×
Ad

ಪಾತ್ರ ಮುಗಿಸಿದ ರಂಗಭೂಮಿ ಕಲಾವಿದ ಬೂದಗುಂಪಿ ಹುಸೇನ್ ಸಾಬ್

Update: 2025-12-26 15:06 IST

ರಂಗಭೂಮಿ ಕಲಾವಿದ, ಹಾಸ್ಯ ನಟ, ಖ್ಯಾತ ಅಣಕುಗಾರ(ಮಿಮಿಕ್ರಿ), ಖಳನಾಯಕ, ಕಟು ವಿಮರ್ಶಕ, ಕಾಂಗ್ರೆಸ್ ಪಕ್ಷದ ವಕ್ತಾರ, ಕನ್ನಡ ಹಿತರಕ್ಷಕ ಸಂಘದ ಉಪಾಧ್ಯಕ್ಷ, ಪ್ರಶ್ನಾತೀತ ನಾಯಕ ಕಂಪ್ಲಿಯ ಬೂದಗುಂಪಿ ಹುಸೇನ್ ಸಾಹೇಬ್ ತಮ್ಮ ಪಾತ್ರ ಮುಗಿಸಿ, ಬಣ್ಣ ಕಳಚಿ ತೆರೆ ಮರೆ ಸೇರಿದ್ದಾರೆ.

ಮುಸ್ಲಿಮ್‌ಸಮುದಾಯದ ಪ್ರಮುಖರಾಗಿದ್ದರೂ ಹುಸೇನ್ ಸಾಹೇಬ್ ಸರ್ವ ಧರ್ಮ, ಸಮುದಾಯದವರೊಂದಿಗೆ ಸ್ನೇಹ ಹೊಂದಿದ್ದರು. ‘ರೈತ ನಗಲಿಲ್ಲ ಸರಕಾರ ಉಳಿಯಲಿಲ್ಲ’, ‘ಶ್ರೀವೀರಬ್ರಹ್ಮೇಂದ್ರಸ್ವಾಮಿ ಚರಿತ್ರೆ’, ‘ರಕ್ತ ರಾತ್ರಿ’ ಸೇರಿದಂತೆ ನಾನಾ ನಾಟಕಗಳಲ್ಲಿ ನಾಯಕ ನಟನಾಗಿ, ಖಳನಾಯಕನಾಗಿ, ಹಾಸ್ಯ ಪಾತ್ರಧಾರಿಯಾಗಿ, ಪೋಷಕ ಪಾತ್ರಧಾರಿಯಾಗಿ ಕಲಾಸೇವೆ ನಿರ್ವಹಿಸಿದ್ದರು.

ಬಳ್ಳಾರಿ ಬಸಪ್ಪ ಅವರ ನಾಯಕ ನಟನೆಯ ‘ರೈತ ನಗಲಿಲ್ಲ ಸರಕಾರ ಉಳಿಯಲಿಲ್ಲ’ ಎಂಬ ಸಾಮಾಜಿಕ ನಾಟಕದಲ್ಲಿ ಖಳ ನಾಯಕನಾಗಿ ನಟಿಸಿ ಮಿಂಚಿದ್ದರು. ಖಳನಟ ವಜ್ರಮುನಿಯವರಿಂದ ರಂಗಭೂಮಿಯ ರಾಜ್ಯಮಟ್ಟದ ಉತ್ತಮ ಕಲಾವಿದ ಪ್ರಶಸ್ತಿ ಪಡೆದದ್ದು ಇವರ ಹೆಗ್ಗಳಿಕೆಯಾಗಿದೆ. ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆಯ ರಂಗ ಭಾರ್ಗವ ಪ್ರಶಸ್ತಿ, ಸಮಾಜ ಸೇವಾ ಭಾರ್ಗವ ಪ್ರಶಸ್ತಿಗಳನ್ನು ಎಚ್.ಪಿ.ಕಲ್ಲಂಭಟ್ಟರಿಂದ ಪಡೆದಿದ್ದರು.

ಹುಸೇನ್ ಸಾಹೇಬ್ ಅವರ ಪ್ರಮುಖ ಆಕರ್ಷಣೆ ಮಾತು ಮತ್ತುಮಿಮಿಕ್ರಿ. ಸಿನೆಮಾ ನಟರಾದ ಡಾ.ರಾಜ ಕುಮಾರ್, ಬಾಲಕೃಷ್ಣ, ವಜ್ರಮುನಿ ಸೇರಿದಂತೆ ಕನ್ನಡ, ಹಿಂದಿ, ತೆಲುಗು ಚಲನಚಿತ್ರ ನಟರು, ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ, ದಿವಂಗತಬಂಗಾರಪ್ಪ, ಎಂ.ಪಿ.ಪ್ರಕಾಶ್ ಹಾಗೂ ಸ್ಥಳೀಯರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯ ಸ್ವಾಮಿ ಸೇರಿದಂತೆ ಸ್ನೇಹಿತರ, ಒಡನಾಡಿಗಳ ಮಾತು ಗಳನ್ನು ಯಥಾವತ್ತಾಗಿ ಅನುಕರಣೆ ಮಾಡಿ ತೋರಿಸುವ ಮೂಲಕ ಎಲ್ಲರನ್ನು ನಕ್ಕು ನಗಿಸಿ ಹೊಸ ಕಳೆ ಸೃಷ್ಟಿಸುತ್ತಿದ್ದರು. ಸಭೆ ಸಮಾರಂಭಗಳಲ್ಲಿ ಸ್ವಾಗತ, ವಂದನೆ, ಪರಿಚಯ ಹಾಗೂ ನಿರೂಪಣೆಯನ್ನು ವಿಶೇಷ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಿದ್ದರು.

ಹುಸೇನ್ ಸಾಹೇಬರು ಕನ್ನಡ ಹಿತರಕ್ಷಕ ಸಂಘದಲ್ಲಿ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸದ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ನಾನಾ ಸಂಘಟನೆಗಳಲ್ಲೂ ಸೇವೆ ಸಲ್ಲಿಸಿದ್ದುಂಟು. ಸದಾ ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ಜನರ ಮುಂದೆ ನಿಲ್ಲ ಬಯಸುತ್ತಿದ್ದ ಹುಸೇನ್ ಸಾಹೇಬ್ ಕಟು ವಿಮರ್ಶಕರಾಗಿದ್ದರು. ಅದು ಜನಸಾಮಾನ್ಯರೇ ಆಗಿರಲಿ ಅಥವಾ ರಾಜಕಾರಣಿಗಳೇ ಆಗಿರಲಿ ಯಾರನ್ನೂ ಬಿಡದೆ ಖಂಡತುಂಡವಾಗಿ ವಿಮರ್ಶಿಸುತ್ತಿದ್ದರು. ಹುಸೇನ್ ಸಾಹೇಬರ ಕಣ್ಣಿಗೆ ಬಿದ್ದವರ ಪಾಲಿಗೆ ಹೊಗಳಿಕೆ ಹಾಗೂ ತೆಗಳಿಕೆಯಂತು ಖಂಡಿತ ತಪ್ಪಿದ್ದಲ್ಲ.

ಈಗ ಹುಸೇನ್ ಸಾಹೇನ್ ನೆನಪಷ್ಟೇ. ಬದುಕೆಂಬ ರಂಗನೆಲೆಯಲ್ಲಿನ ಪಾತ್ರ ಮುಗಿಸಿದ್ದರೂ ಅವರ ನಟನೆ ಕಣ್ಮುಂದೆ ನಿಲ್ಲುತ್ತದೆ. ಅವರ ಅಗಲಿಕೆಯಿಂದ ಒಂದು ತಲೆಮಾರಿನ ರಂಗಭೂಮಿಯ ಕೊಂಡಿ ಕಳಚಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News