ಬಿಹಾರ | ಗೃಹರಕ್ಷಕ ದಳಕ್ಕೆ ನೇಮಕಾತಿ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆ: ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಸಾಮೂಹಿಕ ಅತ್ಯಾಚಾರ
ಸಾಂದರ್ಭಿಕ ಚಿತ್ರ (Grok)
ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಬೋಧ್ ಗಯಾದಲ್ಲಿ ನಡೆಯುತ್ತಿರುವ ಗೃಹರಕ್ಷಕ ದಳದ ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಿದ್ದ 26 ವರ್ಷದ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಆಕೆಯನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಜುಲೈ 24ರಂದು ಬಿಹಾರ ಮಿಲಿಟರಿ ಪೊಲೀಸ್ ಮೈದಾನದಲ್ಲಿ ದೈಹಿಕ ವ್ಯಾಯಾಮ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸ್ಥಳದಲ್ಲಿದ್ದ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ, ಚಾಲಕ ಹಾಗೂ ಇತರೆ ಸಿಬ್ಬಂದಿ ಸೇರಿ ಮೂವರಿಂದ ನಾಲ್ವರು ಪುರುಷರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಬೋಧ್ ಗಯಾ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ವೇಳೆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದುದರಿಂದ ಆಕೆಗೆ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದ್ದು, ಆರೋಪಿಗಳಾದ ಆಂಬ್ಯುಲೆನ್ಸ್ ಚಾಲಕ ವಿನಯ್ ಕುಮಾರ್ ಮತ್ತು ತಾಂತ್ರಿಕ ಸಹಾಯಕ ಅಜಿತ್ ಕುಮಾರ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ. ಸದ್ಯ ಇಬ್ಬರೂ ಪೊಲೀಸರ ವಶದಲ್ಲಿದ್ದಾರೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಆಂಬ್ಯುಲೆನ್ಸ್ ಚಲಿಸಿದ ದಿಕ್ಕು, ನಿಲ್ಲುವ ಸ್ಥಳಗಳು ಮತ್ತು ಸಮಯದ ದಾಖಲೆಗಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ವೈದ್ಯಕೀಯ ಮತ್ತು ವಿಧಿವಿಜ್ಞಾನ ಪರೀಕ್ಷೆಯು ಪ್ರಗತಿಯಲ್ಲಿದೆ. ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಯ ವಿರುದ್ಧ ರಾಷ್ಟ್ರ ರಾಜಕೀಯ ವಲಯದಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಲೋಕ ಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್, ಬಿಹಾರದಲ್ಲಿನ ಕಾನೂನು ಸುವ್ಯವಸ್ಥೆಯ ಕುಸಿತವನ್ನು ಟೀಕಿಸಿದ್ದಾರೆ. ಪ್ರಕರಣದಲ್ಲಿ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಎಂದು ಅವರು ಆಗ್ರಹಿಸಿದ್ದಾರೆ.