×
Ad

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಲಾಗುವುದು: ತೆಲಂಗಾಣ ಉಪ ಮುಖ್ಯಮಂತ್ರಿ

Update: 2025-07-12 12:56 IST

ರೋಹಿತ್ ವೇಮುಲಾ (Photo credit: The Hindu)

ಹೊಸದಿಲ್ಲಿ: ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾರ ಆತ್ಮಹತ್ಯೆ ಪ್ರಕರಣದ ಕುರಿತು ಮರು ತನಿಖೆ ನಡೆಸುವ ಕಾನೂನು ಪ್ರಕ್ರಿಯೆಯನ್ನು ರಾಜ್ಯ ಸರಕಾರ ಆರಂಭಿಸಿದೆ ಎಂದು ತೆಲಂಗಾಣ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಘೋಷಿಸಿದರು.

ಎಐಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲ್ಲು ಭಟ್ಟಿ ವಿಕ್ರಮಾರ್ಕ, ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ರಾಮಚಂದರ್ ರಾವ್ ಅವರನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿರುವ ಕ್ರಮವನ್ನು ಟೀಕಿಸಿದರು.

“ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಬಿಡುವುದಿಲ್ಲ. ಯಾರೆಲ್ಲ ಆದಿವಾಸಿಗಳು ಹಾಗೂ ದಲಿತರ ವಿರುದ್ಧ ಹೋಗುತ್ತಾರೆ, ಅಂಥವರಿಗೆ ಬಿಜೆಪಿಯಲ್ಲಿ ಬಹುಮಾನ ದೊರೆಯುತ್ತದೆ ಎಂಬುದನ್ನು ರಾಮಚಂದರ್ ರಾವ್ ಅವರ ನೇಮಕಾತಿ ತೋರಿಸುತ್ತಿದೆ” ಎಂದು ಅವರು ಆರೋಪಿಸಿದರು. ಅಲ್ಲದೆ, ಈ ನೇಮಕಾತಿಯ ಕುರಿತು ಬಿಜೆಪಿ ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದೂ ಅವರು ಆಗ್ರಹಿಸಿದರು.

“ಬದುಕುವ ಹಾಗೂ ವರ್ಣರಂಜಿತ ಬದುಕನ್ನು ನಡೆಸುವ ಕನಸನ್ನು ಹೊಂದಿದ್ದ ಯುವಕನು ತನ್ನ ಜೀವವನ್ನೇ ಅಂತ್ಯಗೊಳಿಸಿಕೊಳ್ಳುವ ಹಂತಕ್ಕೆ ತಲುಪಿದ್ದಾನೆ. ಸ್ವಲ್ಪ ಯೋಚಿಸಿ, ಯಾವ ಸಂಗತಿಗಳು ಅವರನ್ನು ಇಂತಹ ಅತಿರೇಕದ ಕ್ರಮ ಕೈಗೊಳ್ಳುವಂತಹ ಸ್ಥಿತಿಯನ್ನು ನಿರ್ಮಿಸುತ್ತಿವೆ ಎಂದು. ಇದು ಸಾಂಸ್ಥಿಕ ಹತ್ಯೆಯಲ್ಲವೆ?” ಎಂದು ಅವರು ಪ್ರಶ್ನಿಸಿದರು. ಇದೇ ವೇಳೆ, ಅವರು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ತಾರತಮ್ಯವನ್ನು ಹತ್ತಿಕ್ಕಲು ರೂಪಿಸಲಾಗಿರುವ ರೋಹಿತ್ ವೇಮುಲ ಕಾಯ್ದೆಯನ್ನೂ ಉಲ್ಲೇಖಿಸಿದರು.

2023ರಲ್ಲಿ ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ರೋಹಿತ್ ವೇಮುಲ ಕಾಯ್ದೆಯ ಕುರಿತು ಪ್ರಸ್ತಾಪಿಸಿದ್ದರು. ಗಮನಾರ್ಹ ಸಂಗತಿಯೆಂದರೆ, ಮೇ 2024ರಂದು ಕಾಂಗ್ರೆಸ್ ಸರಕಾರವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಪ್ತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿ ರಾಮಚಂದರ್ ರಾವ್ ಸೇರಿದಂತೆ ಎಲ್ಲ ಆರೋಪಿಗಳನ್ನೂ ದೋಷಮುಕ್ತಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News