×
Ad

ಹೈದರಾಬಾದ್ | 'ಪುಷ್ಪಾ 2ʼ ಚಿತ್ರದ ಪ್ರದರ್ಶನದ ವೇಳೆ ಕಾಲ್ತುಳಿತ; ಮಹಿಳೆ ಮೃತ್ಯು, ಪುತ್ರನಿಗೆ ಗಂಭೀರ ಗಾಯ

Update: 2024-12-05 10:33 IST

Screengrab:X/@AG_knocks

ಹೈದರಾಬಾದ್: ಬುಧವಾರ ರಾತ್ರಿ 'ಪುಷ್ಪಾ 2: ದಿ ರೂಲ್' ಚಿತ್ರದ ಪ್ರೀಮಿಯರ್‌ ಶೋ ವೀಕ್ಷಣೆಗೆಂದು ಹೈದರಾಬಾದ್ ನ ಥಿಯೇಟರ್‌ ನಲ್ಲಿ ಸಾವಿರಾರು ಜನರು ನೆರೆದಿದ್ದು, ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು, ಆಕೆಯ 9 ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೈದರಾಬಾದ್ ನ ಆರ್ ಟಿಸಿ ಎಕ್ಸ್ ರೋಡ್‌ ನಲ್ಲಿರುವ ಸಂಧ್ಯಾ ಥಿಯೇಟರ್‌ ನಲ್ಲಿ ರಾತ್ರಿ 9.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮೃತ ಮಹಿಳೆಯನ್ನು ದಿಲ್ ಸುಖ್ನಗರದ ರೇವತಿ ಎಂದು ಗುರುತಿಸಲಾಗಿದೆ. ರೇವತಿ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಿನಿಮಾ ವೀಕ್ಷಿಸಲು ಥಿಯೇಟರ್ ಗೆ ತೆರಳಿದ್ದರು ಎನ್ನಲಾಗಿದೆ.

ಸಂಧ್ಯಾ ಥಿಯೇಟರ್‌ ನಲ್ಲಿ 'ಪುಷ್ಪಾ 2: ದಿ ರೂಲ್' ಚಿತ್ರದ ವೀಕ್ಷಣೆ ಜೊತೆಗೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಭಾರಿ ಜನಸ್ತೋಮ ನೆರೆದಿತ್ತು. ಸಂಗೀತ ನಿರ್ದೇಶಕ ದೇವಿ ಪ್ರಸಾದ್ ಅವರೊಂದಿಗೆ ಥಿಯೇಟರ್ ಗೆ ಬಂದಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಾಗ ಚಿತ್ರಮಂದಿರದ ಹೊರಗೆ ಗೊಂದಲದ ವಾತಾವರಣ ಉಂಟಾಗಿದೆ. ಜನರ ನೂಕು ನುಗ್ಗಲಿನಿಂದ ಥಿಯೇಟರ್ ನ ಮುಖ್ಯ ಗೇಟ್ ಕುಸಿದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಠಿ ಪ್ರಹಾರ ನಡೆಸಿದ್ದು, ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಮಹಿಳೆಯೋರ್ವರು ಮೃತಪಟ್ಟಿದ್ದು, ಅವರ 9 ವರ್ಷದ ಮಗ ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಚಿತ್ರ ವೀಕ್ಷಿಸಲು ಮಾತ್ರವಲ್ಲದೆ ಚಿತ್ರದ ನಿರ್ಮಾಣ ತಂಡದ ಸದಸ್ಯರನ್ನು ನೋಡಲು ಸಹ ಸಾವಿರಾರು ಜನರು ಥಿಯೇಟರ್ ನಲ್ಲಿ ಜಮಾಯಿಸಿದ್ದರು. ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚಿನ ಪೊಲೀಸರನ್ನು ಕರೆಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News