×
Ad

2023ರಲ್ಲಿ ಭಾರತದ ಮೊದಲ ಯುನಿಕಾರ್ನ್‌ ಆದ ಝೆಪ್ಟೊ

Update: 2023-08-25 17:18 IST

ಹೊಸದಿಲ್ಲಿ: ಆನ್‌ಲೈನ್‌ ದಿನಸಿ ಡೆಲಿವರಿ ಸ್ಟಾರ್ಟ್‌ಅಪ್‌ ಸಂಸ್ಥೆಯಾಗಿರುವ ಝೆಪ್ಟೊ 200 ಮಿಲಿಯನ್‌ ಡಾಲರ್‌ನಷ್ಟು ಹಣವನ್ನು ಸೀರೀಸ್‌-ಇ ಫಂಡ್‌ರೈಸ್‌ ಮೂಲಕ ಪಡೆದಿದ್ದು ಇದರಿಂದಾಗಿ ಕಂಪೆನಿಯ ಮೌಲ್ಯ 1.4 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದ್ದು 2023ರ ಮೊದಲ ಯುನಿಕಾರ್ನ್‌ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.

ನಿಧಿ ಸಂಗ್ರಹದ ನೇತೃತ್ವವನ್ನು ಅಮೆರಿಕಾ ಮೂಲದ ಖಾಸಗಿ ಮಾರುಕಟ್ಟೆ ಹೂಡಿಕೆ ಸಂಸ್ಥೆ ಸ್ಟೆಪ್‌ಸ್ಟೋನ್‌ಗ್ರೂಪ್ ವಹಿಸಿತ್ತು. ಕೋವಿಡ್‌ ಸಾಂಕ್ರಾಮಿಕದ ನಂತರ ಝೆಪ್ಟೋ ಆರಂಭಿಸಲಾಗಿತ್ತು.

ಸ್ಟೆಪ್‌ಸ್ಟೋನ್‌ ಗ್ರೂಪ್‌ ಹೂಡಿಕೆಯು ಭಾರತೀಯ ಕಂಪೆನಿಯೊಂದರಲ್ಲಿ ಸಂಸ್ಥೆ ಮಾಡಿದ ಮೊದಲ ಹೂಡಿಕೆಯಾಗಿದೆ.

ಸ್ಟೆಪ್‌ಸ್ಟೋನ್‌ ಹೊರತಾಗಿ ಗ್ರಾಹಕ ಆಧಾರಿತ ವೆಂಚರ್‌ ಕ್ಯಾಪಿಟಲ್‌ ಸಂಸ್ಥೆ, ಕ್ಯಾಲಿಫೋರ್ನಿಯಾದ ಗುಡ್‌ವಾಟರ್‌ ಕ್ಯಾಪಿಟಲ್‌ ಕೂಡ ಹೊಸ ಹೂಡಿಕೆದಾರನಾಗಿ ಸೇರ್ಪಡೆಗೊಂಡಿದೆ. ಹಾಲಿ ಹೂಡಿಕೆದಾರರಾದ ನೆಕ್ಸಸ್‌ ವೆಂಚರ್‌ ಪಾರ್ಟ್‌ನರ್ಸ್‌, ಗ್ಲೇಡ್‌ ಬ್ರುಕ್‌ ಕ್ಯಾಪಿಟಲ್‌, ಲಚ್ಚಿ ಗ್ರೂಮ್‌ ಕೂಡ ಇನ್ನಷ್ಟು ಹೂಡಿಕೆಗಳನ್ನು ಮಾಡಿವೆ.

ಕಳೆದ ವರ್ಷ ಅಮೆರಿಕಾದ ಟೆಕ್ನಾಲಜಿ ಸ್ಟಾರ್ಟ್‌ ಅಪ್‌ ಆಕ್ಸೆಲರೇಟರ್‌ ವೈ ಕಾಂಬಿನೇಟರ್‌ನ ಕಂಟಿನ್ಯುಯಿಟಿ ಫಂಡ್‌ ನೇತೃತ್ವದ ಸೀರೀಸ್‌ ಡಿ ಫಂಡಿಂಗ್‌ನಲ್ಲಿ ಕೂಡ ಝೆಪ್ಟೊ 200 ಮಿಲಿಯನ್‌ ಡಾಲರ್‌ ಸಂಗ್ರಹಿಸಿತ್ತು. ಇದು ಸಂಸ್ಥೆಯ ಮೌಲ್ಯವನ್ನು 900 ಮಿಲಿಯನ್‌ ಡಾಲರ್‌ಗೆ ಏರಿಸಿತ್ತು.

ಝೆಪ್ಟೊ ಸಂಸ್ಥೆಯನ್ನು 2021ರಲ್ಲಿ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆದ ಆದಿತ್‌ ಪಲಿಚ ಮತ್ತು ಕೈವಲ್ಯ ವೊಹ್ರಾ ಆರಂಭಿಸಿದ್ದರು.

ಝೆಪ್ಟೊ 6000ಕ್ಕೂ ಅಧಿಕ ದಿನಸಿ ಸಾಮಗ್ರಿಗಳನ್ನು 10 ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ದೇಶಾದ್ಯಂತ ಇರುವ ತನ್ನ ಡೆಲಿವರಿ ಹಬ್‌ಗಳ ನೆಟ್‌ವರ್ಕ್‌ ಮೂಲಕ ಡೆಲಿವರಿ ಮಾಡುತ್ತದೆ.

ಕಂಪನಿಯು ತನ್ನ ವರ್ಷದಿಂದ ವರ್ಷ ಮಾರಾಟವನ್ನು ಶೇ 300ರಷ್ಟು ಹೆಚ್ಚಿಸಿದೆ ಹಾಗೂ ಮುಂದಿನ ಕೆಲ ತ್ರೈಮಾಸಿಕಗಳೊಳಗೆ 1 ಬಿಲಿಯನ್‌ ಡಾಲರ್‌ ವಾರ್ಷಿಕ ಮಾರಾಟ ಗುರಿ ಸಾಧಿಸುವ ನಿರೀಕ್ಷೆಯಿದೆ ಎಂದು ಕಂಪೆನಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News