ಮರಳು ಅಭಾವ; ಅನುದಾನಕ್ಕೆ ಕೊಕ್ : ಇಕ್ಕಟ್ಟಿನಲ್ಲಿ ವಸತಿ ಯೋಜನೆ ಫಲಾನುಭವಿಗಳು
ಚಿತ್ತಾಪುರ: ಮನೆ ಛತ್ತಿನ ಹಂತಕ್ಕೆ ತಲುಪಿದೆ. ಪ್ಲಾಸ್ಟರ್ ಮಾಡಲು ಮರಳಿಲ್ಲ. ಕಟ್ಟಡ ಪೂರ್ಣಗೊಳಿಸಲೂ ಆಗುತ್ತಿಲ್ಲ. ಬುಟ್ಟಿ ಮರಳೂ ಕೈಗೆಟುಕುತ್ತಿಲ್ಲ. ವಸತಿ ಯೋಜನೆಯಡಿ ನಿರ್ಮಿಸುವ ನಮ್ಮ ಮನೆಯ ಅನುದಾನ ಹಿಂದಿರುಗುವ ಭೀತಿ ಕಾಡುತ್ತಿದೆ ಎನ್ನುತ್ತಿದ್ದಾರೆ ಫಲಾನುಭವಿಗಳು.
ತಾಲೂಕಿನಲ್ಲಿ ಕಳೆದ 8-10ತಿಂಗಳಿನಿಂದ ಮರಳು ಅಭಾವದಿಂದ ಮನೆ, ವಾಣಿಜ್ಯ ಮಳಿಗೆ ನಿರ್ಮಾಣ ಸೇರಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಪ್ರಧಾನಮಂತ್ರಿ ಆವಾಸ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ,ದೇವರಾಜ ಅರಸು ವಸತಿ ಯೋಜನೆ, ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮರಳಿಗೆ ಪರದಾಡುವಂತಾಗಿದೆ. ಬಹಳಷ್ಟು ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಮರಳಿನ ಕೊರತೆ ತಲೆನೋವಾಗಿ ಪರಿಣ
ಮಿಸಿದೆ. ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ನಿಗಧಿತ ಅವಧಿಯೊಳಗೆ ಮುಗಿಸಬೇಕು. ಇಲ್ಲವಾದಲ್ಲಿ ಸಹಾಯಧನ ಸಿಗದೆ ಅನುದಾನ ವಾಪಸ್ ಹೋಗುವ ಸಾಧ್ಯತೆ ಇರುವುದರಿಂದ ಫಲಾನುಭವಿಗಳು ಕಂಗಾಲಾಗಿದ್ದಾರೆ. ಇನ್ನೊಂದೆಡೆ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಿಕೊಡಲು ಗುತ್ತಿಗೆದಾರರು ಪರದಾಡುತ್ತಿದ್ದಾರೆ.
ಗಣಿಕಾರಿಕೆ ಬಂದ್:
ತಾಲೂಕಿನಲ್ಲಿ ಮರಳು ಕೊರತೆ ಹೆಚ್ಚಾಗಿದೆ. ತಾಲೂಕಿನಲ್ಲೀಗ ಮರಳು ಗಣಿಗಾರಿಕೆ ಬಂದ್ ಇರುವುದರಿಂದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಜನಸಾಮಾನ್ಯರಿಗೆ ನಾನಾ ವಸತಿ ಯೋಜನೆಯಡಿ ಮಂಜೂರಾದ ಮನೆ ಹಾಗೂ ಸ್ವಂತ ಮನೆ ನಿರ್ಮಾಣಕ್ಕೂ ತೊಡಕುಂಟಾಗಿದೆ.
ಮರಳು ಗಣಿಗಾರಿಕೆ ಸ್ಥಗಿತದಿಂದ ಕಟ್ಟಡ ಕಾರ್ಮಿಕರು, ಮರಳು ಸಾಗಣೆದಾರರು, ಟ್ರ್ಯಾಕ್ಟರ್ ಮಾಲೀಕರು, ಟಿಪ್ಪರ್ ಮಾಲೀಕರು ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿದೆ.
ಕಾರ್ಮಿಕರಿಗೆ ಕೆಲಸವಿಲ್ಲ: ಇತ್ತ ಮರಳು ಗಣಿಗಾರಿಕೆ ಸ್ಥಗಿತದಿಂದ ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ. ಸಕಾಲಕ್ಕೆ ಮರಳು ದೊರಕಿದರೆ ಕಟ್ಟಡ ಕಾರ್ಮಿಕರು ದಿನವೂ 400-500 ರೂಪಾಯಿ ಆದಾಯ ಪಡೆಯುತ್ತಿದ್ದೇವು. ಆದಾಯವಿಲ್ಲದೆ ಕಷ್ಟದ ಜೀವನ ಸಾಗಿಸುವಂತಾಗಿದೆ ಎನ್ನುತ್ತಾರೆ ಟ್ರ್ಯಾಕ್ಟರ್, ಟಿಪ್ಪರ್ ಚಾಲಕರು.
ಕ್ರಮ ಕೈಗೊಳ್ಳಿ: ತಾಲೂಕಿನಲ್ಲಿ ಸೃಷ್ಟಿಯಾಗಿರುವ ಕೃತಕ ಮರಳು ಅಭಾವ ತಡೆದು, ತುರ್ತಾಗಿ ಮರಳು ಸಿಗುವಂತಾಗಲು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಖಾಸಗಿ, ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಮರಳಿನ ಪೂರೈಕೆಯಲ್ಲಿ ಆಗಿರುವ ತೀವ್ರ ಕೊರತೆ ಗಮನಹರಿಸಿ, ತಾಲೂಕಿನಲ್ಲಿ ಅಗತ್ಯವಿರುವ ಮರಳನ್ನು ಜಿಲ್ಲಾ ಉಸ್ತುವಾರಿ ಸಮಿತಿ ಗುರುತಿಸಿ ಮುಡಬೂಳ, ಭಾಗೋಡಿ, ದಂಡೋತಿ, ಕಾಟಮದೇವರಹಳ್ಳಿ ಹಾಗೂ ಕದ್ದರಗಿ ಸೇರಿ ವಿವಿಧೆಡೆ ಇರುವ ಬ್ಲಾಕ್‌ಗಳಲ್ಲಿ ಮರಳು ಎತ್ತುವಳಿ ಮಾಡಿ, ಬಹಿರಂಗ ಹರಾಜು ಕರೆದು ಸರ್ಕಾರಿ ಮರಳು ಬ್ಲಾಕ್‌ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕಿದೆ. ಅಲ್ಲದೆ ತಾಲೂಕಿನ ಮರಳನ್ನು ಬೇರೆಡೆ ಸಾಗಿಸದೆ ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿಯ ಕಾಮಗಾರಿ ನಿರ್ವಹಣೆಗೆ ಬಳಸುವಂತೆ ಸೂಚಿಸಬೇಕು ಎಂದು ಮರಳು ಸಾಗಣೆದಾರರು ಆಗ್ರಹಿಸಿದ್ದಾರೆ.
ನಾವು ಮನೆ ಕಟ್ಟಡ ಕೆಲಸ ಮಾಡೋರು. ಕೆಲಸ ಹಿಡಿದ ಮೇಲೆ ಮನೆಯ ಮಾಲೀಕರು ಮರಳಿಲ್ಲ, ಮರಳು ಬಂದ ಮೇಲೆ ಕೆಲಸಕ್ಕೆ ಬನ್ನಿ ಎನ್ನುತ್ತಿದ್ದಾರೆ. ಹೀಗಾಗಿ ಜೀವನ ನಡೆಸುವುದು ತುಂಬ ಕಷ್ಟವಾಗಿದೆ.
-ಮಕ್ಬೂಲ್ ಗೌಂಡಿ (ಮೇಸ್ತ್ರಿ)
ಕಳೆದ ಕೆಲ ದಿನಗಳ ಹಿಂದೆಯೇ ಮರಳು ಎತ್ತುವಳಿ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ವೇ ಪ್ರಾರಂಭಿಸಲಾಗಿದೆ. ವರದಿ ಬಂದ ತಕ್ಷಣ ಜನೇವರಿ ತಿಂಗಳಲ್ಲಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಿಕೊಡಲಾಗುವುದು.
ಸೋಮಶೇಖರ ಎಂ. ಉಪನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ತಾಲೂಕಿನಲ್ಲಿ 8-10 ತಿಂಗಳಿನಿಂದ ಮರಳಿನ ಅಭಾವ ಸೃಷ್ಟಿಯಾಗಿದ್ದು, ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಆದಷ್ಟು ಬೇಗನೆ ಸ್ಥಗಿತ ಆಗಿರುವ ಮರಳು ಬ್ಲಾಕ್‌ಗಳನ್ನು ಪುನಃ ಪ್ರಾರಂಭಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಕಟ್ಟಡ ಕಾರ್ಮಿಕರು, ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರಿಗೆ ಅನುಕೂಲ ಕಲ್ಪಿಸಬೇಕು.
-ರಾಜಶೇಖರ, ಸ್ಥಳೀಯ ನಿವಾಸಿ
ಮನೆ ಕಟ್ಟುವ ಕೆಲಸ ಒಂದು ವರ್ಷದ ಹಿಂದೆ ಶುರು ಮಾಡಿದ್ದೇವೆ. ಆದರೆ ಇಲ್ಲಿಯವರೆಗೆ ಮುಗಿಯುತ್ತಿಲ್ಲ. ಮನೆ ಕಟ್ಟಲು ಮರಳು ಖಾಲಿ ಆಗಿದೆ. ಹೆಚ್ಚು ದುಡ್ಡು ಕೊಟ್ಟರೂ ಸಿಗುತ್ತಿಲ್ಲ.
-ಶೈಬಾಝ್, ಮನೆ ಕಟ್ಟಡ ಮಾಲೀಕ