ಆಹಾರದ ಗುಣಮಟ್ಟ ಕುಸಿತ: ತಗ್ಗಿದ ಕುಕನೂರಿನ ಇಂದಿರಾ ಕ್ಯಾಂಟೀನ್ ಜನಪ್ರಿಯತೆ
ಕುಕನೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ (ವಾರ್ಡ್ ನಂ.18) ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಹೊಸ ಮೆನು ಜಾರಿಯಾಗದೇ ಇರುವುದರಿಂದ ಹಾಗೂ ಆಹಾರದ ಗುಣಮಟ್ಟ-ರುಚಿ ಕುಸಿತದ ಆರೋಪಗಳ ಹಿನ್ನೆಲೆಯಲ್ಲಿ ಜನಸಂದಣಿ ಗಣನೀಯವಾಗಿ ಕಡಿಮೆಯಾಗಿದೆ. ಆರಂಭದ ದಿನಗಳಲ್ಲಿ ಉತ್ತಮ ಸ್ಪಂದನೆ ಪಡೆದಿದ್ದ ಈ ಕೇಂದ್ರದಲ್ಲಿ ಈಗ ಕಡಿಮೆ ಜನ ಬರುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಡಜನತೆ, ಕೂಲಿ-ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ ಇಂದಿರಾ ಕ್ಯಾಂಟೀನ್ ಆರಂಭದಲ್ಲಿ ಮೆಚ್ಚುಗೆ ಪಡೆದಿತ್ತು. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಪ್ರಯತ್ನದಿಂದ ಮೇ 27,2025ರಂದು ಸ್ಥಾಪಿತವಾದ ಈ ಕೇಂದ್ರವು ಹಸಿದ ಹೊಟ್ಟೆಗೆ ಆಶ್ರಯವಾಗಿತ್ತು.
ಆದರೆ ನಿರ್ವಹಣಾ ಲೋಪದಿಂದ ಯೋಜನೆಯ ಉದ್ದೇಶ ನಿಧಾನವಾಗಿ ಹಿನ್ನಡೆಯಾಗುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ವಾರದ ಏಳು ದಿನ ವಿಭಿನ್ನ ಉಪಾಹಾರ ಮತ್ತು ಊಟ ನೀಡುವಂತೆ ಹೊಸ ಮೆನು ಸಿದ್ಧಪಡಿಸಿ ಚಾರ್ಟ್ ಅಳವಡಿಸಲಾಗಿತ್ತು. ಬೆಳಗ್ಗೆ ಇಡ್ಲಿ-ಉಪ್ಮಾ, ಮಧ್ಯಾಹ್ನ ಮತ್ತು ರಾತ್ರಿ ಮುದ್ದೆ ಅಥವಾ ಚಪಾತಿ ಸೇರಿದಂತೆ ವಿವಿಧ ಪದಾರ್ಥಗಳನ್ನು ನೀಡುವುದಾಗಿ ಪ್ರಕಟಿಸಲಾಗಿತ್ತು. ಆದರೆ ಪ್ರಾಯೋಗಿಕವಾಗಿ ಹಳೆಯ ಪದ್ಧತಿಯೇ ಮುಂದುವರಿದಿದ್ದು, ‘‘ಚಾರ್ಟ್‌ನಲ್ಲಿ ಹೊಸ ಮೆನು ಇದ್ದರೂ ಅಡುಗೆಮನೆಯಲ್ಲಿ ಅದು ಜಾರಿಯಾಗುತ್ತಿಲ್ಲ’’ ಎಂಬುದು ಸ್ಥಳೀಯರ ಆರೋಪ.
ಹೊಸ ಮೆನು ಜಾರಿಯಾಗದಿರುವುದು, ಆಹಾರದ ಗುಣಮಟ್ಟ-ರುಚಿ ಕುಸಿತ, ಸ್ವಚ್ಛತೆಯ ಕೊರತೆ, ಆರ್‌ಒ ಘಟಕದ ದುರಸ್ತಿ ವಿಳಂಬ, ಸಿಸಿ ಕ್ಯಾಮೆರಾ ಕಾರ್ಯನಿರತವಿಲ್ಲದಿರುವುದು ಹಾಗೂ ಟೋಕನ್ ವಿತರಣಾ ವ್ಯವಸ್ಥೆ ಸ್ಥಗಿತಗೊಂಡಿರುವುದು ಸೇರಿದಂತೆ ಹಲವು ಸಮಸ್ಯೆಗಳು ಮುಂದುವರಿದಿವೆ. ತರಕಾರಿ ಮತ್ತು ದಿನಸಿ ಸಾಮಗ್ರಿಗಳ ಕೊರತೆ, ಹೆಗ್ಗಣಗಳ ಕಾಟ ಹಾಗೂ ನೀರಿನ ಸೋರಿಕೆ ಸಮಸ್ಯೆಗಳು ಆಹಾರ ನೈರ್ಮಲ್ಯ ಬಗ್ಗೆ ಆತಂಕ ಹೆಚ್ಚಿಸಿವೆ ಎಂದು ಸ್ಥಳೀಯರು ದೂರಿದ್ದಾರೆ.
ಯೋಜನೆಯ ಮೂಲ ಉದ್ದೇಶ ಸಾರ್ಥಕವಾಗಬೇಕಾದರೆ ತಕ್ಷಣವೇ ಹೊಸ ಮೆನು ಅನುಷ್ಠಾನ, ಆಹಾರದ ಗುಣಮಟ್ಟ ಸುಧಾರಣೆ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಿಸಿದ ಗುತ್ತಿಗೆದಾರರೊಂದಿಗೆ ಮಾತನಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಯಾವುದೇ ತಾತ್ಸಾರ ನಡೆಯದಂತೆ ನೋಡಿಕೊಳ್ಳಲಾಗುವುದು.
-ನಾಗೇಶ, ಮುಖ್ಯಾಧಿಕಾರಿ, ಪ.ಪಂ
ಆರಂಭದಲ್ಲಿ ಊಟದ ಗುಣಮಟ್ಟ ಚೆನ್ನಾಗಿತ್ತು. ಪ್ರತಿದಿನವೂ ಜನಸಂದಣಿ ಇರುತ್ತಿತ್ತು. ಈಗ ಮೆನು ಸರಿಯಾಗಿ ಜಾರಿಯಾಗುತ್ತಿಲ್ಲ, ರುಚಿಯೂ ಕಳೆದುಕೊಳ್ಳುತ್ತಿದೆ.
-ಶಿವಪ್ಪ ಗೋರ್ಲೆಕೊಪ್ಪ, ರೈತ
ಕಡಿಮೆ ದರದಲ್ಲಿ ಸಿಗುವುದರಿಂದ ಇಲ್ಲಿ ಬರುತ್ತಿದ್ದೆವು. ಆದರೆ ಗುಣಮಟ್ಟ ಕುಸಿದಿದೆ. ಹೊಸ ಮೆನು ಜಾರಿಯಾದರೆ ಉತ್ತಮ.
-ಲಕ್ಷ್ಮಿ, ವಿದ್ಯಾರ್ಥಿನಿ
ಕೆಲ ದಿನಗಳಲ್ಲಿ ಊಟ ಸಮರ್ಪಕವಾಗಿಲ್ಲ. ಸ್ವಚ್ಛತೆ ಮೇಲೂ ಹೆಚ್ಚಿನ ಗಮನ ಕೊಡಬೇಕು.
-ಹನುಮಂತಪ್ಪ , ಕೂಲಿ ಕಾರ್ಮಿಕ