×
Ad

‘ಗ್ರೀನ್ ಕ್ರೆಡಿಟ್’ನಿಂದ ಯಾರಿಗೆ ಲಾಭ?

Update: 2025-12-26 10:47 IST

2023ರಲ್ಲಿ ಮೋದಿ ಸರಕಾರ ‘ಗ್ರೀನ್ ಕ್ರೆಡಿಟ್’ ಎಂಬ ಕಾರ್ಯಕ್ರಮ ಪ್ರಾರಂಭಿಸಿತು. ಅದು ಪರಿಸರ ಸಂರಕ್ಷಣೆಗೆ ಆಧುನಿಕ ವಿಧಾನ ಎಂದು ಜಾಗತಿಕ ಮಟ್ಟದಲ್ಲಿ ಹೇಳಲಾಯಿತು.

ಕ್ಷೀಣಗೊಂಡ ಅರಣ್ಯ ಭೂಮಿ ಗುರುತಿಸಲು ಈ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಆದೇಶಿಸುತ್ತದೆ. ಅಂದರೆ, ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿರದ, ಆದರೆ ಮರಗಳನ್ನು ಬೆಳೆಸಿ ಮರಳಿ ಕಾಡು ಸೃಷ್ಟಿಸಬಹುದಾದ ಪ್ರದೇಶಗಳನ್ನು ಗುರುತಿಸುವುದು ಇದರ ಉದ್ದೇಶವೆನ್ನಲಾಗಿತ್ತು.

ಕೇಂದ್ರ ಸರಕಾರ ‘ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ’ಗೆ (ICFRE) ಅಂತಹ ಎಲ್ಲಾ ಭೂಮಿಯನ್ನು ನೋಂದಾಯಿಸುವ ಭೂ ಬ್ಯಾಂಕ್ ಅನ್ನು ರಚಿಸುವ ಕೆಲಸ ವಹಿಸಿತು.

ಈ ಭೂಮಿಯನ್ನು ಕಂಪೆನಿಗಳು ಮತ್ತು ಇತರ ಸಂಸ್ಥೆಗಳಿಗೆ ಅರಣ್ಯೀಕರಣಕ್ಕಾಗಿ ನೀಡಬೇಕಾಗಿತ್ತು.

ಕಂಪೆನಿಗಳು ವಿವಿಧ ಯೋಜನೆ, ಕಾರ್ಖಾನೆ ಅಥವಾ ಗಣಿಗಳನ್ನು ಪ್ರಾರಂಭಿಸಿದಾಗ, ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕತ್ತರಿಸಲಾಗುತ್ತದೆ ಮತ್ತು ಕಾಡು ನಾಶಮಾಡಲಾಗುತ್ತದೆ. ಇದರಿಂದಾದ ಪರಿಸರ ಹಾನಿ ಸರಿದೂಗಿಸಲು, ಕಂಪೆನಿಗಳು ಗೊತ್ತುಪಡಿಸಿದ ಪ್ರದೇಶದಲ್ಲಿ ಕಡ್ಡಾಯವಾಗಿ ಮರಗಳನ್ನು ನೆಡಬೇಕಾಗುತ್ತದೆ. ಆದ್ದರಿಂದ ಕಂಪೆನಿಗಳು ಕತ್ತರಿಸಿದ ಅದೇ ಪ್ರಮಾಣದ ಅರಣ್ಯವನ್ನು ಮರಳಿ ನಿರ್ಮಿಸುವುದು ಈ ಯೋಜನೆಯ ಮೇಲ್ನೋಟದ ಉದ್ದೇಶವಾಗಿತ್ತು.

ಗ್ರೀನ್ ಕ್ರೆಡಿಟ್ ಕಾರ್ಯಕ್ರಮ ಗಣಿಗಾರಿಕೆ, ಕಾರ್ಖಾನೆ ಮತ್ತು ಯೋಜನೆಗಳನ್ನು ಪ್ರಾರಂಭಿಸುವ ಉದ್ಯಮಿಗಳು ಸ್ವತಃ ಮರಗಳನ್ನು ನೆಡುವ ಬದಲು, ಇತರ ಕಂಪೆನಿಗಳು ಅಥವಾ ಅರಣ್ಯ ಇಲಾಖೆ ಬೆಳೆಸಿದ್ದನ್ನು ‘ಕ್ರೆಡಿಟ್’ ರೂಪದಲ್ಲಿ ಖರೀದಿಸಲು ಅನುವು ಮಾಡಿಕೊಡುವ ಕಾರ್ಯಕ್ರಮವಾಗಿದೆ.

ಆದರೆ, ಪರಿಸರ ರಕ್ಷಣೆಗೆ ಎಂದು ಹೇಳಿಕೊಳ್ಳಲಾಗಿದ್ದ ಗ್ರೀನ್ ಕ್ರೆಡಿಟ್ ಕಾರ್ಯಕ್ರಮದ ಹಿಂದಿನ ವಾಸ್ತವವೇ ಬೇರೆಯಿತ್ತು.

ಅದಾನಿಯಂತಹ ಉದ್ಯಮಿಗಳಿಗೆ ಕಾಡುಗಳನ್ನು ಸರಾಗವಾಗಿ ಹಸ್ತಾಂತರಿಸಲೆಂದೇ ಈ ಕಾರ್ಯಕ್ರಮದ ನಿಯಮಗಳನ್ನು ತಿರುಚಲಾಗಿದೆಯೇ ಎಂಬ ಅನುಮಾನಗಳು ಬಲವಾಗಿವೆ.

ಪರಿಸರ ಕಾಳಜಿ ವಿಷಯವಾಗಿ ಭಾರತ ಮುಂಚೂಣಿಯಲ್ಲಿದೆ ಎಂದು ವಿದೇಶಿ ವೇದಿಕೆಗಳಲ್ಲಿ ಬಿಂಬಿಸುತ್ತಿದ್ದ ಮೋದಿ ಸರಕಾರ, ಅದಾನಿಗೆ ಕಾಡುಗಳನ್ನು ಹಸ್ತಾಂತರಿಸುವ ಮೂಲಕ ದೇಶದ ಜನರ ಕಿವಿಯ ಮೇಲೆ ಹೂ ಇಡಲು ಯೋಜನೆಗಳನ್ನು ರೂಪಿಸುತ್ತಿತ್ತು.

ಭಾರತದ ಪರಿಸರ ರಕ್ಷಣೆ ಬಗ್ಗೆ ಮೋದಿ ಎಷ್ಟು ಗಂಭೀರವಾಗಿದ್ದಾರೆ ಎಂದು ಜಗತ್ತಿಗೆ ತೋರಿಸಲು ವೀಡಿಯೊ ನಿರ್ಮಾಣಕ್ಕಾಗಿ ಸುಮಾರು 35 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ತನಿಖಾ ವರದಿ ಹೇಳುತ್ತದೆ.

ಆದರೆ, ವಾಸ್ತವದಲ್ಲಿ ಅದಾನಿಗೆಂದೇ ರೂಪಿಸಲಾಗಿದ್ದ ಯೋಜನೆಗಳ ಮೇಲೆ ಗುಟ್ಟಾಗಿ ಕೆಲಸ ನಡೆಯುತ್ತಿತ್ತು ಎನ್ನುತ್ತದೆ ಆ ವರದಿ.

ಎಲ್ಲೆಲ್ಲೂ ಹಸಿರು ಎಂದು ತೋರಿಸಿ ಜಗತ್ತಿನ ಕಣ್ಣಿಗೆ ಮಣ್ಣೆರಚಲು ಗ್ರೀನ್ ಕ್ರೆಡಿಟ್ ಕಾರ್ಯಕ್ರಮವನ್ನು ತರಾತುರಿಯಲ್ಲಿ ಪ್ರಾರಂಭಿಸಲಾಯಿತು. ಅದರ ಅಡಿಯಲ್ಲಿ, ದೇಶಾದ್ಯಂತ ಹಲವಾರು ರಾಜ್ಯಗಳು ಹೆಚ್ಚಿನ ಮರಗಳನ್ನು ನೆಡಲು ಬಳಸಬಹುದಾದ ಭೂಮಿಯನ್ನು ನೋಂದಾಯಿಸಿದವು.

ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಪ್ರಕಾರ, ಗುಜರಾತ್ ಸರಕಾರ ಹಲವಾರು ಅರಣ್ಯ ಭಾಗಗಳನ್ನು ನೋಂದಾಯಿಸಿದ ಪ್ರಮುಖ ರಾಜ್ಯವಾಗಿದೆ. ಆದರೆ ನಂತರ, ಅದಾನಿ ಇಚ್ಛೆಯ ಮೇರೆಗೆ ಗುಜರಾತ್ ಸರಕಾರ ಆ ಅರಣ್ಯ ಭೂಮಿಯನ್ನು ಗ್ರೀನ್ ಕ್ರೆಡಿಟ್ ಪಟ್ಟಿಯಿಂದ ಕೈಬಿಟ್ಟಿತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಗುಜರಾತ್ ಸರಕಾರ ತಾನು ನೋಂದಾಯಿಸಿದ್ದ ಅರಣ್ಯ ಪ್ರದೇಶಗಳನ್ನು ತೆಗೆದುಹಾಕಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯುತ್ತದೆ ಮತ್ತು ಗುಜರಾತ್ ಸರಕಾರದ ಮನವಿಯನ್ನು ಕೇಂದ್ರ ಕೂಡಲೇ ಒಪ್ಪಿಕೊಳ್ಳುತ್ತದೆ.

ಜುಲೈ 2024ರಲ್ಲಿ ಗುಜರಾತ್ ಅರಣ್ಯ ಇಲಾಖೆ ICFREಗೆ ಪತ್ರ ಬರೆದಿತ್ತೆಂಬುದನ್ನು ವರದಿ ಸಾಕ್ಷ್ಯ ಸಮೇತ ಹೇಳುತ್ತದೆ. ಆ ಪತ್ರದಲ್ಲಿ, ಗ್ರೀನ್ ಕ್ರೆಡಿಟ್ ಕಾರ್ಯಕ್ರಮದ ಅಡಿಯಲ್ಲಿ ಸೇರಿಸಲಾದ 13 ಅರಣ್ಯ ಪ್ರದೇಶಗಳನ್ನು ಗ್ರೀನ್ ಕ್ರೆಡಿಟ್ ಲ್ಯಾಂಡ್ ಬ್ಯಾಂಕ್‌ನಿಂದ ತೆಗೆದುಹಾಕಬೇಕೆಂದು ಗುಜರಾತ್ ಸರಕಾರ ವಿನಂತಿಸಿತ್ತು.

ಈ ಭೂಮಿಗಳಲ್ಲಿ ಮರಗಳನ್ನು ನೆಡುವುದು ಸಾಧ್ಯವಿಲ್ಲ ಎಂದು ಕುಂಟುನೆಪ ನೀಡಲಾಯಿತು. ಕೆಲವು ಸ್ಥಳಗಳಲ್ಲಿ ಭೂಮಿ ತುಂಬಾ ಕಲ್ಲಿನಿಂದ ಕೂಡಿದೆ ಎಂದು ಹೇಳಲಾಯಿತು. ಭೂಪ್ರದೇಶ ತುಂಬಾ ಕಡಿದಾಗಿದೆ ಎಂದು ಮತ್ತೆ ಕೆಲವು ಪ್ರದೇಶಗಳ ಬಗ್ಗೆ ಹೇಳಲಾಯಿತು. ಭೂಮಿಯನ್ನು ತಪ್ಪಾಗಿ ಎರಡು ಬಾರಿ ನೋಂದಾಯಿಸಲಾಗಿದೆ ಎಂದು ಮತ್ತೆ ಕೆಲವು ಪ್ರದೇಶಗಳ ಬಗ್ಗೆ ಸಬೂಬು ನೀಡಲಾಯಿತು.

ಅಂತೂ, ಮರ ಬೆಳೆಸಲು ಸೂಕ್ತ ಎಂದಿದ್ದ ಪ್ರದೇಶಗಳನ್ನೇ ಆ ಪಟ್ಟಿಯಿಂದ ತೆಗೆಯಲು ಏನೇನು ಕಾರಣ ಕೊಡಬಹುದೋ ಅವೆಲ್ಲವನ್ನೂ ಮಾಡಿ, ಪ್ರಶ್ನೆಗಳು ಬಂದರೆ ತಪ್ಪಿಸಿಕೊಳ್ಳಲು ನೆಪ ಹುಡುಕಿಕೊಳ್ಳಲಾಯಿತು.

ಇಲ್ಲಿ ಕಾಡುವ ಪ್ರಶ್ನೆಯೆಂದರೆ, ಅದಾನಿ ಗ್ರೂಪ್ ಆ ಭೂಮಿಯ ಮೇಲೆ ಕಣ್ಣು ಹಾಕುವವರೆಗೂ ಅದು ಅರಣ್ಯೀಕರಣಕ್ಕೆ ಯೋಗ್ಯವಾಗಿತ್ತು. ಆದರೆ ಅದಾನಿಯ ಪ್ರಸ್ತಾವನೆ ಬಂದ ತಕ್ಷಣ ಅದೇ ಭೂಮಿ ಕಲ್ಲಿನಿಂದ ಕೂಡಿದ, ನಿಷ್ಪ್ರಯೋಜಕ ಭೂಮಿಯಾಗಿ ಬದಲಾದದ್ದು ಹೇಗೆ?

ಆದರೂ, ಈ ಪಟ್ಟಿಯಲ್ಲಿಯೇ, ಸ್ಪಷ್ಟ ಕಾರಣಗಳ ಉಲ್ಲೇಖವಿತ್ತು.

ಅದಾನಿ ಕಂಪೆನಿಯ ಅರಣ್ಯ ತೆರವು ಪ್ರಸ್ತಾವನೆಯಲ್ಲಿ ಅದನ್ನು ರದ್ದುಗೊಳಿಸಲು ವಿನಂತಿಸಲಾಗಿರುವುದರಿಂದ ನಾಲ್ಕು ಅರಣ್ಯ ಪ್ರದೇಶಗಳನ್ನು ಗ್ರೀನ್ ಕ್ರೆಡಿಟ್ ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಉಲ್ಲೇಖವಿತ್ತು.

ಗುಜರಾತ್ ಸರಕಾರವೇ ಈ ಮೊದಲು ಅರಣ್ಯ ವಿಸ್ತರಣೆಗಾಗಿ ಗುರುತಿಸಿದ್ದ ಮತ್ತು ಅಲ್ಲಿ ಮರಗಳನ್ನು ಸುಲಭವಾಗಿ ನೆಡಬಹುದು ಎನ್ನಲಾಗಿದ್ದ ಪ್ರದೇಶವೇ ಇದ್ದಕ್ಕಿದ್ದಂತೆ ಮರಗಳನ್ನು ನೆಡಲು ಯೋಗ್ಯವಲ್ಲದ ಭೂಮಿಯಾಯಿತು.

ಆದರೆ ಕಥೆ ಅಷ್ಟಕ್ಕೇ ಮುಗಿಯುವುದಿಲ್ಲ. ಗುಜರಾತ್ ಸರಕಾರದ ಪತ್ರದ ನಂತರ, ವಿಷಯ ICFRE ಅಂಗಳವನ್ನು ತಲುಪಿತು. ಈ ವಿಷಯದ ಬಗ್ಗೆ ICFRE ನಿರ್ಧರಿಸುವುದು ಸುಲಭವಲ್ಲದಿದ್ದರೂ, ಸಂಸ್ಥೆಯೊಳಗೆ ಹಲವಾರು ಸುತ್ತಿನ ಚರ್ಚೆಗಳು ನಡೆದವು.

ಗುಜರಾತ್ ಸರಕಾರದ ಬೇಡಿಕೆಗಳು ವಿರೋಧಾಭಾಸದಿಂದ ಕೂಡಿವೆ ಎಂದು ಸ್ವತಃ ಅಧಿಕಾರಿಗಳೇ ಭಾವಿಸಿದರು.

ICFRE ಅಧಿಕಾರಿಯೊಬ್ಬರು ಸಹ, ಈ ಹಿಂದೆ ಮರ ಬೆಳೆಸಬಹುದು ಎನ್ನಲಾಗಿದ್ದ ಭೂಮಿಯೇ ಈಗ ಮರ ಬೆಳೆಸಲು ಯೋಗ್ಯವಲ್ಲ ಎಂದು ಹೇಗಾಯಿತು? ಎಂಬ ಪ್ರಶ್ನೆಯನ್ನೇ ಆಂತರಿಕವಾಗಿ ಎತ್ತಿದರು.

ಒಂದು ವೇಳೆ ಕಂಪೆನಿ ಈಗಾಗಲೇ ಆ ಅರಣ್ಯ ಪ್ರದೇಶಗಳ ಮೇಲೆ ಹಕ್ಕು ಹೊಂದಿದ್ದರೆ, ಮೊದಲೇ ಅವುಗಳನ್ನು ಯೋಜನೆಯಲ್ಲಿ ಏಕೆ ಸೇರಿಸಲಾಯಿತು ಎಂಬ ಗೊಂದಲವೂ ಇತ್ತು.

ಗ್ರೀನ್ ಕ್ರೆಡಿಟ್ ಪೋರ್ಟಲ್‌ನಲ್ಲಿ ಭೂಮಿಯನ್ನು ತೆಗೆದುಹಾಕಲು ಅಥವಾ ತಿರಸ್ಕರಿಸಲು ಸ್ಪಷ್ಟ ಆಯ್ಕೆಯಿಲ್ಲ ಎಂಬುದನ್ನು ಅಧಿಕಾರಿಗಳು ಗಮನಿಸಿದರು. ಅಂದರೆ, ಮಧ್ಯದಲ್ಲಿಯೇ ಈ ಕಾಡುಗಳನ್ನು ಯೋಜನೆಯಿಂದ ಹೊರಗಿಡಲು ಅನುಮತಿ ನೀಡುವ ನಿಯಮಗಳು ಇರಲಿಲ್ಲ.

ಆಗಸ್ಟ್ 2024 ರ ಹೊತ್ತಿಗೆ, ICFRE ಈ ಪ್ರಕರಣದ ವಿವರಗಳನ್ನು ಪರಿಶೀಲಿಸಿತ್ತು.

ಅದಾನಿ ಆ ಅರಣ್ಯ ಭೂಮಿಗಾಗಿ ಬೇಡಿಕೆ ಇಟ್ಟಿದ್ದರು. ಹಾಗಾಗಿ, ವಿಷಯ ಸಂಕೀರ್ಣವಾಗಿತ್ತು ಮತ್ತು ರಾಜಕೀಯ ಒತ್ತಡವಿತ್ತು. ಅಧಿಕಾರಿಗಳು ಕೂಡ ಅದೇ ಕಾರಣಕ್ಕಾಗಿ ಈ ವಿಷಯದ ಬಗ್ಗೆ ನೇರ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸುತ್ತಿದ್ದರು. ಅಂತಿಮ ನಿರ್ಧಾರ ಪರಿಸರ ಸಚಿವಾಲಯದಿಂದಲೇ ಬರಬೇಕು ಎಂದು ಅಧಿಕಾರಿಗಳು ಕೈತೊಳೆದುಕೊಂಡರು.

ಅಂದರೆ, ಎಲ್ಲವನ್ನೂ ಸಚಿವಾಲಯದ (ರಾಜಕೀಯ) ನಿರ್ಣಯಕ್ಕೆ ಬಿಡಲಾಯಿತು.

ಸೆಪ್ಟಂಬರ್ 2024ರಲ್ಲಿ ICFRE ಈ ವಿಷಯವನ್ನು ಪರಿಸರ ಸಚಿವಾಲಯಕ್ಕೆ ಕಳುಹಿಸಿತು. ಡಿಸೆಂಬರ್ 2024ರಲ್ಲಿ ಗುಜರಾತ್ ಸರಕಾರ ಹೊಸ ವಾದವನ್ನು ಮಂಡಿಸಿತು.

ಅದಾನಿ ಗ್ರೂಪ್ ಅನ್ನು ಹೆಸರಿಸದೆ, ಯಾರೂ ಗ್ರೀನ್ ಕ್ರೆಡಿಟ್ ಕಾರ್ಯಕ್ರಮದಡಿ ಮರಗಳನ್ನು ನೆಡದ ಅಥವಾ ಮರಗಳನ್ನು ನೆಡಲು ಆಸಕ್ತಿ ವ್ಯಕ್ತಪಡಿಸದ ಭೂಮಿಯನ್ನು ಯೋಜನೆಯಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಹೇಳಿತು.

ಕೇಂದ್ರ ಸರಕಾರ ತಡಮಾಡದೆ ಈ ಭೂಮಿಯನ್ನು ಗ್ರೀನ್ ಕ್ರೆಡಿಟ್ ಲ್ಯಾಂಡ್ ಬ್ಯಾಂಕ್‌ನಿಂದ ತೆಗೆದುಹಾಕಿತು. ದಾಖಲೆಗಳು ಇದನ್ನು ಆಡಳಿತಾತ್ಮಕ ನಿರ್ಧಾರವೆಂದು ತೋರಿಸಿದವು.

ಆದರೆ, ಇದು ವಾಸ್ತವವಾಗಿ ಅದಾನಿ ಗ್ರೂಪ್‌ಗೆ ಈಗಾಗಲೇ ಮೀಸಲಿಟ್ಟಿದ್ದ ಅದೇ ನಾಲ್ಕು ಅರಣ್ಯ ಪ್ರದೇಶಗಳನ್ನು ಹೊರಗಿಟ್ಟಿತ್ತು.

ಆರ್‌ಟಿಐ ಮೂಲಕ ಗುಜರಾತ್ ಸರಕಾರವನ್ನು ಇದರ ಬಗ್ಗೆ ಕೇಳಿದಾಗ, ಸರಕಾರ ಅದನ್ನು ಸ್ಪಷ್ಟವಾಗಿ ನಿರಾಕರಿಸಿತು.

ಗ್ರೀನ್ ಕ್ರೆಡಿಟ್ ಪ್ರೋಗ್ರಾಂನಿಂದ ಯಾವುದೇ ಅರಣ್ಯ ಭೂಮಿಯನ್ನು ತೆಗೆದುಹಾಕಲು ಅದಾನಿ ಗ್ರೂಪ್ ಎಂದಿಗೂ ಕೇಳಿಲ್ಲ ಎಂದು ಅದು ಹಸಿ ಸುಳ್ಳು ಹೇಳಿತು.

ಸರಕಾರದ ಬಾಯಲ್ಲಿ ಒಂದು ಮಾತು, ಕಡತಗಳಲ್ಲಿ ಇನ್ನೊಂದು ಕಥೆ. ಸಾರ್ವಜನಿಕವಾಗಿ ನಿರಾಕರಿಸುತ್ತಲೇ, ಗುಟ್ಟಾಗಿ ಕಾರ್ಪೊರೇಟ್ ಪ್ರಸ್ತಾವನೆಗಳಿಗೆ ಕೆಂಪು ಹಾಸು ಹಾಸುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.

ಗುಜರಾತ್ ಸರಕಾರ ಭೂಮಿ ತೆರವುಗೊಳಿಸಲು ವಿನಂತಿಸಿದ್ದು ಮಾತ್ರವಲ್ಲದೆ, ಆ ಭೂಮಿ ಎಫ್‌ಸಿಎ ಅಡಿಯಲ್ಲಿ ಅದಾನಿ ಕಂಪೆನಿಗಳ ಪ್ರಸ್ತಾವನೆಯ ಭಾಗವಾಗಿದೆ ಎಂದು ಹೇಳಿದೆ ಎಂಬುದನ್ನೇ ಪರಿಸರ ಸಚಿವಾಲಯ ಮತ್ತು ICFREನ ಆಂತರಿಕ ದಾಖಲೆಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂದು ವರದಿ ಹೇಳುತ್ತದೆ.

ಆರ್‌ಟಿಐ ಅಡಿಯಲ್ಲಿ ಪಡೆದ ಈ ದಾಖಲೆಗಳನ್ನು ಗುಜರಾತ್ ಸರಕಾರಕ್ಕೆ ತೋರಿಸಿದಾಗ, ಅದು ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಅಥವಾ ನಿರಾಕರಿಸಿಯೂ ಇಲ್ಲ, ಮೌನಕ್ಕೆ ಶರಣಾಗಿದೆ. ಕೇಂದ್ರ ಸರಕಾರ ಮತ್ತು ICFRE ಕೂಡ ಇದೇ ಮೌನವನ್ನು ಅನುಸರಿಸಿವೆ.

ICFRE ತಾನು ಸ್ವತಃ ಅರಣ್ಯ ತೆರವು ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಮತ್ತು ಹಾಗಾಗಿ ಕಂಪೆನಿಗಳ ಪ್ರಸ್ತಾವನೆಗಳ ಬಗ್ಗೆ ಯಾವುದೇ ಅರಿವು ಇಲ್ಲ ಎಂದು ಮತ್ತೊಂದು ಆರ್‌ಟಿಐ ಉತ್ತರದಲ್ಲಿ ಹೇಳಿದೆ. ಅಂದರೆ, ಇಡೀ ಗ್ರೀನ್ ಕ್ರೆಡಿಟ್ ಪ್ರೋಗ್ರಾಂ ಅನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಗೇ ಯಾರಿಗೆ ಅಥವಾ ಏಕೆ ಅರಣ್ಯಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದಿಲ್ಲ! ಅಥವಾ ಹಾಗೆಂದು ಅದು ಹೇಳಿಕೊಳ್ಳುತ್ತಿದೆ.

ಅದಾನಿ ಗ್ರೂಪ್‌ನ ಪ್ರತಿಕ್ರಿಯೆಯೂ ಜಾರಿಕೊಳ್ಳುವ ರೀತಿಯದ್ದಾಗಿದೆ ಎಂದು ವರದಿ ಹೇಳುತ್ತದೆ.

ಅಕ್ಟೋಬರ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಕ್ರೆಡಿಟ್ ಕಾರ್ಯಕ್ರಮ ಪ್ರಾರಂಭಿಸಿದ ಕೆಲವೇ ತಿಂಗಳುಗಳ ನಂತರ, ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ ಬಂತು. ಒಟ್ಟು ಅರಣ್ಯ ಪ್ರದೇಶದ ವಿಷಯದಲ್ಲಿ ಭಾರತ ಒಂಭತ್ತನೇ ಸ್ಥಾನದಲ್ಲಿದೆ ಮತ್ತು ವಾರ್ಷಿಕ ಅರಣ್ಯ ಬೆಳವಣಿಗೆ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದಿತು.

ಪರಿಸರ ಸಚಿವ ಭೂಪೇಂದ್ರ ಯಾದವ್, ಇದಕ್ಕೆ ಮೋದಿ ಸರಕಾರದ ನೀತಿಗಳು ಮತ್ತು ರಾಜ್ಯಗಳು ಕೈಗೊಂಡ ಬೃಹತ್ ಪ್ಲಾಂಟೇಷನ್ ಪ್ರಯತ್ನಗಳು ಕಾರಣ ಎಂದು ಎದೆಯುಬ್ಬಿಸಿ ಹೇಳಿದರು.

ಆದರೆ ವಾಸ್ತವ ಬೇರೆಯೇ ಇದೆ. ಸರಕಾರ ಸಹಜ ಕಾಡುಗಳನ್ನು ಏಕಜಾತಿಯ ಪ್ಲಾಂಟೇಷನ್‌ಗಳ ಜೊತೆ ಸಮೀಕರಿಸುತ್ತಿದೆ.

ಪರಿಸರ ವಿಜ್ಞಾನದ ಪ್ರಕಾರ, ಒಂದೇ ಜಾತಿಯ ನೀಲಗಿರಿ ಅಥವಾ ಅಕೇಶಿಯಾ ಮರಗಳನ್ನು ನೆಡುವುದು ಕಾಡಾಗುವುದಿಲ್ಲ. ಅದು ‘ಹಸಿರು ಮರುಭೂಮಿ’ ಇದ್ದಂತೆ. ಅಲ್ಲಿ ಜೀವವೈವಿಧ್ಯವಿರುವುದಿಲ್ಲ. ಆದರೆ ಸರಕಾರದ ಲೆಕ್ಕದಲ್ಲಿ, ಜೀವವೈವಿಧ್ಯವಿರುವ ನೈಸರ್ಗಿಕ ಕಾಡುಗಳು ನಾಶವಾಗುತ್ತಿದ್ದರೂ, ರಸ್ತೆಬದಿಗಳಲ್ಲಿ ಅಥವಾ ಖಾಲಿ ಭೂಮಿಯಲ್ಲಿ ನೆಟ್ಟ ವಾಣಿಜ್ಯ ಮರಗಳನ್ನು ಸಹ ‘ಕಾಡು’ಗಳೆಂದು ಪರಿಗಣಿಸಿ ಅಂಕಿಅಂಶಗಳನ್ನು ಉಬ್ಬಿಸಲಾಗುತ್ತದೆ.

ದಾಖಲೆಗಳಲ್ಲಿ ಮಾತ್ರ ಹಸಿರೋ ಹಸಿರು. ಆದರೆ ವಾಸ್ತವದಲ್ಲಿ ಶತಮಾನದಷ್ಟು ಹಳೆಯ ಕಾಡುಗಳು ನಾಶವಾಗುತ್ತಿವೆ.

2014-15ರಿಂದ 2023-24 ರ ನಡುವೆ ಕೇಂದ್ರ ಸರಕಾರ 1.74 ಲಕ್ಷ ಹೆಕ್ಟೇರ್ ಅರಣ್ಯವನ್ನು ಕಡಿಯಲು ಅನುಮೋದನೆ ನೀಡಿತು.

ಪ್ರತೀ ವರ್ಷ, ಗ್ರೀನ್ ಕ್ರೆಡಿಟ್ ಕಾರ್ಯಕ್ರಮದಡಿ ಕಂಪೆನಿಗಳಿಗೆ ಬೇರೆಡೆ ಮರಗಳನ್ನು ನೆಡಲು ಅಥವಾ ಗ್ರೀನ್ ಕ್ರೆಡಿಟ್ ಪಡೆಯಲು ಅವಕಾಶ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಅತ್ಯಮೂಲ್ಯವಾದ ನೈಸರ್ಗಿಕ ಕಾಡುಗಳನ್ನು ಕಡಿಯುವುದನ್ನು ಮುಂದುವರಿಸಲಾಗುತ್ತದೆ.

ಗ್ರೀನ್ ಕ್ರೆಡಿಟ್ ಪ್ರೋಗ್ರಾಂ ಆಧುನಿಕ ಪರಿಸರ ಸಂರಕ್ಷಣಾ ಯೋಜನೆಯಂತೆ ದಾಖಲೆಗಳಲ್ಲಿ ಕಂಡುಬಂದರೂ, ವಾಸ್ತವದಲ್ಲಿ ಅದನ್ನು ಅರಣ್ಯ ಸಂರಕ್ಷಣೆಗಿಂತ ಅರಣ್ಯನಾಶಕ್ಕೇ ಹೆಚ್ಚು ಬಳಸಲಾಗುತ್ತಿರುವಂತೆ ಕಾಣುತ್ತಿದೆ.

‘ಅವನತಿ ಹೊಂದಿದ ಕಾಡುಗಳನ್ನು ಮತ್ತೆ ನಿರ್ಮಿಸಬೇಕಿದ್ದ’ ಯೋಜನೆಯೇ, ಈಗ ಅರಣ್ಯ ನಾಶಕ್ಕೆ ಅಡಿಪಾಯವಾಗಿದೆ ಮತ್ತು ಅವುಗಳನ್ನು ಕಾರ್ಪೊರೇಟ್‌ಗಳಿಗೆ ತೆರೆದಿಟ್ಟಿದೆ.

ಗುಜರಾತ್ ಪ್ರಕರಣ ಕೇವಲ ಒಂದು ತಾಂತ್ರಿಕ ದೋಷವಲ್ಲ. ಬದಲಿಗೆ ಸರಕಾರದ ಪರಿಸರ ನೀತಿ ಹೇಗೆ ವ್ಯವಸ್ಥಿತವಾಗಿ ಕಾರ್ಪೊರೇಟ್ ಹಿತಾಸಕ್ತಿಗಳ ಪರವಾಗಿ ವಾಲುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಸ್. ಸುದರ್ಶನ್

contributor

Similar News