×
Ad

ಸಮಾಜ ವಿಜ್ಞಾನ ತಾತ್ಸಾರ ದೇಶದ ಶಿಕ್ಷಣ ತತ್ತರ

Update: 2026-06-25 12:14 IST

ಉದ್ಯೋಗವೇ ಶಿಕ್ಷಣದ ಗುರಿ ಎಂಬ ಭರಾಟೆಯ ಭ್ರಮೆಯಲ್ಲಿ ಮುಳುಗಿರುವ ಇಂದಿನ ಭಾರತದಲ್ಲಿ ಲಲಿತ ಕಲೆ ಮತ್ತು ಸಮಾಜ ವಿಜ್ಞಾನ ವಿಷಯಗಳಾದ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಸಾಹಿತ್ಯ ಮತ್ತು ತತ್ವಜ್ಞಾನದಂತಹ ವಿಷಯಗಳು ತೀವ್ರ ಕಡೆಗಣನೆ ಮತ್ತು ಉದಾಸೀನಕ್ಕೆ ಗುರಿಯಾಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯದಿಂದ ಮರೆಯಾಗಿ, ನಾಶವಾಗುತ್ತಿದೆ. ಭಾರತದ ಶಿಕ್ಷಣದ ದುಸ್ಥಿತಿಗೆ ಒಂದು ಪ್ರಮುಖ ಕಾರಣ, ಸಮಾಜ ವಿಜ್ಞಾನ ವಿಷಯಗಳು ವೈಜ್ಞಾನಿಕ ಚಿಂತನೆಗೆ ಮತ್ತು ಆವಿಷ್ಕಾರಗಳಿಗೆ ವಿರೋಧಾಭಾಸಗಳಾಗಿವೆ ಎಂಬುದು ಮಿಥ್ಯ ಮತ್ತು ಅವೈಜ್ಞಾನಿಕ ಕಲ್ಪನೆ. ಸಮಾಜ ವಿಜ್ಞಾನ ವಿಷಯಗಳು ವೈಜ್ಞಾನಿಕ ಅನ್ವೇಷಣೆ, ವಿಶ್ಲೇಷಣೆ, ತಾತ್ವಿಕ ಮತ್ತು ನೈತಿಕ ಚಿಂತನೆಗಳಿಗೆ ಮೂಲ ಪ್ರೇರಕ ಮತ್ತು ಪೂರಕ ಶಕ್ತಿಗಳಾಗಿ ಸಮಗ್ರ ಮಾನವ ವಿಕಾಸಕ್ಕೆ ಅಡಿಪಾಯಗಳಾಗಿವೆ.

ಶೈಕ್ಷಣಿಕ ಪಾಲುದಾರರು ಹೇಗೆ ಸಮಾಜ ವಿಜ್ಞಾನ ವಿಷಯಗಳ ನಾಶಕ್ಕೆ ಕಾರಣೀಭೂತರಾಗಿದ್ದಾರೆ ಎಂಬುದಕ್ಕೆ ಇಲ್ಲಿದೆ ಒಂದು ನಿದರ್ಶನ - ಈಗ ತಾನೇ ಹತ್ತನೇ ತರಗತಿಗೆ ಕಾಲಿಟ್ಟಿರುವ ರಾಜು, ಚಿಕ್ಕವಯಸ್ಸಿನಿಂದಲೇ ಸಾಹಿತ್ಯ, ಕಲೆ ಮತ್ತು ಸಮಾಜ ವಿಜ್ಞಾನದಲ್ಲಿ ತುಂಬು ಆಸಕ್ತಿ ಹೊಂದಿ ಶೈಕ್ಷಣಿಕ ಸಾಧನೆಯಲ್ಲಿ ಮಂಚೂಣಿಯಲ್ಲಿದ್ದನು. ಆದರೆ ಹತ್ತನೇ ತರಗತಿಯ 2ನೇ ತಿಂಗಳಲ್ಲಿ ಸಮಾಜ ವಿಜ್ಞಾನ ಮತ್ತು ಭಾಷೆಗಳಲ್ಲಿ ಆತನ ಅಂಕಗಳು ಸಂಪೂರ್ಣ ಕುಸಿದಿದ್ದನ್ನು ಕಂಡು ಆತನ ಭಾಷಾ ಮತ್ತು ಸಮಾಜ ವಿಜ್ಞಾನ ಶಿಕ್ಷಕರಿಗೆ ಗಾಬರಿಯಾಯಿತು. ವಿಷಯಕ್ಕೆ ಮೂಲ ಕಾರಣವನ್ನು ಭೇದಿಸಿದ ಶಿಕ್ಷಕರಿಗೆ ಆತನ ನಿರಾಸಕ್ತಿಗೆ ಕಾರಣ ಇದು - ಅವನ ತಂದೆ ಅವನನ್ನು ಹತ್ತನೇ ತರಗತಿಯ ಶೈಕ್ಷಣಿಕ ವರ್ಷದ ಮೊದಲ ತಿಂಗಳಲ್ಲೇ ಮಂಗಳೂರಿನ ಒಂದು ಪ್ರತಿಷ್ಠಿತ ವಿಜ್ಞಾನ ಕಾಲೇಜಿಗೆ ವಿಜ್ಞಾನ ಪ್ರಥಮ ಪಿಯುಸಿಗೆ ಅರ್ಧ ಶುಲ್ಕವನ್ನು ಬರಿಸಿ ಸೀಟ್ ಬುಕ್ ಮಾಡುತ್ತಾರೆ. ಕಾಲೇಜಿನವರು ಆತ ವೃತ್ತಿಪರ ಕೋರ್ಸ್, ಮೆಡಿಸನ್ ಅಥವಾ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಮಾಡುವುದರಿಂದ ವಿಜ್ಞಾನ ವಿಷಯದ ಅಂಕಗಳು ಮಾತ್ರ ಸಾಕು, ಭಾಷೆ ಮತ್ತು ಸಮಾಜ ವಿಜ್ಞಾನದ ಅಂಕಗಳು ಬೇಕಾಗಿಲ್ಲ, ಅವುಗಳಿಗೆ ಕನಿಷ್ಠ ಗಮನವಿದ್ದರೆ ಸಾಕು ಎಂದು ‘ಕೌನ್ಸೆಲಿಂಗ್’ ಮಾಡುತ್ತಾರೆ. ಸಮಾಜ ವಿಜ್ಞಾನ, ಸಾಹಿತ್ಯ ಮತ್ತು ಕಲೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಚಿವುಟುದಕ್ಕೆ ಇದೊಂದು ಜ್ವಲಂತ ನಿದರ್ಶನ.

ಈ ಉದಾಹರಣೆಯಲ್ಲಿ ಬೌದ್ಧಿಕ ವಿಕಾಸದಲ್ಲಿ ಸಮಾಜ ವಿಜ್ಞಾನದ ಪಾತ್ರದ ತಾತ್ಸಾರ ಕಂಡುಬರುತ್ತದೆ.

ಮಾನಸಿಕ ಮತ್ತು ಸಾಮಾಜಿಕ ಪೂರ್ವಾಗ್ರಹಗಳ ವಿನಾಶ ವೈಜ್ಞಾನಿಕ ತಾತ್ವಿಕ ದರ್ಶನಕ್ಕೆ ತಳಹದಿ. ಕಲೆ ಮತ್ತು ಸಮಾಜ ವಿಜ್ಞಾನದ ಅಧ್ಯಯನವು ಪೂರ್ವಾಗ್ರಹ ವಿನಾಶದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವೈಜ್ಞಾನಿಕ ವಿಶ್ಲೇಷಣೆಯು ಕೇವಲ ತಾಂತ್ರಿಕ ಸಾಮರ್ಥ್ಯದಿಂದ ಆಗದು. ಅದಕ್ಕೆ ತಾತ್ವಿಕ ಮತ್ತು ಸಾಮಾಜಿಕ ಚೌಕಟ್ಟಿನ ಪರಿಕಲ್ಪನೆಯೂ ಬೇಕು. ವಿದ್ಯಾರ್ಥಿಯು ಸಮಾಜ ವಿಜ್ಞಾನ, ಕಲೆ ಮತ್ತು ಸಾಹಿತ್ಯ ಅಧ್ಯಯನದಿಂದ ಈ ಸಾಮರ್ಥ್ಯಗಳನ್ನು ಪಡೆದುಕೊಳ್ಳುತ್ತಾನೆ. ಅವುಗಳು ತಾತ್ವಿಕ ಮತ್ತು ನೈತಿಕ ವಿಶ್ಲೇಷಣೆ, ಸಾಮಾಜಿಕ ಸಹಾನುಭೂತಿ, ಸಾಮಾಜಿಕ ಜ್ಞಾನಗಳ ಸಂಕೀರ್ಣ ಸಂಬಂಧವನ್ನು ಅರ್ಥೈಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಭಾಷಾ ಮತ್ತು ಸಮಾಜ ವಿಜ್ಞಾನದ ತಾತ್ಸಾರವು ASER (2024) ವಾರ್ಷಿಕ ವರದಿಯಲ್ಲಿ ಕಂಡುಬರುತ್ತದೆ. ಅದರ ಪ್ರಕಾರ ಮೂರನೇ ತರಗತಿಯ ಶೇ. 24 ವಿದ್ಯಾರ್ಥಿಗಳು ಎರಡನೇ ತರಗತಿಯ ಪಠ್ಯಪುಸ್ತಕಗಳನ್ನು ಓದಲಾರರು. ವರದಿಯ ಪ್ರಕಾರ ವಿದ್ಯಾರ್ಥಿಗಳು ಮೂಲಭೂತ ಶೈಕ್ಷಣಿಕ ಸಾಮರ್ಥ್ಯದಿಂದ ವಂಚಿತರಾಗುತ್ತಿದ್ದಾರೆ.

ಸದೃಢ ಭಾಷಾ ಮತ್ತು ಸಂವಹನ ಸಾಮರ್ಥ್ಯವು ಎಲ್ಲಾ ವಿಷಯಗಳ, ಗಣಿತ ಮತ್ತು ವಿಜ್ಞಾನವು ಸೇರಿದಂತೆ, ಕಲಿಕೆಗೆ ಬುನಾದಿ. ಯಾವುದೇ ವಿಷಯದ ಸತ್ಯದ ಗ್ರಹಿಕೆಗೆ, ವಿಶ್ಲೇಷಣಾತ್ಮಕ ಸಾಮರ್ಥ್ಯಕ್ಕೆ ಭಾಷಾ ಸಾಮರ್ಥ್ಯ ಮತ್ತು ಸಮಾಜ ವಿಜ್ಞಾನದ ಮೂಲ ತತ್ವಗಳ ಗ್ರಹಿಕೆ ಮತ್ತು ಅರಿವು ಬಹು ಮುಖ್ಯ. ಭಾಷಾ ಮತ್ತು ಸಮಾಜ ವಿಜ್ಞಾನದ ಮೂಲಭೂತ ಚಿಂತನೆಯ ಅರಿವು ಇಲ್ಲದೆ ವಿಜ್ಞಾನವನ್ನು ಅರಗಿಸಿಕೊಳ್ಳುವುದು ಕಷ್ಟ.

ಸಾಮಾಜಿಕ ಮತ್ತು ವೈಯಕ್ತಿಕ ಸಾಮರ್ಥ್ಯಗಳ (social and soft skills) ವೃದ್ಧಿಗೆ ಭಾಷಾಶಾಸ್ತ್ರ ಮತ್ತು ಸಮಾಜ ವಿಜ್ಞಾನ ಮೂಲಾಧಾರ.

21ನೇ ಶತಮಾನದ ಜಾಗತಿಕ ಸವಾಲನ್ನು ಎದುರಿಸಿ ದೇಶ ಕಟ್ಟಲು, ಉದ್ಯೋಗ ಸಾಮರ್ಥ್ಯಗಳ ವೃದ್ಧಿಗೆ ಕೇವಲ ತಾಂತ್ರಿಕ ಡಿಗ್ರಿಗಳು ಮಾತ್ರ ಸಾಲದು ಎಂದು ಮನಗಂಡ ದೇಶದ ಪ್ರತಿಷ್ಠಿತ ಮದ್ರಾಸ್ ಮತ್ತು ದಿಲ್ಲಿ ಐಐಟಿಗಳು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ವಿಷಯಗಳೊಂದಿಗೆ ಸಮಾಜ ವಿಜ್ಞಾನ ವಿಷಯಗಳನ್ನು ವಿಶೇಷ ವಿಷಯಗಳಾಗಿ ಕೂಡ ಕಲಿಯಲು ಅನುವು ಮಾಡಿಕೊಟ್ಟಿವೆ. ಇದು ಆಧುನಿಕ ಸವಾಲುಗಳಾದ ಹವಾಮಾನ ಅಸಮತೋಲನ, ವಿಕೃತ ನಗರೀಕರಣ, ಸಾರ್ವಜನಿಕ ಅನಾರೋಗ್ಯ ಸವಾಲುಗಳು, ಸುಸ್ಥಿರ ಅಭಿವೃದ್ಧಿ ಸ್ಥಾಪನೆ, ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನಗಳಂತಹ ಸಮಸ್ಯೆಗಳಿಗೆ ತೀಕ್ಷ್ಣ ಉತ್ತರವನ್ನು ಹುಡುಕುವುದರಲ್ಲಿ ಸಹಾಯಕವಾಗುತ್ತವೆ. ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ಮನಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಆರ್ಥಿಕ ತಜ್ಞರು ಹೀಗೆ ಒಟ್ಟಿಗೆ ಸೇರಿ ಚಿಂತನ ಮಂಥನಗಳಿಂದ ತಯಾರು ಮಾಡಿದ ನೀತಿಗಳಿಂದ, ಬಹು ವಿಷಯ ಅಂತರ್ಜ್ಞಾನ ಮಾತ್ರ ಜ್ವಲಂತ ಆಧುನಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯುವುದು ಸಾಧ್ಯ.

ಇಂದಿನ ಜಾಗತಿಕ ಶೈಕ್ಷಣಿಕ ಸ್ವರೂಪವು ಅಂತಹ ವಿಷಯಗಳ ವಿನಿಮಯ- ಸಂವಾದ ಸಂಯೋಗದ ಮೂಲಕವೇ ಹೊರತು, ವಿಷಯಗಳ ವಿಯೋಗಗಳ ಮೂಲಕ ಅಲ್ಲ. ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಸ್ವರೂಪವು ಇದೇ ಆಗಿದೆ. ಅವಿಷ್ಕಾರ, ಸಮಸ್ಯೆಯ ಪರಿಹಾರಗಳು ಕೇವಲ ತಾಂತ್ರಿಕ ಪರಿಣತಿಯಿಂದ ಮಾತ್ರ ಸಾಲದು. ತಾಂತ್ರಿಕ ನೈಪುಣ್ಯ, ಸಂವಹನ ಸಾಮರ್ಥ್ಯ, ತಾತ್ವಿಕ ವೈಚಾರಿಕತೆ, ಸಾಮಾಜಿಕ ಅರಿವು, ಮನುಷ್ಯರ ಮನಸ್ಸು ಮತ್ತು ಸಮಾಜವನ್ನು ಒಳಹೊಕ್ಕು ಅರ್ಥೈಸುವ, ಗ್ರಹಿಸುವ ಸಾಮರ್ಥ್ಯವೂ ಬೇಕು. ಆದ್ದರಿಂದಲೇ ಸಮಾಜ ವಿಜ್ಞಾನ ಮತ್ತು ಮೂಲವಿಜ್ಞಾನವು ಪರಸ್ಪರ ಪೂರಕವೇ ಹೊರತು, ವಿರೋಧಾತ್ಮಕ ವಿಷಯಗಳಲ್ಲ.

ಶಾಲೆಗಳಲ್ಲಿ ಸಮಾಜ ವಿಜ್ಞಾನಗಳ ತಾತ್ಸಾರ, ಅವುಗಳನ್ನು ಎರಡನೆಯ ದರ್ಜೆಯ ವಿಷಯಗಳ ರೀತಿಯಲ್ಲಿ ಬೋಧಿಸುವುದು, ವಿಶ್ವವಿದ್ಯಾನಿಲಯಗಳಲ್ಲಿ ಸಮಾಜ ವಿಜ್ಞಾನದ ವಿಭಾಗಗಳನ್ನು ನಿಧಾನವಾಗಿ ಮುಚ್ಚುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕ, ಸದೃಢ ಶಿಕ್ಷಣವಿಲ್ಲದಿದ್ದರೆ ನಮ್ಮ ದೇಶವು ವಿದೇಶಿ ತಂತ್ರಜ್ಞಾನಕ್ಕೆ ಅಂಗಲಾಚ ಬೇಕಾಗುತ್ತದೆ.

ಸಮಾಜ ವಿಜ್ಞಾನವು ಅನುಭಾವಿ ಕಲಿಕೆಯನ್ನು ವೃದ್ಧಿಸಿ, ಪಡೆದ ಶೈಕ್ಷಣಿಕ ಜ್ಞಾನ ಮತ್ತು ಸಮಾಜದ ಸಮಸ್ಯೆಗಳೊಂದಿಗೆ ಸಂಪರ್ಕ ಮೂಡಿಸಿ ಶಿಕ್ಷಣಕ್ಕೆ ಪ್ರಸ್ತುತತೆಯನ್ನು ಕಲ್ಪಿಸುತ್ತದೆ. ಇಂತಹ ಶಿಕ್ಷಣವು ವಿಚಾರವಂತ, ವೈಚಾರಿಕ ಪ್ರಜೆಗಳನ್ನು ತಯಾರಿಸಿ ದೇಶದ ಸಮಸ್ಯೆಯನ್ನು ಪರಿಹರಿಸುವ ಸೂತ್ರವನ್ನೂ, ಸಂಜೀವಿನಿಯನ್ನೂ ನೀಡುತ್ತದೆ. ಇದಲ್ಲದೆ ಒಮ್ಮುಖ ಶಿಕ್ಷಣ ಎಂದಿಗೂ ಗೊಡ್ಡು ಶಿಕ್ಷಣವೇ ಆಗುತ್ತದೆ.

ಒಟ್ಟಾರೆ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳ ಕಡೆಗಣನೆ ವಿಜ್ಞಾನದ ಬೆಳವಣಿಗೆಗೆ ಮತ್ತು ದೇಶದ ಅಭಿವೃದ್ಧಿಗೆ ಪೂರಕವಲ್ಲ, ಮಾರಕ. ಅವುಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿಂತ ನಿಕೃಷ್ಟ ವಿಷಯಗಳೆಂದು ಪರಿಗಣಿಸದೆ ಶಿಕ್ಷಣ ಸಂಸ್ಥೆಗಳು ವಿಮರ್ಶಾತ್ಮಕ ಚಿಂತನೆ, ಸಂವಹನ, ನೈತಿಕ ಪ್ರಜ್ಞೆ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಇವು ವಹಿಸುವ ಉತ್ಕೃಷ್ಟ ಪಾತ್ರವನ್ನು ಮನಗಾಣಬೇಕು. ಆದ್ದರಿಂದ ಭವಿಷ್ಯದ ಶಿಕ್ಷಣದ ಮಹತ್ವವು ಸಮಾಜ ವಿಜ್ಞಾನ, ಮಾನವಿಕ ವಿಷಯ, ವಿಜ್ಞಾನ ಮತ್ತು ತಾಂತ್ರಿಕ ಶಾಸ್ತ್ರಗಳ ಯಾಂತ್ರಿಕ ವಿಭಜನವಾಗದೆ, ವಿಷಯಗಳ ಸಂಯೋಗದ ಮೇಲೆ ಆಧಾರಿತವಾಗಿರಬೇಕು. ಇದೇ ಸಮಾಜದ, ಮನುಷ್ಯನ, ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಮೂಲಾಧಾರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಶಂಕರ ಕೆ.ಸಿ.

contributor

ಸಂಸ್ಥಾಪಕ ಕಾರ್ಯದರ್ಶಿ, ಕುವೆಂಪು ವಿದ್ಯಾನಿಕೇತನ, ಚಿಕ್ಕಮಗಳೂರು

Similar News