಉಪರಾಷ್ಟ್ರಪತಿಯ ಆಯ್ಕೆಯಾಗುವವರೆಗೆ ರಾಜ್ಯಸಭೆಯ ಉಪಸಭಾಪತಿ ಅಥವಾ ಸದನದ ಇತರ ಸದಸ್ಯರು ಕಲಾಪದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.

ಉಪರಾಷ್ಟ್ರಪತಿ ಹುದ್ದೆಗೆ ಹಲವು ಪ್ರಮುಖ ರಾಜಕಾರಣಿಗಳ ಹೆಸರುಗಳು ಚರ್ಚೆಯಲ್ಲಿದೆ. ಅವರಲ್ಲಿ ಕೆಲವರ ಹೆಸರುಗಳನ್ನು ಇಲ್ಲಿ ನೀಡಲಾಗಿದೆ.

ನಿತೀಶ್ ಕುಮಾರ್ (ಬಿಹಾರ ಮುಖ್ಯಮಂತ್ರಿ):

ಬಿಜೆಪಿಯ ಮೈತ್ರಿ ಪಕ್ಷವಾದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರಿಗೆ ಉಪರಾಷ್ಟ್ರಪತಿ ಹುದ್ದೆ ನೀಡುವ ಮೂಲಕ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಸಮೀಕರಣ ಬದಲಾಯಿಸಬಹುದು ಎಂಬ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಆರ್‌ಜೆಡಿ ಈ ನಿರ್ಧಾರವನ್ನು "ರಾಜಕೀಯ ಪಿತೂರಿ" ಎಂದು ಬಣ್ಣಿಸಿದೆ.

ಹರಿವಂಶ್ ನಾರಾಯಣ್ ಸಿಂಗ್ (ರಾಜ್ಯಸಭಾ ಉಪಸಭಾಪತಿ):

ಸದನ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಹರಿವಂಶ್ ನಾರಾಯಣ್ ಸಿಂಗ್ ಪ್ರಧಾನಮಂತ್ರಿ ಮೋದಿ ಅವರ ಆಪ್ತರಾಗಿದ್ದಾರೆ. ಅವರ ಹೆಸರು ಪಕ್ಷದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ ಎನ್ನಲಾಗಿದೆ.

ರಾಜನಾಥ್ ಸಿಂಗ್ (ರಕ್ಷಣಾ ಸಚಿವ): ಕೇಂದ್ರದ ಹಿರಿಯ ನಾಯಕರಾಗಿರುವ ರಾಜನಾಥ ಸಿಂಗ್ ಅವರ ರಾಜಕೀಯ ಪರಿಪಕ್ವತೆ ಮತ್ತು ವ್ಯಕ್ತಿತ್ವದ ದೃಷ್ಟಿಯಿಂದ ಉಪರಾಷ್ಟ್ರಪತಿ ಹುದ್ದೆಗೆ ಬಲಿಷ್ಠ ಅಭ್ಯರ್ಥಿ ಎಂದೇ ಪರಿಗಣಿಸಲಾಗಿದೆ. ರಾಜನಾಥ್ ಸಿಂಗ್ ಅವರು ಎರಡು ಬಾರಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅದಕ್ಕಿಂತ ಮುಂಚೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಜೆ.ಪಿ. ನಡ್ಡಾ (ಆರೋಗ್ಯ ಸಚಿವ):

ಆರೋಗ್ಯ ಸಚಿವರಾಗಿರುವ ಜೆಪಿ ನಡ್ಡಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶಾಸಕರಾಗಿ ಅಲ್ಲಿನ ಸರಕಾರದಲ್ಲಿ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಗ್ರಹ ಸಚಿವ ಅಮಿತ್ ಷಾ ಗೆ ಆಪ್ತರಾಗಿರುವ ಜೆಪಿ ನಡ್ಡಾಗೆ ಉಪರಾಷ್ಟ್ರಪತಿಯ ಹುದ್ದೆಯ ಗಿಫ್ಟ್ ಸಿಗಬಹುದು ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ.

ಶಶಿ ತರೂರ್ (ಕಾಂಗ್ರೆಸ್ ಸಂಸದ):

ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಸಂಸದ ಶಶಿ ತರೂರ್ ಉಪರಾಷ್ಟ್ರಪತಿ ಹುದ್ದೆಗೆ ಅಚ್ಚರಿಯ ಅಭ್ಯರ್ಥಿ ಆಗಬಹುದು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಆಪರೇಷನ್ ಸಿಂಧೂರ್ ಕುರಿತಂತೆ ವಿಶ್ವದ ನಾಯಕರಿಗೆ ಮನದಟ್ಟು ಮಾಡಲು ಭಾರತದಿಂದ ಹೊರಟ ಕೇಂದ್ರ ಸರಕಾರದ ನಿಯೋಗವೊಂದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಮುನ್ನಡೆಸಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವುಗಳನ್ನು ಇತ್ತೀಚಿಗೆ ಹೊಗಳುತ್ತಿರುವ ಶಶಿ ತರೂರ್ ನಿಷ್ಠೆಗೆ ಉಪರಾಷ್ಟ್ರಪತಿ ಹುದ್ದೆ ದೊರಕಬಹುದು ಎನ್ನಲಾಗಿದೆ.

ಉಪರಾಷ್ಟ್ರಪತಿ ಆಯ್ಕೆ ಹೇಗೆ?:

ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮತ ಚಲಾಯಿಸುತ್ತಾರೆ. ಪ್ರಸ್ತುತ ಎನ್‌ಡಿಎ ಮೈತ್ರಿಕೂಟಕ್ಕೆ ಲೋಕಸಭೆಯಲ್ಲಿ 293 ಮತ್ತು ರಾಜ್ಯಸಭೆಯಲ್ಲಿ 129 ಸದಸ್ಯರ ಬೆಂಬಲವಿದ್ದು, ಒಟ್ಟು 422 ಮತಗಳನ್ನು ಹೊಂದಿರುವುದರಿಂದ, ಅವರ ಅಭ್ಯರ್ಥಿಯ ಗೆಲುವು ಬಹುತೇಕ ಖಚಿತ. ಉಪರಾಷ್ಟ್ರಪತಿ ಅಭ್ಯರ್ಥಿಯು ಗೆಲ್ಲಲು ಕನಿಷ್ಠ 394 ಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News