ಮಧ್ಯಪ್ರದೇಶದಲ್ಲಿ ಹಾಡಹಗಲೇ ಫುಟ್ಪಾತ್ ನಲ್ಲಿ ಮಹಿಳೆಯ ಅತ್ಯಾಚಾರ; ವಿಡಿಯೊ ವೈರಲ್
ಸಾಂದರ್ಭಿಕ ಚಿತ್ರ (PTI)
ಇಂದೋರ್: ಮಧ್ಯಪ್ರದೇಶ ಉಜ್ಜಯಿನಿಯಲ್ಲಿ ಮಹಿಳೆಯೋರ್ವಳ ಮೇಲೆ ಹಾಡಹಗಲೇ ಸಾರ್ವಜನಿಕವಾಗಿಯೇ ದುಷ್ಕರ್ಮಿಯೋರ್ವ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ.
ಬುಧವಾರ ಮಧ್ಯಾಹ್ನ ಉಜ್ಜಯಿನಿಯ ಜನನಿಬಿಡ ಪ್ರದೇಶವಾದ ಕೋಯ್ಲಾ ಪಾಠಕ್ ಪ್ರದೇಶದ ಪಾದಚಾರಿ ಮಾರ್ಗದ ಮೇಲೆ ಈ ಅತ್ಯಾಚಾರ ನಡೆದಿದೆ.
ಈ ಘಟನೆಯನ್ನು ಜನರು ಕಣ್ಣಾರೆ ಕಂಡರೂ, ಯಾರೂ ಮಧ್ಯಪ್ರವೇಶಿಸಲು ಮುಂದಾಗಿಲ್ಲ ಎಂದು ವರದಿಯಾಗಿದೆ. ಬದಲಿಗೆ ಈ ಅತ್ಯಾಚಾರದ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ವ್ಯಕ್ತಿಯೊಬ್ಬ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.
ಈ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೆ ಅತ್ಯಾಚಾರ ಸಂತ್ರಸ್ತೆಯನ್ನು ಪತ್ತೆ ಹಚ್ಚಿರುವ ಪೊಲೀಸರು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಪೊಲೀಸರ ಪ್ರಕಾರ, ನನ್ನನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ ಆರೋಪಿ ಲೋಕೇಶ್, ನನಗೆ ಮದ್ಯ ಸೇವಿಸುವಂತೆ ಬಲವಂತಪಡಿಸಿ, ನನ್ನ ಮೇಲೆ ಅತ್ಯಾಚಾರವೆಸಗಿದ ಎಂದು ಸಂತ್ರಸ್ತೆಯು ಹೇಳಿಕೆ ನೀಡಿದ್ದಾಳೆ. ಅತ್ಯಾಚಾರವೆಸಗಿದ ನಂತರ, ಆರೋಪಿ ಲೋಕೇಶ್ ಸಂತ್ರಸ್ತೆಗೆ ಬೆದರಿಕೆ ಒಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮ, ಆರೋಪಿ ಲೋಕೇಶ್‌ನನ್ನು ಬಂಧಿಸಲಾಗಿದೆ. ಆತ ನನಗೆ ಪರಿಚಿತ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಆಕೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯು ರಾಜಕೀಯ ಬಿರುಗಾಳಿಗೆ ಕಾರಣವಾಗಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿಯ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಉಜ್ಜಯಿನಿಯು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ತವರು ನಗರವಾಗಿದ್ದು, ಅವರೇ ಗೃಹ ಖಾತೆಯನ್ನೂ ಹೊಂದಿದ್ದಾರೆ.