×
Ad

ಹಿಂದೂ-ಮುಸ್ಲಿಂ ಸೌಹಾರ್ದದ ಸಂಕೇತ ನಂದಿಹಳ್ಳಿ ಮುಹರಂ

Update: 2026-06-25 15:04 IST

ಯಾದಗಿರಿ: ಮುಹರಂ ಹಬ್ಬ ಎಂದರೆ ಸಾಮಾನ್ಯವಾಗಿ ಧಾರ್ಮಿಕ ಆಚರಣೆ ಎಂಬ ಭಾವನೆ ಮೂಡುತ್ತದೆ. ಆದರೆ, ಶಹಾಪುರ ತಾಲೂಕಿನ ನಂದಿಹಳ್ಳಿ (ಜೆ) ಗ್ರಾಮದಲ್ಲಿ ಆಚರಿಸಲಾಗುವ ಮುಹರಂ ಹಬ್ಬ ಧಾರ್ಮಿಕ ಆಚರಣೆಯನ್ನು ಮೀರಿ ಹಿಂದೂ-ಮುಸ್ಲಿಮ್ ಸೌಹಾರ್ದ, ಸಹಬಾಳ್ವೆ ಮತ್ತು ಭಾವೈಕ್ಯದ ಸಂಕೇತವಾಗಿ ಆಚರಿಸಲಾಗುತ್ತಿದೆೆ.

ಈ ಗ್ರಾಮದಲ್ಲಿ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಗ್ರಾಮಸ್ಥರೆಲ್ಲರೂ ಒಂದೇ ಕುಟುಂಬದವರಂತೆ ಸೇರಿ ಹಬ್ಬ ಆಚರಿಸುವುದು ವಿಶೇಷವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮುಹರಂ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ನಂದಿಹಳ್ಳಿ (ಜೆ) ಗ್ರಾಮದಲ್ಲಿನ ಆಚರಣೆ ತನ್ನದೇ ಆದ ಸಂಪ್ರದಾಯ ಮತ್ತು ವೈಶಿಷ್ಟ್ಯ ಹೊಂದಿದೆ.

ಮುಹರಂ ಹಬ್ಬ ಬಂದರೆ ಸಾಕು, ಇಡೀ ಗ್ರಾಮ ಸಂಭ್ರಮದಲ್ಲಿ ಮುಳುಗುತ್ತದೆ. ಎಲ್ಲ ಸಮುದಾಯದ ಜನರು ಒಂದೇ ಕುಟುಂಬದ ಸದಸ್ಯರಂತೆ ಹಬ್ಬದ ಸಿದ್ಧತೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಬ್ಬದ ಪ್ರತಿಯೊಂದು ಆಚರಣೆಯಲ್ಲೂ ಎರಡೂ ಸಮುದಾಯದವರು ಸಮಾನವಾಗಿ ಪಾಲ್ಗೊಳ್ಳುವುದು ಈ ಗ್ರಾಮದ ವಿಶೇಷತೆ.

ಮುಹರಂ ಸಂದರ್ಭದಲ್ಲಿ ಬೇಡಿಕೊಂಡ ಹರಕೆಗಳು ಈಡೇರಿದ ಬಳಿಕ ಭಕ್ತರು ಮುಹರಂ ತಿಂಗಳ ಏಳನೇ ದಿನದಂದು ದೇವರಿಗೆ ಹರಕೆ ಸಲ್ಲಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ಯುವಕರು ಬಣ್ಣಬಣ್ಣದ ವೇಷಭೂಷಣ ಧರಿಸಿ, ಕಾಲಿಗೆ ಗೆಜ್ಜೆ ಕಟ್ಟಿ ಮುಹರಂ ಪದಗಳನ್ನು ಹಾಡುತ್ತಾ ಅಲಾಯಿ ಕುಣಿಯುವ ದೃಶ್ಯ ನೋಡುಗರ ಗಮನ ಸೆಳೆಯುತ್ತದೆ. ಈ ಅಪರೂಪದ ಆಚರಣೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಗ್ರಾಮಸ್ಥರು ಆಗಮಿಸುತ್ತಾರೆ.

ಏಳನೇ ದಿನದ ಆಚರಣೆ ಮುಗಿದ ಬಳಿಕ ಒಂಬತ್ತನೇ ದಿನವನ್ನು ‘ಕತಲ್ ರಾತ್ರಿ’ ಎಂದು ಆಚರಿಸಲಾಗುತ್ತದೆ. ಆ ದಿನ ರಾತ್ರಿ ಇಡೀ ಯುವಕರು ಹೆಣ್ಣು ವೇಷ ಧರಿಸಿ ಅಲಾಯಿ ಕುಣಿಯುತ್ತಾರೆ. ಕರಡಿ ವೇಷ ತೊಟ್ಟು ಕುಣಿಯುವುದು ವಿಶೇಷ ಆಕರ್ಷಣೆಯಾಗಿರುತ್ತದೆ. ಬಳಿಕ ಮುಂಜಾನೆ ಸುಮಾರು 3 ಗಂಟೆಗೆ ದೇವರ ಸವಾರಿ ನಡೆಯುತ್ತದೆ. ಈ ಸಂದರ್ಭದಲ್ಲಿ ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ತಮ್ಮ ಕಷ್ಟ-ಕಾರ್ಪಣ್ಯಗಳು ದೂರವಾಗಲೆಂದು ದೇವರಲ್ಲಿ ಹೇಳಿಕೆ ಕೇಳುತ್ತಾರೆ. ಇಲ್ಲಿಯವರೆಗೆ ದೇವರ ಹೇಳಿಕೆ ಸುಳ್ಳಾಗಿಲ್ಲ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ಈ ಮುಹರಂ ಹಬ್ಬದಲ್ಲಿ ಅಗ್ನಿಕುಂಡಕ್ಕೆ ವಿಶೇಷ ಮಹತ್ವವಿದೆ. ಅಗ್ನಿ ಹಚ್ಚುವ ದಿನ ಸುಮಾರು ನಾಲ್ಕೈದು ಟ್ರಾಕ್ಟರ್‌ಗಳಷ್ಟು ಕರಿಜಾಲಿ ಹಾಗೂ ಇತರ ಹಸಿ ಕಟ್ಟಿಗೆಗಳನ್ನು ಸಂಗ್ರಹಿಸಲಾಗುತ್ತದೆ. ‘ದೇವರ ಮಕ್ಕಳು’ ಎಂದು ಕರೆಯಲ್ಪಡುವ ಅಳ್ಳೆಬುಕ್ಕರು ರಸ್ತಾಪುರ ಬೆಟ್ಟಕ್ಕೆ ಪಾದಯಾತ್ರೆ ಮಾಡಿ ಹಸಿ ಬಿಟ್ಟಲ್ ಮರದ ಕಟ್ಟಿಗೆ ತರುವುದು ಇಲ್ಲಿನ ಸಂಪ್ರದಾಯ. ಇಚ್ಛಲ ಪರ್ಕಿಯನ್ನೂ ಈ ಅಗ್ನಿಕುಂಡಕ್ಕೆ ತರುತ್ತಾರೆ.

ಹಸಿ ಕಟ್ಟಿಗೆಗಳನ್ನೇ ಬಳಸಿ ಅಗ್ನಿ ಹಚ್ಚುವುದು ಇಲ್ಲಿನ ಅಪರೂಪದ ಆಚರಣೆಯಾಗಿದೆ. ಅದೇ ದಿನ ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನ ದೇವರು ಹಾಗೂ ಅಳ್ಳೆಬುಕ್ಕರು ಅಗ್ನಿ ಪ್ರವೇಶ ಮಾಡುವ ಸಂಪ್ರದಾಯವೂ ನಡೆಯುತ್ತದೆ.

ನಮ್ಮ ಊರಿನ ಮುಹರಂ ಹಬ್ಬ ಯುವಕರ ಹಬ್ಬವಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಶಾಂತಿಯುತವಾಗಿ ಹಬ್ಬ ಆಚರಿಸುತ್ತಾರೆ. ಇದೇ ನಮ್ಮ ಗ್ರಾಮದ ವಿಶೇಷತೆ.

-ವೀರಣ್ಣಗೌಡ, ದಳಪತಿ

ಮುಹರಂ ಹಬ್ಬ ಬಂತು ಅಂದರೆ ನಮ್ಮ ಗ್ರಾಮಕ್ಕೆ ನಾಡಹಬ್ಬ ಬಂದಂತಾಗುತ್ತದೆ. ಎಲ್ಲ ಸಮುದಾಯದ ಜನರು ಒಂದಾಗಿ ಹಬ್ಬ ಆಚರಿಸುವುದು ನಮಗೆ ಹೆಮ್ಮೆಯ ಸಂಗತಿ.

-ಗುನ್ನಪ್ಪಗೌಡ, ಮಾಲೀಪಾಟೀಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ

contributor

Similar News