ಬೇಸಿಗೆಯಲ್ಲಿ ದಾಹ ತಣಿಸುವ ಅರವಟ್ಟಿಗೆ; ಮಲ್ಲಿಕಾರ್ಜುನ ಎನ್. ಈಟೆ ಸೇವೆಗೆ ಮೆಚ್ಚುಗೆ
ಯಾದಗಿರಿ: ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ನಗರಕ್ಕೆ ವಿವಿಧ ಕೆಲಸಗಳಿಗಾಗಿ ಬರುವ ರೈತರು, ಕೂಲಿ ಕಾರ್ಮಿಕರು ಹಾಗೂ ಶಾಲಾ ಮಕ್ಕಳ ದಾಹ ತಣಿಸಲು ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಯಾದಗಿರಿ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಎನ್. ಈಟೆ ಅವರ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಳೆದ ಆರು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ನಿರಂತರವಾಗಿ ಅರವಟ್ಟಿಗೆ (ಉಚಿತ ಕುಡಿಯುವ ನೀರು) ವ್ಯವಸ್ಥೆ ಮಾಡುತ್ತಾ ತಣ್ಣೀರು ಒದಗಿಸುತ್ತಿರುವ ಅವರು, ನಗರಕ್ಕೆ ಬರುವ ಬಡಜನರ ದಾಹ ತಣಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬಿಸಿಲಿನ ತಾಪದಲ್ಲಿ ದೂರದ ಗ್ರಾಮಗಳಿಂದಕೆಲಸದ ನಿಮಿತ್ತ ನಗರಕ್ಕೆ ಬರುವ ರೈತರು, ಕೂಲಿ ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಇಲ್ಲಿ ನೀರು ಕುಡಿದು ಸ್ವಲ್ಪ ವಿಶ್ರಾಂತಿ ಪಡೆದು ತಮ್ಮ ದಾರಿಯನ್ನು ಮುಂದುವರಿಸುತ್ತಿದ್ದಾರೆ.
ಮಾನವೀಯತೆ ಮತ್ತು ಸಮಾಜ ಸೇವೆಯ ಮನೋಭಾವದಿಂದ ಈ ಕಾರ್ಯವನ್ನು ಮುಂದುವರಿಸುತ್ತಿರುವ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರ ಕಷ್ಟವನ್ನು ಅರಿತು ಇಂತಹ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವುದು ಶ್ಲಾಘನೀಯವಾಗಿದ್ದು, ಇತರರೂ ಇದರಿಂದ ಪ್ರೇರಣೆ ಪಡೆಯಬೇಕು ಎಂದು ನಾಗರಿಕರು ತಿಳಿಸಿದ್ದಾರೆ. ಬೇಸಿಗೆ ಸಮಯದಲ್ಲಿ ದಾಹದಿಂದ ಬಳಲುವವರಿಗೆ ಉಚಿತವಾಗಿ ಕುಡಿಯುವ ನೀರು ನೀಡುವುದು ಪುಣ್ಯದ ಕಾರ್ಯವಾಗಿದ್ದು, ಮಲ್ಲಿಕಾರ್ಜುನ ಎನ್. ಈಟೆ ಅವರ ಈ ಸೇವೆ ಮುಂದುವರಿಯಲಿ ಎಂದು ಸಾರ್ವಜನಿಕರು ಆಶಿಸಿದ್ದಾರೆ.
ಪ್ರತಿ ವರ್ಷ ಮಲ್ಲಿಕಾರ್ಜುನ ಎನ್. ಈಟೆ ಅವರು ಅರವಟ್ಟಿಗೆ ನೀರಿನ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಇದರಿಂದ ನಡೆದುಕೊಂಡು ಹೋಗುವ ಶಾಲೆಯ ಮಕ್ಕಳು ಹಾಗೂ ಕಾರ್ಮಿಕರು ನೀರು ಕುಡಿದು ದಾಹ ತಣಿಸಿಕೊಂಡು ಹೋಗುತ್ತಾರೆ.
-ಶಿವಕುಮಾರ ಬೆಳಗುಂದಿ
ಅಂಬೇಡ್ಕರ್ ನಗರ ನಿವಾಸಿ
ಬೇಸಿಗೆ ಕಾಲದಲ್ಲಿ ದಾಹ ತಣಿಸಲು ಅರವಟ್ಟಿಗೆ ಮೂಲಕ ನೀರು ನೀಡುವುದು ಬಹಳ ಪುಣ್ಯದ ಕಾರ್ಯ. ಇಂತಹ ಸೇವೆಗಳು ಸಮಾಜಕ್ಕೆ ಪ್ರೇರಣೆ ನೀಡುತ್ತವೆ.
-ರಮೇಶ್ ಸುಂಗಲಕರ್, ನಗರ ನಿವಾಸಿ
ಸಣ್ಣ ಸೇವೆಯಾದರೂ ಜನರಿಗೆ ಉಪಯೋಗವಾಗುವ ಸೇವೆ ಅದು ದೊಡ್ಡ ಸೇವೆಯೇ. ಇತ್ತೀಚಿನ ದಿನಗಳಲ್ಲಿ ದಾನ-ಧರ್ಮ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಗಳು ಶ್ಲಾಘನೀಯ.
-ಬಸವರಾಜ ಹುಂಡೆಕಲ್ಲ್
ಪ್ರತಿ ವರ್ಷವೂ ಉಚಿತ ಕುಡಿಯುವ ನೀರಿನ ಸೇವೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಶಾಲಾ ಮಕ್ಕಳು ಹಾಗೂ ಕಾರ್ಮಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ನೀರು ಕುಡಿದು ಹೋಗುತ್ತಾರೆ. ಇದು ನಿಜಕ್ಕೂ ಪುಣ್ಯದ ಕೆಲಸ.
-ಸಂತೋಷ ಚಟ್ಟೇರಕರ್, ನಿವಾಸಿ