ಜೀವ ಭಯ ಹೆಚ್ಚಿಸುವ ಕಬ್ಬು ಸಾಗಣೆ!
ಹುಣಸಗಿ: ನಿಯಮ ಮೀರಿ ಕಬ್ಬು ಹೇರಿಕೊಂಡು ಬರುವ ಟ್ರ್ಯಾಕ್ಟರ್‌ಗಳು ರಸ್ತೆ ಪಕ್ಕ ಸಂಚರಿಸುವ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದು, ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸಕ್ತ ಕಬ್ಬು ನುರಿಸುವ ಹಂಗಾಮು ಆರಂಭವಾದಾಗಿನಿಂದ ಗ್ರಾಮದ ಮೂಲಕ ಸಮೀಪದ ಯರಗಲ್ ಸಕ್ಕರೆ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್‌ಗಳು ನಿಯಮ ಮೀರಿ ಕಬ್ಬು ಹೇರಿಕೊಂಡು ಬರುತ್ತಿವೆ. ಆಗಾಗ ಏಕಾಏಕಿ ಟ್ರ್ಯಾಕ್ಟರ್‌ಗಳು ಹೆಚ್ಚಿದ ತೂಕದಿಂದಾಗಿ ಉರುಳಿ ಬೀಳುತ್ತಿರುವ ಘಟನೆಗಳು ನಡೆಯುತ್ತಿದ್ದು, ಕಡಿವಾಣ ಬೀಳಬೇಕಿದೆ.
ಸರ್ಕಾರದ ನಿಯಮ ಮೀರಿ ಸಾಗಣೆ: ನಾಲತವಾಡ ಭಾಗದ ರಸ್ತೆಗಳು ಹದಗೆಟ್ಟಿವೆ. ಆದರೂ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್ ಮಾಲೀಕರು ಮನಬಂದಂತೆ ಕಬ್ಬು ಹೇರಿಸಿ ಸಾಗಿಸುತ್ತಾರೆ. ಹೀಗಾಗಿ ಟ್ರ್ಯಾಕ್ಟರ್ ಮಾಲೀಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ.
ಮಾಸದ ಅವಘಡಗಳು: ಕಬ್ಬು ಸಾಗಣೆಯ ಟ್ರ್ಯಾಕ್ಟರ್‌ಗಳು ನಗರ ಮತ್ತು ಹಳ್ಳಿಗಳ ಮೂಲಕವೇ ಸಂಚರಿಸುತ್ತವೆ. ಒಮ್ಮೊಮ್ಮೆ ಟ್ರಾಫಿಕ್ ಜಾಮ್ ಸಾಮಾನ್ಯವಾಗಿರುತ್ತದೆ. ಬಹುತೇಕ ವಾಹನಗಳಿಗೆ ಇಂಡಿಕೇಟರ್, ರಿಫ್ಲೆಕ್ಟರ್ ಹಾಗೂ ರೇಡಿಯಂ ಅಂಟಿಸದೆ ಇರುವುದರಿಂದ ಜನರು ಜೀವ ಸಂರಕ್ಷಣೆಗೆ ಹೆಚ್ಚು ಕಾಳಜಿ ವಹಿಸಬೇಕಿದೆ. 2023-24 ರಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 37 ಕಬ್ಬಿನ ಗಾಡಿಗಳ ಅಪಘಾತಗಳಲ್ಲಿ 44 ಜನರು ಮೃತಪಟ್ಟಿದ್ದರೆ, 2024-25ರ ಕಬ್ಬು ನುರಿಸುವ ಹಂಗಾಮಿನಲ್ಲಿ ಒಟ್ಟು 35 ಜನ ಸಾವಿಗೀಡಾಗಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.
ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ವ್ಯಾಪ್ತಿಗಳಲ್ಲಿ 34 ರಸ್ತೆ ಅಪಘಾತಗಳಲ್ಲಿ 26 ಜನ ಮೃತಪಟ್ಟಿದ್ದು, ಮೇಲಿಂದ ಘಟನೆಗಳು ಸಂಭವಿಸುತ್ತಿದ್ದರೂ, ಮುಂಜಾಗ್ರತೆ ವಹಿಸುವಂತೆ ಕಬ್ಬು ಸಾಗಣೆ ವಾಹನ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶ ಪಾಲಿಸುವಂತೆ ಸರ್ಕಾರ, ಅಧಿಕಾರಿಗಳು ಮಾಡಬೇಕಿದೆ ಎನ್ನುತ್ತಾರೆ ಜನರು.