ಫರೀದಾಬಾದ್ | ಅತ್ತೆ ಜತೆ ವಾಸಿಸಲು ಒಪ್ಪದ ಸೊಸೆ; ನೊಂದ ಮಗ ಆತ್ಮಹತ್ಯೆ!
ಸಾಂದರ್ಭಿಕ ಚಿತ್ರ
ಫರೀದಾಬಾದ್: ಅತ್ತೆ ಜತೆ ವಾಸಿಸಲು ಸೊಸೆ ಒಪ್ಪದ ಹಿನ್ನೆಲೆಯಲ್ಲಿ ನೊಂದ ಮಗ ವಸತಿ ಸಂಕೀರ್ಣದ 15ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರೇಟರ್ ಫರೀದಾಬಾದ್ ಪ್ರದೇಶದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಯೋಗೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಆತನ ಮಾವ, ಕುಮಾರ್ ಪತ್ನಿಯ ವಿರುದ್ಧ ದೂರು ನೀಡಿದ್ದಾರೆ. ದಂಪತಿಯ ಜತೆ ಕುಮಾರ್ ತಾಯಿ ವಾಸವಿರಲು ಕುಮಾರ್ ಪತ್ನಿ ವಿರೋಧ ವ್ಯಕ್ತಪಡಿಸಿದ್ದೇ ಈ ನಿರ್ಧಾರಕ್ಕೆ ಕಾರಣ ಎಂದು ಆಪಾದಿಸಲಾಗಿದೆ.
ಕುಮಾರ್ ಪತ್ನಿ, ಆಕೆಯ ಪೋಷಕರು ಹಾಗೂ ಇಬ್ಬರು ಸಹೋದರರು ಹೀಗೆ ಐದು ಮಂದಿಯ ವಿರುದ್ಧ ಭೂಪಾನಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಕುಮಾರ್, ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ರೇಡಿಯೊಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂಬತ್ತು ವರ್ಷದ ಹಿಂದೆ ನೇಹಾ ರಾವತ್ ಜತೆ ವಿವಾಹವಾಗಿದ್ದ ಅವರಿಗೆ ಆರು ವರ್ಷದ ಮಗು ಇದೆ.
ನೇಹಾ ಉದ್ಯೋಗದಲ್ಲಿದ್ದ ನೋಯ್ಡಾದಲ್ಲಿ ಅವರು ವಾಸವಿದ್ದರು. ಪತಿ- ಪತ್ನಿ ಇಬ್ಬರೂ ಉದ್ಯೋಗದಲ್ಲಿದ್ದ ಕಾರಣ ಮಗುವಿಗೆ ಸೂಕ್ತ ಆರೈಕೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಯೋಗೀಶ್ ತನ್ನ ತಾಯಿಯನ್ನು ಕರೆಸಿಕೊಂಡಿದ್ದರು. ಇದಕ್ಕೆ ನೇಹಾ ವಿರೋಧ ವ್ಯಕ್ತಪಡಿಸಿದ್ದರು ಎಂದು ಪ್ರಕಾಶ್ ಸಿಂಗ್ ದೂರಿನಲ್ಲಿ ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.