×
Ad

ವಿವಾಹವಾಗಿ 15 ದಿನಗಳಲ್ಲೇ ಬಾಡಿಗೆ ಹಂತಕರಿಂದ ಪತಿಯನ್ನು ಹತ್ಯೆಗೈದ ಪತ್ನಿ, ಪ್ರಿಯಕರ!

Update: 2025-03-25 09:33 IST

ಸಾಂದರ್ಭಿಕ ಚಿತ್ರ

ಲಕ್ನೋ : ವಿವಾಹವಾದ ಕೇವಲ ಹದಿನೈದು ದಿನಗಳಲ್ಲಿ ಪತ್ನಿ ಹಾಗೂ ಪ್ರಿಯಕರ ಸೇರಿಕೊಂಡು ಬಾಡಿಗೆ ಹಂತಕನ ಮೂಲಕ ಪತಿಯನ್ನು ಹತ್ಯೆ ಮಾಡಿಸಿದ ಪ್ರಕರಣ ಉತ್ತರ ಪ್ರದೇಶದ ಔರಿಯಾದಲ್ಲಿ ಬೆಳಕಿಗೆ ಬಂದಿದೆ.

ಬಾಡಿಗೆ ಹಂತಕ, ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಾ.19ರಂದು ಗಂಭೀರ ಗಾಯಗಳೊಂದಿಗೆ ವ್ಯಕ್ತಿಯೊರ್ವ ಹೊಲದಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಸಹರ್ ಠಾಣಾಧಿಕಾರಿ ಪಂಕಜ್ ಮಿಶ್ರಾ ಹೇಳಿದ್ದಾರೆ.

ಗಾಯಾಳು ದಿಲೀಪ್ ಯಾದವ್ ಎಂಬಾತನನ್ನು ಬಿಂಧುನಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಗಾಯಾಳುವನ್ನು ಸೈಫೈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಳಿಕ ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಕೊನೆಗೆ ಆಗ್ರಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತನ ದೇಹಸ್ಥಿತಿ ವಿಷಮಿಸಿ ಮಾ.20ರಂದು ಔರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಮಾ.21ರಂದು ಆತ ಕೊನೆಯುಸಿರೆಳೆದ ಎಂದು ವಿವರ ನೀಡಿದ್ದಾರೆ.

ಈ ಸಂಬಂಧ ಪತ್ನಿ ಪ್ರಗತಿ ಯಾದವ್ (22), ಆಕೆಯ ಪ್ರಿಯಕರ ಅನುರಾಗ್ ಅಲಿಯಸ್ ಮನೋಜ್ ಹಾಗೂ ಬಾಡಿಗೆ ಹಂತಕ ರಾಮ್‍ಜಿ ಚೌಧರಿಯನ್ನು ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಬಂಧಿಸಲಾಗಿದೆ. ಬಾಡಿಗೆ ಹಂತಕನಿಗೆ 2 ಲಕ್ಷ ರೂ. ನೀಡಿ ಪತಿಯನ್ನು ಹತ್ಯೆ ಮಾಡಲು ಸುಪಾರಿ ನೀಡಲಾಗಿತ್ತು ಎಂದು ಎಸ್ಪಿ ಅಭಿಜಿತ್ ಶಂಕರ್ ಹೇಳಿದ್ದಾರೆ.

ಮೀರಠ್ ಜಿಲ್ಲೆಯಲ್ಲಿ ಪ್ರಿಯಕರನ ನೆರವಿನಿಂದ ಮಹಿಳೆಯೊಬ್ಬಳು ಪತಿಯನ್ನು ಇರಿದು ಕೊಂದ ಘಟನೆಯ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಮೀರಠ್ ಪ್ರಕರಣದಲ್ಲಿ ಪತಿಯ ದೇಹವನ್ನು ಕತ್ತರಿಸಿ ಸಿಮೆಂಟ್ ತುಂಬಿದ ಡ್ರಮ್‍ನಲ್ಲಿ ಹಾಕಿ ಹುದುಗಿಸಿ ಇಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News