×
Ad

ಮುಷ್ಕರಕ್ಕೆ ಕರೆಯ ನಡುವೆ ಗಿಗ್ ಕಾರ್ಮಿಕರಿಗೆ ಹೆಚ್ಚು ಹಣ ಪಾವತಿಯ ಆಫರ್ ನೀಡಿದ Zomato, Swiggy

ಆರ್ಡರ್ ಗೆ 150 ರೂಪಾಯಿ ನೀಡುತ್ತೇವೆ ಎಂದ ಕಂಪೆನಿಗಳು!

Update: 2025-12-31 17:45 IST

PC | PTI

ಹೊಸದಿಲ್ಲಿ, ಡಿ.31: ಆಹಾರ ಪೂರೈಕೆ ವೇದಿಕೆಗಳಾದ Zomato ಮತ್ತು Swiggy ಗಿಗ್ ಕಾರ್ಮಿಕರ ಒಕ್ಕೂಟಗಳಿಂದ ಮುಷ್ಕರಕ್ಕೆ ಕರೆಯ ನಡುವೆ ಹೊಸವರ್ಷದ ಮುನ್ನಾ ದಿನ ಸೇವೆಗಳಲ್ಲಿ ಹೆಚ್ಚಿನ ಅಡಚಣೆಗಳು ಆಗದಂತೆ ನೋಡಿಕೊಳ್ಳಲು ತಮ್ಮ ವಿತರಣಾ ಪಾಲುದಾರರಿಗೆ ಹೆಚ್ಚಿನ ಪ್ರೋತ್ಸಾಹ ಧನದ ಕೊಡುಗೆಗಳನ್ನು ನೀಡುತ್ತಿವೆ.

ಹೊಸವರ್ಷದ ಮುನ್ನಾ ದಿನ ಬೇಡಿಕೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವಾಗ ಮುಷ್ಕರವು Zomato, Swiggy, Blinkit, Instamart ಮತ್ತು Zeptoದಂತಹ ಸಂಸ್ಥೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

Zomato ಹೊಸವರ್ಷದ ಮುನ್ನಾ ದಿನವಾದ ಗುರುವಾರ ಸಂಜೆ ಆರು ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗಿನ ಪೀಕ್ ಸಮಯದಲ್ಲಿ ತನ್ನ ವಿತರಣಾ ಪಾಲುದಾರರಿಗೆ ಪ್ರತಿ ಆರ್ಡರ್‌ಗೆ 120 ರೂ.ನಿಂದ 150 ರೂ.ಗಳ ಹಣ ಪಾವತಿಯನ್ನು ಮುಂದಿರಿಸಿದೆ.

ಆರ್ಡರ್‌ ಗಳ ಪ್ರಮಾಣ ಮತ್ತು ಗಿಗ್ ಕಾರ್ಮಿಕರ ಲಭ್ಯತೆಯನ್ನು ಅವಲಂಬಿಸಿ ದಿನಕ್ಕೆ 3,000 ರೂ.ವರೆಗೆ ಗಳಿಕೆಯ ಭರವಸೆಯನ್ನೂ ಅದು ನೀಡಿದೆ.

ಇದೇ ರೀತಿ Swiggy ಡಿ.31 ಮತ್ತು ಜ.1ರಂದು 10,000 ರೂ.ವರೆಗೆ ದುಡಿಯುವ ಅವಕಾಶವನ್ನು ತನ್ನ ವಿತರಣಾ ಪಾಲುದಾರರ ಮುಂದಿರಿಸಿದೆ.

ವರ್ಷದಲ್ಲಿ ಅತ್ಯಂತ ಹೆಚ್ಚಿನ ಆರ್ಡರ್‌ ಗಳಿರುವ ದಿನಗಳಲ್ಲಿ ಒಂದಾಗಿರುವ ಹೊಸವರ್ಷದ ಮುನ್ನಾ ದಿನ ಸಾಕಷ್ಟು ರೈಡರ್‌ ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಂಜೆ ಆರು ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ 2,000 ರೂ.ವರೆಗೆ ಪೀಕ್ ಅವರ್ ಗಳಿಕೆಯ ಆಕರ್ಷಣೆಯನ್ನು Swiggy ತನ್ನ ವಿತರಣಾ ಪಾಲುದಾರರ ಮುಂದಿರಿಸಿದೆ.

ಡಿ.25ರಂದು ತೆಲಂಗಾಣ ಮತ್ತು ಇತರ ಪ್ರದೇಶಗಳಲ್ಲಿ ನಡೆದಿದ್ದ ಮುಷ್ಕರದ ಸಂದರ್ಭದಲ್ಲಿ ಸಾವಿರಾರು ಗಿಗ್ ಕಾರ್ಮಿಕರು ತಮ್ಮ ಕೆಲಸಕ್ಕೆ ಹಾಜರಾಗಿರಲಿಲ್ಲ ಮತ್ತು ಆಹಾರ ಪೂರೈಕೆ ವೇದಿಕೆಗಳು ಸೇವೆಗಳಲ್ಲಿ ತೀವ್ರ ಅಡಚಣೆಗಳನ್ನು ಎದುರಿಸಿದ್ದವು. ನಂತರ ಮೌನಕ್ಕೆ ಶರಣಾಗಿದ್ದ ಅವು ಕಡಿತ ಮಾಡಿದ್ದ ವೇತನವನ್ನು ಮರುಪಾವತಿಸುವ ಅಥವಾ ಕಾರ್ಮಿಕರೊಂದಿಗೆ ಮಾತುಕತೆ ನಡೆಸುವ ಗೋಜಿಗೆ ಹೋಗಿರಲಿಲ್ಲ. ಕಾರ್ಮಿಕರ ಸುರಕ್ಷತೆ ಅಥವಾ ಕೆಲಸದ ಅವಧಿಯ ಬಗ್ಗೆ ಯಾವುದೇ ದೃಢವಾದ ಭರವಸೆಯನ್ನೂ ನೀಡಿರಲಿಲ್ಲ. ಕಂಪೆನಿಗಳ ಈ ನಿರಂತರ ನಿರ್ಲಕ್ಷ್ಯದಿಂದ ಕೆರಳಿದ್ದ ಕಾರ್ಮಿಕರ ಒಕ್ಕೂಟಗಳು ಡಿ.31ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News