ಆದಿಲ್‌ಶಾಹಿ ಸಾಹಿತ್ಯ: ಕನ್ನಡ ಅನುವಾದಗಳು
ಬಿಜಾಪುರ ಜೋ-ಎಕ್ ಶಹರಾಂ ಮೇ ಶಾಹ, ಕೆ ಹೈ ಹಪ್ತ್ ಆಖ್ಖಿಂ ಕಾ ತಖ್ತ್‌ಗಾ
ವಿಜಯಪುರ ಅಥವಾ ಬಿಜಾಪುರ ಮತ್ತು ಅದರ ಸುತ್ತ-ಮುತ್ತಲಿನ ಪ್ರದೇಶವು ಎಂದಿನಿಂದಲೂ ಕರ್ನಾಟಕದ ಒಂದು ಭಾಗವಾಗಿದ್ದು, ಅದು ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಮಹತ್ವಪೂರ್ಣ ಪ್ರಾಮುಖ್ಯತೆ ಹೊಂದಿದೆ. ಇಲ್ಲಿಯ ಜನರಾಡುವ ಭಾಷೆ ಕನ್ನಡ. ಈ ಪ್ರದೇಶದಲ್ಲಿ ಹುಟ್ಟಿದ ಅನೇಕ ಕವಿಗಳು, ವಚನಕಾರರು, ಹರಿದಾಸರು, ಸಂತರು ಶ್ರೇಷ್ಠ ಸಾಹಿತ್ಯವನ್ನು ರಚಿಸಿ, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ರನ್ನ, ನಾಗಚಂದ್ರ, ಬಸವಣ್ಣ, ನರಹರಿ ಕವಿಗಳು ಇಲ್ಲಿಯವರೆ.
ಬಿಜಾಪುರದ ಬಾದಶಾಹರೂ ಅಕ್ಷರಪ್ರಿಯರಾಗಿದ್ದರು. ಕೆಲವು ರಾಣಿಯರು ಕೂಡ ಸಾಹಿತ್ಯ, ಸಂಗೀತ, ಲಲಿತಕಲೆಗಳಲ್ಲಿ ಆಸಕ್ತರಾಗಿದ್ದರು. ಆದಿಲ್‌ಶಾಹಿ ಬಾದಶಹಾರು ಶ್ರೇಷ್ಠ ಯೋಧರಾಗಿದ್ದಂತೆ ಸಾಮಾಜಿಕ ಕಳಕಳಿ ಉಳ್ಳವರೂ ಆಗಿದ್ದರು. ಸಾಹಿತ್ಯ, ಸಂಗೀತ ಕಲೆಗಳ ಪೋಷಕರಾಗಿದ್ದರು. ಸ್ವತಃ ಸಾಹಿತಿಗಳು ಸಂಗೀತಗಾರರು, ಕಲಾವಿದರು ಆಗಿದ್ದರು.
ರಾಜ್ಯದ ಸ್ಥಾಪಕ ಯೂಸುಫ್ ಆದಿಲ್‌ಖಾನನು ಕಾವ್ಯಪ್ರೇಮಿಯಾಗಿದ್ದನು. ಕವಿಯಾಗಿ ಕೆಲವು ಕೃತಿಗಳನ್ನು ರಚಿಸಿದ್ದನು. ಅದಲ್ಲದೆ ಪರ್ಶಿಯಾದಿಂದ ಹೆಸರಾಂತ ಕವಿ ಸಾಹಿತಿಗಳನ್ನು ಕರೆಸಿಕೊಂಡಿದ್ದನು. ಯೂಸುಫನ ಮಗ ಇಸ್ಮಾಯಿಲ್ ಕೂಡ ಕಾವ್ಯ-ಸಂಗೀತಗಳಲ್ಲಿ ನಿರತನಾಗಿರುತ್ತಿದ್ದನು.
ಇಸ್ಮಾಯಿಲ್‌ನ ಮಗ ಮೊದಲ ಇಬ್ರಾಹಿಮನ ಕಾಲದಲ್ಲಿ ದಖನಿ ಸಾಹಿತ್ಯಕ್ಕೆ ರಾಜಾಶ್ರಯ ದೊರೆಯಿತು. ಆತನ ಕಾಲದಲ್ಲಿ ಬಿಜಾಪುರಕ್ಕೆ ಬಂದ ಸೂಫಿ ಸಂತರು ಕೂಡ, ದಖನಿ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದರು. ಮೊದಲ ಇಬ್ರಾಹೀಮನ ಮಗ ಅಲಿ ಆದಿಲ್‌ಶಾಹಿ ಕೂಡ ಸಾಹಿತ್ಯದಲ್ಲಿ ಆಸಕ್ತನಾಗಿದ್ದನು. ಆತನ ಹೆಂಡತಿ ಚಾಂದ ಬೀಬಿ ಸುಪ್ರಸಿದ್ಧ ಕಲಾವಿದೆ-ಕವಿಯಿತ್ರಿ. ಆನಂತರ ಬಂದ ಎರಡನೇ ಇಬ್ರಾಹಿಮ್ ಸ್ವತಃ ಕವಿ. ‘ಕಿತಾಬೆ-ನೌರಸ್’ ಕೃತಿಯನ್ನು ರಚಿಸಿದನು. ಆತನ ಆಸ್ಥಾನದಲ್ಲಿ ಮುನ್ನೂರಕ್ಕೂ ಅಧಿಕ ಕವಿ ಸಾಹಿತಿಗಳು ಇದ್ದರೆಂದು ಹೇಳಲಾಗುತ್ತದೆ. ಜುಹೂರಿಯಂಥ ವಿಶ್ವವಿಖ್ಯಾತ ಕವಿ, ಪರಿಶ್ತಾನಂಥ ಇತಿಹಾಸಕಾರ, ಅಬ್ದುಲ್ಲಾ ಮೆಹದಿ ಮೊದಲಾದವರು ಅವನ ಆಸ್ಥಾನದಲ್ಲಿದ್ದರು. ಮುಹಮ್ಮದ್ ಆದಿಲ್ ಶಾಹನ ಮಗ ಎರಡನೇ ಅಲಿ ಸ್ವತಃ ಕವಿಯಾಗಿದ್ದನು. ಅವನ ಕಾವ್ಯ ಸಂಗ್ರಹ ಉಪಲಬ್ಧವಿದೆ. ಆತನ ಆಸ್ಥಾನದಲ್ಲಿ ಮುಲ್ಲಾ ನುಸ್ರತಿ ಮೊದಲಾದ ಮಹಾಕವಿಗಳಿದ್ದರು.
ಸಮಕಾಲೀನ ಇತಿಹಾಸದ ಗ್ರಂಥಗಳಲ್ಲಿ ಹಲವಾರು ಗ್ರಂಥಗಳು ಬಿಜಾಪುರದ ಆಸ್ಥಾನದಲ್ಲಿಯೇ ರಚಿತವಾಗಿವೆ. ಈ ಎಲ್ಲಾ ಗ್ರಂಥಗಳು ಭಾರತ ಇತಿಹಾಸದ ಮಹತ್ವಪೂರ್ಣ ಕೃತಿಗಳಾಗಿವೆ. ಕ್ರಿ.ಶ. 1853ರಲ್ಲಿ ಈಸ್ಟ್ ಇಂಡಿಯಾ ಕಂಪನಿಗಾಗಿ ಈ ಎಲ್ಲಾ ಕೃತಿಗಳ ಹಸ್ತಪ್ರತಿಗಳನ್ನು ಕಲ್ಕತ್ತಾದ ಕಾರ್ಯಾಲಯಕ್ಕೆ ಸತಾರದ ರೆಸಿಡೆಂಟನು ಕಳುಹಿಸಿದನು. ಆಗ ಮಾಡಲಾದ ಪಟ್ಟಿಯ ಪ್ರಕಾರ ಸುಮಾರು ಮುನ್ನೂರಕ್ಕಿಂತ ಅಧಿಕ ಹಸ್ತಪ್ರತಿಗಳಿದ್ದವು ಎಂದು ಹೇಳಲಾಗುತ್ತದೆ. ಇವು ಕೇವಲ ಜನಪ್ರಿಯ ಕಾವ್ಯ-ಇತಿಹಾಸಕ್ಕೆ ಮಾತ್ರ ಸಂಬಂಧಿಸಿವೆ, ಪವಿತ್ರ ಕುರಾನ್, ಅದರ ಮೇಲಿನ ಟಿಪ್ಪಣಿಗಳು, ಧರ್ಮಶಾಸ್ತ್ರ, ಸಂಪ್ರದಾಯ, ಉಪದೇಶ, ಯಕ್ಷಿಣ ವಿದ್ಯೆ, ಶಬ್ದ ಸಂಗ್ರಹ, ನಿಘಂಟು, ಭಕ್ತಿ, ವಿಮರ್ಶೆ, ಶಬ್ದ ನಿಷ್ಪತ್ತಿ, ವ್ಯಾಕರಣ, ತರ್ಕಶಾಸ್ತ್ರ, ಗಣಿತ, ಅಂಕಗಣಿತ, ಭೂಮಿತಿ, ಜ್ಯೋತಿಷಿಶಾಸ್ತ್ರ, ಖಗೋಳಶಾಸ್ತ್ರ ಇಂತಹ ವಿಷಯಗಳಿಗೆ ಸಂಬಂಧಿಸಿದ್ದವು. ಇದರ ಹೊರತಾಗಿ ಅನೇಕ ಗ್ರಂಥಗಳಲ್ಲಿ ಕಾಣೆಯಾಗಿರುವ ಸಾಧ್ಯತೆಯು ಇದೆ. ಇದು ಆದಿಲ್ ಶಾಹಿ ಕಾಲದಲ್ಲಿ ರಚಿತವಾದ ಸಾಹಿತ್ಯದ ಬಹುಮೂಲ್ಯ ಜ್ಞಾನ ಭಂಡಾರವೆನ್ನಬಹುದು.
ಇಂತಹ ಮಹತ್ವದ ಹಾಗೂ ಬಹುಮೂಲ್ಯ ಕೃತಿಗಳ ಅನುವಾದವು ಇತ್ತೀಚಿನವರೆಗೂ ಕನ್ನಡದಲ್ಲಿಯಾಗಲಿ ಅಥವಾ ಇಂಗ್ಲೀಷಲ್ಲಾಗಲಿ ಆಗಿರಲಿಲ್ಲ. ಆದರೆ ಬಿಜಾಪುರ ಇತಿಹಾಸದ ವಿವಿಧ ಆಯಾಮಗಳಿಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಲೇಖಕ ಇತಿಹಾಸಕಾರರಿಂದ ಸ್ವತಂತ್ರ ಕೃತಿಗಳಲ್ಲಿ ರಚಿಸಲ್ಪಟ್ಟಿವೆ. ಆದರೆ ಈ ಕೃತಿಗಳ ನೇರ ಅನುವಾದ ಇತ್ತೀಚೆಗಷ್ಟೆ ಆರಂಭಿಸಲಾಗಿದೆ.
ಸಾಹಿತ್ಯಕವಾಗಿ, ಐತಿಹಾಸಿಕವಾಗಿ ಮಹತ್ವಪೂರ್ಣವಾಗಿರುವ ಕನ್ನಡ ನಾಡಿನಲ್ಲೇ ರಚಿತವಾಗಿರುವ ಈ ಕೃತಿಗಳನ್ನು ಕನ್ನಡಕ್ಕಾಗಲೀ ಅಥವಾ ಇಂಗ್ಲೀಷ್‌ನಲ್ಲಿ ಆಗಲಿ ಅನುವಾದಿಸುವ ಕಾರ್ಯವನ್ನು ಈ ನಾಡಿನ ಯಾವುದೇ ವಿಶ್ವವಿದ್ಯಾಲಯಗಳಾಗಲಿ, ಭಾರತೀಯ ಇತಿಹಾಸ ಸಂಶೋಧನಾ ಅಥವಾ ಅನುಸಂಧಾನ ಸಂಸ್ಥೆಗಳು ಮಾಡಲಿಲ್ಲ, ಆದರೆ ಬಿಜಾಪುರ ಆದಿಲ್‌ಶಾಹಿ ಕಾಲದ ಸಾಹಿತ್ಯವನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸುವ ಪ್ರಯತ್ನ ಆರಂಭವಾಗಿದ್ದು ಬಿಜಾಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯ ಸಂಶೋಧನಾ ಕೇಂದ್ರದಿಂದ. ಡಾ. ಎಂ.ಎಂ.ಕಲಬುರಗಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿಯವರ ನಿರ್ದೇಶಕತ್ವದಲ್ಲಿ ಆದಿಲ್‌ಶಾಹಿ ಸಾಹಿತ್ಯ ಅನುವಾದ ಯೋಜನೆಯಲ್ಲಿ ಕೆಲವು ಮಹತ್ವದ ಕೃತಿಗಳನ್ನು ಹದಿನೈದು ಸಂಪುಟಗಳಾಗಿ ಕನ್ನಡಕ್ಕೆ ಅನುವಾದಿಸಿ ಈ ಸಂಸ್ಥೆಯು ಬಹುದೊಡ್ಡ ಉಪಕಾರವನ್ನು ಮಾಡಿದೆ.
ಕನ್ನಡಕ್ಕೆ ಅನುವಾದ ಮಾಡಲಾದ ಕೆಲವು ಪ್ರಮುಖ ಕೃತಿಗಳು:
1) ಮಹ್ಮದ್ ಖಾಸಿಂ ಫರಿಶ್ತಾ ವಿರಚಿತ ತಾರಿಖ್-ಇ-ಫರಿಶ್ತಾ
‘ತಾರಿಖ್-ಇ-ಫರಿಶ್ತಾ’, ‘ಗುಲ್ಶನ್-ಇ-ಇಬ್ರಾಹಿಂ’, ‘ನವರಸನಾಮಾ’ ಎಂಬೆಲ್ಲ ಹೆಸರುಗಳಿಂದ ಕರೆಯಿಸಿಕೊಳ್ಳುವ ಇತಿಹಾಸ ಗ್ರಂಥವನ್ನು ಬರೆದವನು ಮಹ್ಮದ್ ಕಾಸಿಂ ಫರಿಶ್ತಾ. ಇವನು ಕಾಸ್ಪಿಯನ್ ಸಮುದ್ರ ದಂಡೆಯ ಆಸ್ತ್ರಾಬಾದ್‌ನವನು. ಕ್ರಿ.ಶ. 1589ರಲ್ಲಿ ಬಿಜಾಪುರಕ್ಕೆ ಬಂದನು.
ಪ್ರಾರಂಭದಲ್ಲಿ ಫರಿಶ್ತಾನು ತನ್ನ ಗ್ರಂಥಕ್ಕೆ ‘ಗುಲ್ಶನ್-ಇ-ಇಬ್ರಾಹಿಂ’ ಎಂದು ಹೆಸರಿಟ್ಟನು. ಆನಂತರ ಕೆಲವು ಬದಲಾವಣೆಗಳನ್ನು ಮೂಡಿ ಅದಕ್ಕೆ ‘ನವರಸನಾಮಾ’ ಎಂದು ಹೆಸರಿಸಿದನು. ಆದರೆ ಫರಿಶ್ತಾನ ಈ ಕೃತಿಯ ವಿಶ್ವದಾದ್ಯಂತ ಪ್ರಸಿದ್ಧವಾಗಿದ್ದು ‘ತಾರಿಖ್-ಇ-ಫರಿಶ್ತಾ’ ಎಂದು. ಭಾರತದಲ್ಲಿ ಮುಸ್ಲಿಮರ ಆರಂಭದ ವಿವರಗಳೊಂದಿಗೆ ವಿವಿಧ ಇತಿಹಾಸ ಗ್ರಂಥಗಳ ಆಕರ
ಗಳನ್ನು ಬಳಸಿಕೊಂಡಿದ್ದನೆಂದು ಫರಿಶ್ತಾನೆ ಹೇಳಿದ್ದಾನೆ. ಭಾರತದ ಚಿಕ್ಕ-ಪುಟ್ಟ ಸಂಸ್ಥಾನಗಳ ಯಾವ ವಿವರಗಳನ್ನೂ ಆತನು ಬಿಟ್ಟಿಲ್ಲ.
ಈತ ಉಳಿದ ಮುಸ್ಲಿಮ್ ಇತಿಹಾಸಕಾರರಿಗಿಂತ ಬಹಳ ಸಂಯಮದಿಂದ ವರ್ತಿಸಿದ್ದಾನೆಂದು ಬಹುತೇಕ ವಿದ್ವಾಂಸರು ಗುರುತಿಸಿದ್ದಾರೆ.
ಇತಿಹಾಸದ ಇಂತಹ ಮಹತ್ವಪೂರ್ಣ ಗ್ರಂಥವನ್ನು ಬಿಜಾಪುರದ ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ‘ಆದಿಲ್‌ಶಾಹಿ ಸಾಹಿತ್ಯ ಅನುವಾದ ಯೋಜನೆ’ಯಡಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿಯವರ ನಿರ್ದೇಶನದಲ್ಲಿ ನಾಲ್ಕು ಸಂಪುಟಗಳಲ್ಲಿ ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಇದನ್ನು ಬಿ.ಜಯಾಚಾರ್ಯ, ಶ್ರೀಮತಿ ಬಾನು ಮುಷ್ತಾಕ್, ಹಸನ್ ನಯೀಮ್ ಸುರಕೋಡ, ಎಂ.ಎನ್.ನಧಾಫ್, ಪ್ರೊ.ವಸಂತ ಕುಷ್ಠಗಿ, ರತ್ನಾ ಮಣ್ಣೂರ, ಡಾ. ಅಮೀರುದ್ದೀನ್ ಖಾಜಿ, ಡಾ. ಅಬ್ದುಲ್ ಹಮೀದ್, ಡಾ.ಬಿ.ರಘೋತ್ತವರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
2.ಮಹ್ಮದ್ ಇಬ್ರಾಹಿಂ ಜುಬೇರಿ ವಿರಚಿತ ಬಸಾತೀನೆ-ಸಲಾತೀನ್
ಇದು ಆದಿಲ್‌ಶಾಹಿ ಇತಿಹಾಸಕ್ಕೆ ಸಂಬಂಧಿಸಿದ ಮತ್ತೊಂದು ಪರ್ಷಿಯನ್ ಕೃತಿ. ಇಬ್ರಾಹಿಂ ಜುಬೇರಿ ರಚಿಸಿದ ಈ ಕೃತಿಯ ವೈಶಿಷ್ಟ್ಯವೆಂದರೆ ಇನ್ನೂರು ವರ್ಷಗಳ ಕಾಲ ಆಳಿದ ಆದಿಲ್‌ಶಾಹಿಗಳ ಚರಿತ್ರೆಯನ್ನು ಒಂದೆಡೆ ದಾಖಲಿಸಲಾಗಿದೆ. ಈ ಕೃತಿಯಲ್ಲಿ ಆದಿಲ್‌ಶಾಹಿಗಳ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ವಿಜಯನಗರ ಹಾಗೂ ಅದು ಪತನವಾದ ನಂತರ ಮರಾಠರು, ಕೆಳದಿ ನಾಯಕರು, ಸುರಪುರ ನಾಯಕರು, ಸೋದೆ ನಾಯಕರು, ಗೋಲ್ಕೊಂಡಾದ ಕುತುಬ್‌ಶಾಹಿ, ಅಹ್ಮದ್ ನಗರದ ನಿಜಾಮಶಾಹಿ, ಬೀದರಿನ ಬರೀದ್‌ಶಾಹಿ ಸಂಸ್ಥಾನಗಳ ಹಲವು ಚಾರಿತ್ರಿಕ ವಿಷಯಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ. ಹೀಗಾಗಿ ಕರ್ನಾಟಕ ಚರಿತ್ರೆಗೆ ಇದೊಂದು ಮಹತ್ವಪೂರ್ಣ ಕೃತಿ.
ಈ ಗ್ರಂಥದಲ್ಲಿ ತಮ್ಮ ಬಿಜಾಪುರದ ಅಭಿಮಾನವನ್ನು ವಿಶೇಷವಾಗಿ ಉಲ್ಲೇಖಿಸಿ, ಬಿಜಾಪುರವನ್ನು ದಕ್ಷಿಣದ ಕಾಶ್ಮೀರ ಎಂದು ಕರೆಯುತ್ತಾನೆ. ಆದಿಲ್‌ಶಾಹಿಗಳ ನಂತರ ಬಿಜಾಪುರ ನಗರಕ್ಕೆ ಒದಗಿದ ದುರ್ದೆಸೆಯ ಬಗ್ಗೆ ಉಲ್ಲೇಖಿಸುತ್ತಾ ಒಂದು ಹಂತದಲ್ಲಿ ಮೊಘಲ ಮರಾಠರನ್ನು ದೂರುತ್ತಾ, ಬ್ರಿಟಿಷರನ್ನು ಶಪಿಸುವುದನ್ನು ಬಿಟ್ಟಿಲ್ಲ . ಆದಿಲ್‌ಶಾಹಿ ಅನುವಾದ ಯೋಜನೆಯಲ್ಲಿ ಐದನೇ ಸಂಪುಟವಾಗಿ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿಯವರು ಪರ್ಷಿಯನ್ ಭಾಷೆಯಿಂದ ಮೌಲಾನಾ ಮೆಹಬೂಬ್ ರಹಮಾನ್ ಇವರ ಸಹಾಯದೊಂದಿಗೆ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುತ್ತಾರೆ.
3. ಅಬ್ದುಲ್ಲಾ ದೆಹಲ್ವಿ ವಿರಚಿತ ಇಬ್ರಾಹೀಂ ನಾಮಾ
‘ಇಬ್ರಾಹಿಂ ನಾಮಾ’ ಕಾವ್ಯವನ್ನು ಬರೆದ ಅಬ್ದುಲ್ಲಾ ದೆಹಲ್ವಿಯು ಎರಡನೇ ಇಬ್ರಾಹೀಂ ಆದಿಲ್‌ಶಾಹನ ಆಸ್ಥಾನದಲ್ಲಿದ್ದ ಕವಿ. ಹೆಸರೇ ಹೇಳುವಂತೆ ಇದು ಇಬ್ರಾಹೀಂ ಆದಿಲ್‌ಶಾಹವನ್ನು ಕುರಿತಾದ ಕಥನ ಕಾವ್ಯ. ಆತನ ಗುಣಗಳು, ಉದಾರತೆ, ಆತನ ರಾಜಧಾನಿಯ ವೈಭವ ಇತ್ಯಾದಿಗಳನ್ನು ತನ್ನ ಕಾವ್ಯದಲ್ಲಿ ರಸಭರಿತವಾಗಿ ವರ್ಣಿಸಿದ್ದಾನೆ. ‘ಇಬ್ರಾಹಿಂ ನಾಮಾ’ ದಖನಿ ಮಸ್ನವಿಯಾಗಿದ್ದು, ಸುಮಾರು 712 ದ್ವಿಪದಿಗಳನ್ನು ಹೊಂದಿದೆ. ಇದನ್ನು ಕ್ರಿ.ಶ. 1604ರ ಹೊತ್ತಿಗೆ ಬರೆದು ಮುಗಿಸಿದನಂತೆ. ತನ್ನ ಮಸ್ನವಿ ಕಾವ್ಯದಲ್ಲಿ ಭಾರತೀಯ ಪರಂಪರೆಯ ಗಣಪತಿ, ಸರಸ್ವತಿ, ಲಕ್ಷ್ಮೀ, ಇಂದ್ರ ಮುಂತಾದವರನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದ್ದಾನೆ. ಬಿಜಾಪುರವನ್ನು ಕಾವ್ಯದುದ್ದಕ್ಕೂ ವಿದ್ಯಾಪುರವೆಂದು ಕರೆದಿದ್ದಾನೆ. ಬಿಜಾಪುರದ ವರ್ಣನೆಯಲ್ಲಿ ಇಲ್ಲಿಯ ಕೋಟೆ, ಕೊತ್ತಲಗಳು, ಮಹಲು, ಬಜಾರುಗಳು ಇತ್ಯಾದಿ ಸುಂದರವಾಗಿ ಚಿತ್ರಿಸಿದ್ದಾನೆ.
ಡಾ. ಸಿಬಗತುಲ್ಲಾ ಇವರು ಈ ಕಾವ್ಯವನ್ನು ಉರ್ದುವಿನಲ್ಲಿ ಸಂಪಾದಿಸಿ, ಕರ್ನಾಟಕ ಉರ್ದು ಅಕಾಡಮಿ ಬೆಂಗಳೂರು ಪರವಾಗಿ ಪ್ರಕಟಿಸಿದ್ದರು. ಇದರ ಕನ್ನಡ ಗದ್ಯಾನುವಾದವನ್ನು ಡಾ. ಸಿಬಗುತುಲ್ಲಾ ಅವರು ಅನುವಾದಿಸಿದ್ದಾರೆ.
(ಮುಂದುವರಿಯುವುದು)
ಬಿಜಾಪುರಕ್ಕೆ ಕ್ರಿ.ಶ. 1312ರಲ್ಲಿ ಕರೀಮುದ್ದೀನನು ಪ್ರಥಮ ರಾಜ್ಯಪಾಲನಾಗಿ ಬಂದಾಗ ಅವನೊಂದಿಗೆ ಪರ್ಷಿಯನ್ ಅರೇಬಿಕ್ ಭಾಷೆಗಳು ಬಂದವು. ಬಹಮನಿಗಳ ರಾಜ್ಯದೊಂದಿಗೆ ಇಲ್ಲಿ ಮರಾಠಿ ಸರದಾರರ ಆಗಮನದಿಂದಾಗಿ, ಆಗ ಹುಟ್ಟಿ ಬೆಳೆಯುತ್ತಿದ್ದ ಮರಾಠಿ ಭಾಷೆಗೆ ಆಸ್ಪದ ದೊರೆಯಿತು. ಬಹಮನಿಗಳ ಅವನತಿಯ ನಂತರ ಇಲ್ಲಿ ಆದಿಲ್‌ಶಾಹಿ ರಾಜ್ಯ ಸ್ಥಾಪನೆಗೊಂಡಿತು. ಬಿಜಾಪುರದ ಆದಿಲ್‌ಶಾಹಿಗಳು ಕ್ರಿ.ಶ. 1489ರಿಂದ 1686ರವರೆಗೆ ಸುಮಾರು 197 ವರ್ಷ ಈ ನಾಡನ್ನು ಆಳಿದರು. ಇದರಿಂದಾಗಿ ಪರ್ಷಿಯನ್ ಭಾಷೆಯು ರಾಜಭಾಷೆಯಾಯಿತು. ಆಸ್ಥಾನದಲ್ಲಿ ಅದಕ್ಕೆ ಆಶ್ರಯ ಮತ್ತು ಮನ್ನಣೆ ದೊರೆಯಿತಾದರೂ, ಆ ಭಾಷೆಯನ್ನು ಬಳಸಲು, ಬಳಸಿದವರನ್ನು ಅರ್ಥ ಮಾಡಿಕೊಳ್ಳಲು ಇಲ್ಲಿ ಸಾಕಷ್ಟು ಜನರು ಇರಲಿಲ್ಲ. ಪರದೇಶಗಳಿಂದ ಆಮದಾದ ಕೆಲವೇ ಜನರು ಅದನ್ನು ಇಲ್ಲಿ ಬಳಸುತ್ತಿದ್ದರು. ಸೈನ್ಯದಲ್ಲಿ ಮತ್ತು ಆಡಳಿತದ ವಿವಿಧ ಇಲಾಖೆಗಳಲ್ಲಿ ಉತ್ತರ ಭಾರತದವರು ಮತ್ತು ಸ್ಥಳೀಯರು ಸೇರಿಕೊಂಡಾಗ ಅವರಿಗೆ ಪರ್ಶಿಯನ್ ಆಗಲಿ, ಅರಬಿ ಭಾಷೆಯಾಗಲಿ ಬರುತ್ತಿರಲಿಲ್ಲ. ಉತ್ತರ ಭಾರತದಿಂದ ಬಂದವರು ತಮ್ಮ ಆಡು ಭಾಷೆಗಳಾದ ಖಡೀ ಬೋಲಿ, ಬಾಂಗಡಾ, ಬುಂದೇಲಿ, ಛತ್ತಿಸಗಡ, ಕನೋಜ್, ಬ್ರಜ್, ಅವಧ್, ಮಗಧ, ಮೈಥಿಲೀ, ರಾಜಸ್ಥಾನಿ ಮೊದಲಾದ ಭಾಷೆಗಳನ್ನು ಬಳಸುತ್ತಿದ್ದರು. ಯೂಸುಫ್ ಆದಿಲ್‌ಶಾಹಿಯ ಪತ್ನಿಯು ಮರಾಠಿ ಮುಕುಂದರಾಯನ ತಂಗಿಯಾಗಿದ್ದರಿಂದ ಅಂತಃಪುರದಲ್ಲಿ ಮರಾಠಿ ಭಾಷೆಯ ಪ್ರವೇಶ ಆಗಿತ್ತು. ರಕ್ಕಸ ತಂಗಡಿ ಕಾಳಗದಲ್ಲಿ ವಿಜಯನಗರ ಸಾಮ್ರಾಜ್ಯವು ಸೋಲನ್ನು ಅನುಭವಿಸಿದಾಗ, ತೆಲುಗು ಭಾಷೆಯ ಕೆಲವು ಪ್ರದೇಶಗಳು ಈ ರಾಜ್ಯಕ್ಕೆ ಸೇರಿಕೊಂಡವು. ಆಗ ರಾಜಧಾನಿಯಲ್ಲಿ ತೆಲುಗು ಪ್ರವೇಶವೂ ಆಯಿತು. ಪೋರ್ಚುಗೀಸರು ಗೋವೆಯಲ್ಲಿ ಬೀಡುಬಿಟ್ಟ ಕಾರಣ, ಅವರ ಜೊತೆ ನಿರಂತರ ವ್ಯಾಪಾರ ಸಂಬಂಧದಿಂದಾಗಿ ಪೋರ್ಚ್ ಗೀಸ್ ಭಾಷೆಯ ಪ್ರಭಾವವೂ ಈ ಪ್ರದೇಶದಲ್ಲಿ ದಟ್ಟವಾಗಿತ್ತು. ಹೀಗಾಗಿ ಈ ಕನ್ನಡದ ಪ್ರದೇಶವು ಪರ್ಷಿಯನ್, ಅರೇಬಿಕ್, ಉತ್ತರ ಭಾರತದ ಗ್ರಾಮೀಣ ಭಾಷೆಗಳು, ಮರಾಠಿ ಮತ್ತು ತೆಲುಗು ಭಾಷೆಗಳ ಅಪೂರ್ವ ತಾಣವಾಯಿತು. ಬಿಜಾಪುರ ಹೀಗೆ ಹತ್ತು ಹಲವು ಭಾಷೆಗಳ ಸಂಗಮವಾಗಿದ್ದ ಈ ರಾಜ್ಯದ ಸೈನ್ಯದಲ್ಲಿ ವಿವಿಧ ಭಾಷೆಗಳ ಸೈನಿಕರು ಇರುತ್ತಿದ್ದುದು ಸಹಜವಾಗಿತ್ತು. ಅವರು ಪರಸ್ಪರ ಸಂಭಾಷಣೆಯಲ್ಲಿ ತೊಡಗಿದಾಗ ತಮಗೆ ಬರುತ್ತಿದ್ದ ಭಾಷೆಗಳ ಹರಕು-ಮುರುಕು ಬಳಕೆಯಾಯಿತು. ಹೀಗೆ ಹಲವಾರು ಭಾಷೆಗಳು ಸಮ್ಮಿಶ್ರಣಗೊಂಡು ಒಂದು ಹೊಸ ಭಾಷೆ ಬಹಮನಿ ಕಾಲದಿಂದಲೇ ಪ್ರಾರಂಭವಾಗಿ, ಆದಿಲ್ ಶಾಹಿ ರಾಜ್ಯದಲ್ಲಿ ಒಂದು ರೂಪ ಪಡೆಯಿತು. ಈ ಬಾಯಿ ಮಾತಿನ ಭಾಷೆ ಅಕ್ಷರಗಳಲ್ಲಿ ಮೂಡಿದ್ದು ರೋಚಕ. ಅದೇ ಉರ್ದು ಭಾಷೆಯ ಜನಪದಿಯ ಭಾಷೆ ದಖನಿ.